ಅಘನಾಶಿನಿ,ಶರಾವತಿ ದಡದಲ್ಲಿ ಕೇಳಿಬರಲಿದೆ ರಾಮಾಯಣ ಕಲರವ
ಹೊನ್ನಾವರ: ಜಿಲ್ಲೆಯ ಎರಡು ಪ್ರಮುಖ ನದಿ ದಡದ ಊರುಗಳಲ್ಲಿ ಶ್ರೀರಾಮಾಯಣ ಕುರಿತಾದ ತಾಳಮದ್ದಳೆ ಪ್ರಸಂಗ ಸರಣಿ ರಾಮ, ರಾಮ, ಶ್ರೀರಾಮ ಪ್ರಸಂಗಗಳ ಭಾವ ಭಾಷಾ ವಿಲಾಸ ಜುಲೈ ೬ರಿಂದ ೧೪ರ ತನಕ ಒಂಬತ್ತು ದಿನಗಳ ಕಾಲ ರಾಮಾಯಣ ಕಲರವ ಕೇಳಲಿದೆ ಎಂದು ನಾಟ್ಯಶ್ರೀ ಯಕ್ಷಕಲಾ ಪ್ರತಿಷ್ಠಾನದ ಅಧ್ಯಕ್ಷ ಎಸ್.ಜಿ.ಭಟ್ಟ ಕಬ್ಬಿನಗದ್ದೆ ತಿಳಿಸಿದರು.
ಅವರು ಪಟ್ಟಣದಲ್ಲಿ ಸುದ್ದಿಗೋಷ್ಟಿ ನಡೆಸಿ, ಪದ್ಮಶ್ರೀ ಪುರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಷಷ್ಟ್ಯಬ್ಧಿ ವೇಳೆ ಹುಟ್ಟಿದ ಸಂಸ್ಥೆಗೆ ಬೆಳ್ಳಿ ಹಬ್ಬದ ಸಂಭ್ರಮವಾಗಿದೆ. ಇದರ ಆಚರಣೆಯನ್ನು ಭಾವ ಭಾಷಾ ವಿಲಾಸದ ಮೂಲಕ ನಡೆಸುತ್ತಿದ್ದೇವೆ ಎಂದರು.
ಶ್ರೀರಾಮ ಪಾತ್ರದಲ್ಲಿ ಪ್ರಸಿದ್ಧ ಅರ್ಥಧಾರಿ, ಹವ್ಯಕ ಮಹಾ ಮಂಡಲದ ಅಧ್ಯಕ್ಷ, ಸೆಲ್ಕೋ ಇಂಡಿಯಾದ ಸಿಇಓ ಮೋಹನ ಭಾಸ್ಕರ ಹೆಗಡೆ ಹೆರವಟ್ಟ ಅವರು ಒಂಬತ್ತೂ ದಿನ ಕಥಾನಕ ಕಟ್ಟಿಕೊಡಲಿದ್ದಾರೆ. ಭಾವದಲ್ಲಿ ಪಾತ್ರ ಚಿತ್ರಣ ಕಟ್ಟಿಕೊಡುವ ವಾಗ್ಮಿ ಮೋಹನ ಹೆಗಡೆ ಅವರು ಅಷ್ಟೂ ದಿನ ಬಿಡುವು ಮಾಡಿಕೊಂಡು ರಾಮನ ಪಾತ್ರ ನಿರ್ವಹಣೆಗೆ ಒಪ್ಪಿಕೊಂಡಿದ್ದು ವಿಶೇಷವಾಗಿದೆ. ಈ ಸರಣಿ ಕಾರ್ಯಕ್ರಮದ ಸಿದ್ಧತೆಗೆ ಸಮಿತಿ ಕೂಡ ರಚಿಸಿಕೊಂಡು ಕೆಲಸ ಮಾಡಲಾಗುತ್ತಿದೆಎಂದರು.
೭ ಸ್ಥಳ, ೯ ಪ್ರಸಂಗ!:
ಒಂಬತ್ತು ದಿನ ಏಳು ಸ್ಥಳದಲ್ಲಿ ತಾಳಮದ್ದಳೆ ಸರಣಿ ನಡೆಯಲಿದೆ. ಪ್ರಥಮ ದಿನ ಹೊನ್ನಾವರ ಅಗ್ರಹಾರದ ಗಣಪತಿ ದೇವಸ್ಥಾನದಿಂದ ಆರಂಭವಾಗಲಿದ್ದು, ಎಂಟೂ ದಿನ ಸಂಜೆ ೫ರಿಂದ ೮:೩೦ರ ತನಕ ನಡೆಯಲಿದೆ. ಧರ್ಮದರ್ಶಿಗಳಾದ ಡಾ. ಜಿ.ಜಿ.ಸಭಾಹಿತರು, ಹಿರಿಯ ಯಕ್ಷಗಾನ ಕಲಾವಿದ ಕೃಷ್ಣ ಯಾಜಿ ಬಳಕೂರು ಉದ್ಘಾಟಿಸಲಿದ್ದಾರೆ.
ಪ್ರಥಮ ದಿನ ಸಿದ್ದಾಶ್ರಮ- ಮಿಥಿಲೆ ಪ್ರಸಂಗದಿಂದ ಸರಣಿ ಆರಂಭವಾಗಲಿದೆ. ಹಿಮ್ಮೇಳದಲ್ಲಿ ಸರ್ವೇಶ್ವರ ಮುರೂರು, ಗಜಾನನ ಭಂಡಾರಿ, ಅರ್ಥದಾರಿಗಳಾಗಿ ಡಾ. ಜಿ.ಎಲ್.ಹೆಗಡೆ ಕುಮಟಾ, ಬಾಲಕೃಷ್ಣ ಭಟ್ಟ, ಜಿ.ವಿ.ಹೆಗಡೆ, ಕೆ.ವಿ.ಹೆಗಡೆ, ಅಂಬಾ ಪ್ರಸಾದ ಐತಾಳ ಭಾಗವಹಿಸುವರು.
ಎರಡನೇ ದಿನ ಜು.೭ರಂದು ಕರ್ಕಿ ದೈವಜ್ಞ ಮಠದಲ್ಲಿ ಅಯೋಧ್ಯಾ ತಾಳಮದ್ದಳೆ ನಡೆಯಲಿದೆ. ಹಿಮ್ಮೇಳದಲ್ಲಿ ಶಂಕರ ಬ್ರಹ್ಮೂರು, ದತ್ತಾರಾಮ ಭಟ್ಟ, ಅರ್ಥಧಾರಿಗಳಾಗಿ ವಿ.ಉಮಾಕಾಂತ ಭಟ್ಟ ಕೆರೇಕೈ, ವಿ.ಗಣಪತಿ ಸಂಕದಗುಂಡಿ, ಲಕ್ಷ್ಮೀಕಾಂತ ಕೊಂಡದಕುಳಿ, ಸುಜಾತ ದಂಟಕಲ್ ಭಾಗವಹಿಸುವರು.
ಅಶೋಕೆಯಲ್ಲಿ ಚಿತ್ರಕೂಟ!:
ಜು.೮ರಂದು ಗೋಕರ್ಣದ ಅಶೋಕೆಯಲ್ಲಿ ಮಧ್ಯಾಹ್ನ ೧ರಿಂದ ಚಿತ್ರಕೂಟ ತಾಳಮದ್ದಲೆ ನಡೆಯಲಿದೆ. ಹಿಮ್ಮೇಳದಲ್ಲಿ ರಾಮಕೃಷ್ಣ ಹಿಲ್ಲೂರು, ಎನ್.ಜಿ.ಹೆಗಡೆ ಭಾಗವಹಿಸುವರು. ಅರ್ಥಧಾರಿಗಳಾಗಿ ಪವನ್ ಕಿರಣಕೆರೆ, ಜಿ.ವಿ.ಹೆಗಡೆ, ಶಂಕರ ನೀಲ್ಕೋಡು ಭಾಗವಹಿಸುವರು.
ಜು.೯ರಂದು ಕೋಣಾರೆ ಮಹಾವಿಷ್ಣು ದೇವಸ್ಥಾನದಲ್ಲಿ ಪಂಚವಟಿ ತಾಳಮದ್ದಳೆ ನಡೆಯಲಿದ್ದು, ಹಿಮ್ಮೇಳದಲ್ಲಿ ಸೃಜನ್ ಗುಂಡೂಮನೆ, ನೃಸಿಂಹ ಮುರೂರು ಭಾಗವಹಿಸುವರು.ಅರ್ಥಧಾರಿಗಳಾಗಿ ಡಾ.ಜಿ.ಎಲ್.ಹೆಗಡೆ, ಸವಿತಾ ಹಿರೇಮನೆ, ಸುಬ್ರಹ್ಮಣ್ಯ ಮೂರೂರು, ಚಂದ್ರಕಲಾ ಭಟ್ಟ ಭಾಗವಹಿಸುವರು. ೧೦, ೧೧ರಂದು ಕಿಷ್ಕಿಂದಾ ಹಾಗೂ ಕನಕ ಲಂಕಾ ಪ್ರಸಂಗ ಮುರ್ಡೇಶ್ವರದ ಆಚಾರ್ಯ ಸಭಾಂಗಣದಲ್ಲಿ ನಡೆಯಲಿದೆ. ೧೦ಕ್ಕೆ ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಪರಮೇಶ್ವರ ಭಂಡಾರಿ, ಅರ್ಥಧಾರಿಗಳಾಗಿ ವಾಸುದೇವ ರಂಗಾ ಭಟ್ಟ, ಡಾ. ಜಿ.ಕೆ.ಹೆಗಡೆ, ರಾಮಚಂದ್ರ ಕೊಂಡದಕುಳಿ ಭಾಗವಹಿಸುವರು. ೧೧ರಂದು ಗೋಪಾಲಕೃಷ್ಣ ಜೋಗಿಮನೆ, ಪಿ.ಕೆ.ಹೆಗಡೆ ಹಿಮ್ಮೇಳದಲ್ಲಿ, ವಾಸುದೇವ ರಂಗಾ ಭಟ್ಟ, ರಾಮಚಂದ್ರ ಕೊಂಡದಕುಳಿ, ಸೀತಾರಾಮ ಚಂದು, ನಾರಾಯಣ ಯಾಜಿ ಅರ್ಥಧಾರಿಗಳಾಗಿ ಭಾಗವಹಿಸುವರು.
೧೨, ೧೩ರಂದು ಮೇಲಿನ ಖರ್ವಾ ದೇವಸ್ಥಾನದಲ್ಲಿ ಸಾಕೇತ ಹಾಗೂ ತಮಸಾ ತೀರ ತಾಳಮದ್ದಳೆ ನಡೆಯಲಿದ್ದು, ಸರ್ವೇಶ್ವರ ಮುರೂರು, ಅನಂತ ಪಾಠಕ್ ಹಿಮ್ಮೇಳದಲ್ಲಿ, ಅಂಬಾಪ್ರಸಾದ ಪಾತಾಳ, ನಾರಾಯಣ ಯಾಜಿ, ಪ್ರಸಾದ ಭಟಕಳ, ವಿ.ಪ್ರಸನ್ನ ಮಾಗೋಡು ಭಾಗವಹಿಸುವರು. ೧೩ರಂದು ಕೊಳಗಿ, ಪರಮೇಶ್ವರ ಭಂಡಾರಿ ಹಿಮ್ಮೇಳದಲ್ಲಿ, ಅರ್ಥಧಾರಿಗಳಾಗಿ ವಿ.ಕೆರೇಕೈ, ಪ್ರಸಾದ ಭಟಕಳ, ಚಂದ್ರಕಲಾ ಭಟ್ಟ, ಶ್ರೀಧರ ಕಾಸರಕೋಡ ಭಾಗವಹಿಸಲಿದ್ದಾರೆ.
ಅಮ್ಮನ ಸನ್ನಿಧಾನದಲ್ಲಿ ಸರಯೂತೀರ!
ಸರಣಿಯ ಕೊನೇ ದಿನ ಜು.೧೪ರಂದು ಕರಿಕಾನ ಪರಮೇಶ್ವರಿ ದೇವಸ್ಥಾನದಲ್ಲಿ ಸರಯೂ ತೀರ ತಾಳಮದ್ದಲೆ ನಡೆಯಲಿದ್ದು, ಅಲ್ಲೇ ಸಮಾರೋಪಗೊಳ್ಳಲಿದೆ. ಗೋಪಾಲಕೃಷ್ಣ ಜೋಗಿಮನೆ, ಪಿ.ಕೆ.ಹೆಗಡೆ ಹಿಮ್ಮೇಳದಲ್ಲಿ, ರಾಧಾಕೃಷ್ಣ ಕಲ್ಚಾರ್, ಜಿ.ಕೆ.ಹೆಗಡೆ, ಸುಬ್ರಹ್ಮಣ್ಯ ಮುರೂರು ಅರ್ಥಧಾರಿಗಳಾಗಿ ಭಾಗವಹಿಸಲಿದ್ದಾರೆ.
ಪ್ರತಿ ದಿನವೂ ಒಬ್ಬೊಬ್ಬ ಸಾಧಕರು ದೀಪ ಬೆಳಗಿಸಲಿದ್ದು, ರಜತ ಗೌರವ ಹಾಗೂ ಪ್ರಸಂಗದ ಬಳಿಕ ಒಂದೈದು ನಿಮಿಷ ಅವಲೋಕನ ಕೂಡ ನಡೆಸಲಾಗುತ್ತದೆ. ಕಾರ್ಯಕ್ರಮಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೂಡ ಜೊತೆಯಾಗಿದೆ ಎಂದರು.
ಈ ವೇಳೆ ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೋ.ಎಸ್.ಶಂಭು ಭಟ್ಟ, ಪ್ರಮುಖರಾದ ಡಾ. ಜಿ. ಜಿ.ಸಭಾಹಿತ, ಕೆ.ಜಿ.ಹೆಗಡೆ ಅಪ್ಸರಕೊ..ಎ, ವಕೀಲ ಜಗದೀಶ ಭಟ್ಟ, ಎಸ್.ಜಿ.ಭಟ್ಟ, ಕಾರ್ಯದರ್ಶಿ ಕೆ.ವಿ.ಹೆಗಡೆ ಇತರರು ಇದ್ದರು.
ನವ ದಿನ, ನವ ರಾಮ, ೬೫ಕ್ಕೂ ಅಧಿಕ ಕಲಾವಿದರು!
ಒಂಬತ್ತು ದಿನ, ಒಂಬತ್ತು ಪ್ರದೇಶ, ಒಂಬತ್ತು ರಾಮನ ಪಾತ್ರದ ಸುತ್ತ ಹೆಣೆಯಲಾದ ತಾಳಮದ್ದಳೆಯಲ್ಲಿ ಒಟ್ಟೂ ೬೫ಕ್ಕೂ ಅಧಿಕ ಹಿರಿ ಕಿರಿಯ ಕಲಾವಿದರು, ಮಹಿಳಾ ಕಲಾವಿದರೂ ಭಾಗವಹಿಸಲಿದ್ದಾರೆ. ಯಕ್ಷಗಾನದ ಹೆಚ್ಚು ಕಲಾವಿದರು, ಕಲಾಸಕ್ತರು ಒಳಗೊಂಡ ಎರಡು ನದಿ ದಡದ ಊರುಗಳಲ್ಲಿ ಈ ‘ಮಾತಿ’ನ ‘ಮಂಟಪ’ದಲ್ಲಿ ಶ್ರೀರಾಮ ಕಥಾನಕ ಬಿಚ್ಚಿಕೊಳ್ಳಲಿದೆ. ಇದಕ್ಕೆ ಕಲಾಸಕ್ತರೇ ಬೆನ್ನೆಲುಬು. ನಮ್ಮ ಸಂಸ್ಥೆಗೂ ಇಂಥದೊಂದು ಸರಣಿ ನಡೆಸುವದರಲ್ಲಿ ಹೆಮ್ಮೆ ಇದೆ.–
ಎಸ್.ಜಿ.ಭಟ್ಟ, ಕಬ್ಬಿನಗದ್ದೆ, ಅಧ್ಯಕ್ಷರು, ಪ್ರತಿಷ್ಠಾನ
ಚಾರಿತ್ರಿಕ ದಾಖಲೆ; ಶ್ರೀಗಳಿಂದ ಸನ್ಮಾನ:
ಶ್ರೀರಾಮನ ಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆಯ ಸಂಭ್ರಮದಲ್ಲಿ ಇದ್ದಾಗಲೇ ಶ್ರೀ ರಾಮನ ಕುರಿತಾಗಿ ಒಬ್ಬರೇ ೯ ದಿನ ಪಾತ್ರ ಮಾಡುವದೂ ಒಂದು ದಾಖಲೆ. ಇಂಥ ಕಾರ್ಯಕ್ಕೆ ೯ ದಿನ ಶ್ರೀರಾಮನ ಪಾತ್ರ ಮಾಡುವಲ್ಲಿ ಒಪ್ಪಿದ, ಈ ಮೂಲಕ ಚಾರಿತ್ರಿಕ ದಾಖಲೆಗೆ ಕಾರಣರಾಗುತ್ತಿರುವ ಹೆಮ್ಮೆಯ ಕಲಾವಿದರಾದ ಮೋಹನ ಭಾಸ್ಕರ ಹೆಗಡೆ ಅವರನ್ನು ಶ್ರೀರಾಮನ ಆರಾಧಕರು, ಶ್ರೀ ರಾಮಚಂದ್ರಾಪುರ ಮಠದ ಮಠಾಧೀಶರಾದ ಜಗದ್ಗುರು ಶ್ರೀರಾಘವೇಶ್ವರ ಭಾರತೀ ಮಹಾ ಸ್ವಾಮೀಜಿಗಳು ಸನ್ಮಾನಿಸಲಿದ್ದಾರೆ. ಗೋಕರ್ಣದ ಅಶೋಕೆಯಲ್ಲಿ ಜು.೮ರಂದು ಮಧ್ಯಾಹ್ನ ೧ರಿಂದ ಈ ಕಾರ್ಯಕ್ರಮ ನಡೆಯಲಿದೆ.–
ಪ್ರೋ. ಎಸ್.ಶಂಭು ಭಟ್ಟ, ಗೌರವಾಧ್ಯಕ್ಷರು
ಸಾಧಕರಿಗೆ ಸನ್ಮಾನ
ಒಂಬತ್ತು ದಿನ ಆಯಾ ಕ್ಷೇತ್ರದ ಸಾಧಕರನ್ನು ನಾಟ್ಯಶ್ರೀ ರಜತ ಸಂಭ್ರಮದ ಹಿನ್ನಲೆಯಲ್ಲಿ ಗೌರವಿಸಲಾಗುತ್ತಿದೆ.
ಡಾ. ಐ.ಆರ್.ಭಟ್ಟ ಮುರ್ಡೇಶ್ವರ, ನಾಗವೇಣಿ ಹೆಗಡೆ ಕೆರೆಮನೆ, ಪ್ರಭಾಕರ ಹೆಗಡೆ ಚಿಟ್ಟಾಣಿ, ಗೋಪಾಲಕೃಷ್ಣ ಭಾಗವತ ಯಕ್ಷರಂಗ, ಸುಬ್ರಾಯ ಭಾಗವತ ಕೆಪ್ಪೆಕೆರೆ, ಶಿವಾನಂದ ಕೆರೆಮನೆ, ಮಂಜುನಾಥ ಭಂಡಾರಿ, ವಿಷ್ಣು ಭಟ್ಟ ನೀಲ್ಕೋಡು, ಸುಬ್ರಹ್ಮಣ್ಯ ಹೆಗಡೆ ಮುರೂರು ಅವರನ್ನು ಗೌರವಿಸಲಾಗುತ್ತಿದೆ.
-ಕೆ.ವಿ.ಹೆಗಡೆ, ಕಾರ್ಯದರ್ಶಿ