ದಾಂಡೇಲಿ : ಅದ್ಭುತ ನೆನಪಿನ ಶಕ್ತಿಯ ಮೂಲಕ ಇಂಡಿಯಾ ಬುಕ್ ಆಫ್ ರೆಕಾಡ್ಸ್ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡ ನಗರದ ಮೂರುವರೆ ವರ್ಷದ ಅನೋಷ್ ರೋಹಿತ್ ಸ್ವಾಮಿ ಪುಟಾಣಿಗೆ ಮಂಗಳವಾರ ನಗರದ ಸಂತೋಷ್ ಹೋಟೆಲ್ ಸಭಾಭವನದಲ್ಲಿ ಸನ್ಮಾನಿಸಲಾಯಿತು.
ಪುಟಾಣಿ ಅನೋಷ್ ರೋಹಿತ್ ಸ್ವಾಮಿ ಹಾಗೂ ಮಗುವಿನ ತಂದೆ ತಾಯಿಯನ್ನು ಸನ್ಮಾನಿಸಿ ಮಾತನಾಡಿದ ಜಿಲ್ಲಾ ಅಲ್ಪಸಂಖ್ಯಾತ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ದಾದಾಪೀರ್ ನದಿಮುಲ್ಲಾ ಅವರು ಪುಟಾಣಿ ಅನೋಷ್ ರೋಹಿತ್ ಸ್ವಾಮಿ ಅಪೂರ್ವ ಸಾಧನೆಯ ಮೂಲಕ ದಾಂಡೇಲಿಗೆ ಕೀರ್ತಿ ತಂದಿದ್ದಾನೆ. ಅನೋಷನ ಈಗಿನ ಸಾಧನೆಯೆ ಪ್ರೇರಣಾದಾಯಿಯಾಗಿ ಮುಂದಿನ ದಿನಗಳಲ್ಲಿ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಸಾಧನೆ ಮಾಡಲು ಸ್ಪೂರ್ತಿಯಾಗಲಿದೆ. ಪುಟ್ಟ ಮಗುವಿನ ಈ ಸಾಧನೆಗೆ ನಾವು ನೀವೆಲ್ಲರೂ ಮನಪೂರ್ವಕವಾಗಿ ಆಶೀರ್ವಾದವನ್ನು ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲಿ ಪುಟಾಣಿ ಅನೋಷ್ ಮತ್ತು ಆತನ ತಂದೆ ರೋಹಿತ್ ಸ್ವಾಮಿ ಮತ್ತು ತಾಯಿ ಮರ್ಲಿನ್ ಅವರನ್ನು ದಾದಾಪೀರ್ ನದಿಮುಲ್ಲಾ ಹಾಗೂ ಇನ್ನಿತರರು ಗೌರವಪೂರ್ವಕವಾಗಿ ಸನ್ಮಾನಿಸಿದರು.
ಸನ್ಮಾನಕ್ಕೆ ಕೃತಜ್ಞತೆಯನ್ನು ಸಲ್ಲಿಸಿ ಮಾತನಾಡಿದ ಅನೋಷ್ ಈತನ ತಂದೆ ರೋಹಿತ್ ಸ್ವಾಮಿ ಅವರು ಮೂರುವರೆ ವರ್ಷದ ಪ್ರಾಯದಲ್ಲಿ ನಮ್ಮ ಮಗು ಬುಕ್ ಆಫ್ ಇಂಡಿಯಾ ರೆಕಾರ್ಡ್ಸ್ ಮಾಡಿರುವುದು ನಮಗೆ ಅತೀವ ಆನಂದ ತಂದಿದೆ. ಅದೇ ರೀತಿ ಇಂದು ನಮ್ಮ ಮಗುವನ್ನು ಆಶೀರ್ವದಿಸಿ, ಸನ್ಮಾನಿಸಿರುವುದು ಸಹ ಅಷ್ಟೇ ಆನಂದವಾಗಿದೆ ಎಂದು ಹೇಳಿ, ಮಗುವಿನ ಬೆಳವಣಿಗೆಯಲ್ಲಿ ಬಹು ಮುಖ್ಯವಾಗಿ ಪಾಲಕರ ಆದ್ಯ ಕರ್ತವ್ಯಗಳ ಬಗ್ಗೆ ಇದೇ ಸಂದರ್ಭದಲ್ಲಿ ವಿವರಣೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಮುರ್ತುಜಾ ಆನೆಹೊಸೂರು, ಎಂ.ಬಿ.ಅಪ್ಪನಗೌಡರ್, ಎಸ್.ಎಸ್.ಹಿರೇಮಠ, ಶಿವಪ್ಪ ನಾಯ್ಕ, ಎಸ್.ಎಂ.ಪಾಟೀಲ್, ತುಕರಾಮ್ ಪರಸೋಜಿ, ದಾವಲ್ ಸಾಬ್ ನೀರಲಗಿ, ನೀಲಾ ಮಾದರ, ಕರ್ಣಮ್ಮ ಕೊಂಡಟ್ಟಿ, ಅನೋಷ್ ಈತನ ಅಜ್ಜ, ಅಜ್ಜಿಯರು, ಕುಟುಂಬಸ್ಥರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.