ಹೊನ್ನಾವರ: ಶ್ರೀ ಚೆನ್ನಕೇಶವ ಪ್ರೌಢಶಾಲೆ, ಕರ್ಕಿ ಮತ್ತು ಜ್ಞಾನ ಪ್ರೊ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಪಿ.ವಿ.ಹಾಸ್ಯಗಾರ ವಿಜ್ಞಾನ ಮತ್ತು ಗಣಿತ ಪ್ರಯೋಗಾಲಯ ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು.
ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಪತ್ರಕರ್ತರಾದ ಜಿ.ಯು.ಭಟ್ಟ, ಹೊನ್ನಾವರ ಇವರು ‘ನನ್ನ ಪ್ರೀತಿಯ ಗುರುಗಳಾದ ಪಿ.ವಿ. ಹಾಸ್ಯಗಾರರ ನೆನಪಿನಲ್ಲಿವಿಜ್ಞಾನ ಮತ್ತು ಗಣಿತ ಪ್ರಯೋಗಾಲಯ ಉದ್ಘಾಟನೆ ಮಾಡಿರುವುದಕ್ಕೆ ಹರ್ಷ ವ್ಯಕ್ತಪಡಿಸುತ್ತಾ, ಅದರ ಪರಿಪೂರ್ಣ ಉಪಯೋಗವನ್ನು ವಿದ್ಯಾರ್ಥಿಗಳು ಪಡೆಯುವಂತಾಗಬೇಕು ಎಂದರು. ಕಲಿತ ಶಾಲೆಗೆ ಮಕ್ಕಳು ದೊಡ್ಡವರಾದ ಮೇಲೆ ದಾನ ನೀಡುವುದರ ಮೂಲಕ ಸಮಾಜ ಕಟ್ಟುವ ಗುಣ ಸಂಪಾದಿಸಬೇಕು ಎಂದು ಕಿವಿ ಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ದಾನಿಗಳು ಮತ್ತು ವಿಜ್ಞಾನಿಗಳಾದ ಡಾ. ಸುರೇಂದ್ರ ಕುಲಕರ್ಣಿ ಸಮಯ ಪರಿಪಾಲನೆ ಯಶಸ್ಸಿನ ಮೊದಲ ಗುಟ್ಟು ಎಂದು ತಿಳಿಸುತ್ತಾ ಪ್ರಯೋಗಾಲಯ ದೈವಿ ಸಂಕಲ್ಪ ಎಂಬಂತೆ ಪಿ.ವಿ. ಹಾಸ್ಯಗಾರರು ಸ್ವರ್ಗಸ್ತರಾದ ದಿನದಂದೇ ಅವರ ಹೆಸರಿನಲ್ಲಿ ಪ್ರಯೋಗಾಲಯ ಉದ್ಘಾಟನೆ ಆಗುತ್ತಿರುವುದು ಸಂತೋಷ ತಂದಿದೆ ಎಂದರು. ಪ್ರಯೋಗಾಲಯದ ಸಫಲತೆ ಮುಂದಿನ ಪರೀಕ್ಷೆಯ ಫಲಿತಾಂಶಗಳಲ್ಲಿ ಪ್ರತಿಫಲಿಸುವಂತಾಗಬೇಕು ಎಂದು ಕಿವಿಮಾತು ಹೇಳಿದರು. ಜ್ಞಾನ ಪ್ರೊ ಸಂಸ್ಥಾಪಕರಾದ ಮತ್ತು ಪ್ರಯೋಗಾಲಯದ ಮಾರ್ಗದರ್ಶಕರಾದ ಡಾ. ಸುಪ್ರೀತ್ ಕಿಟ್ಟನಕೆರೆ ಮಾತನಾಡಿ ಆಳವಾದ ಜ್ಞಾನ ಗಳಿಕೆಗೆ ಪ್ರಯೋಗಾಲಯ ಸಹಕಾರಿಯಾಗಿದೆ. ಆದರೆ ಅದರ ಸಂಪೂರ್ಣ ಬಳಕೆಯನ್ನು ವಿದ್ಯಾರ್ಥಿಗಳು ಉತ್ಸಾಹದಿಂದ ಪಡೆದುಕೊಂಡಾಗ ಮಾತ್ರ ಜ್ಞಾನ ಸಂಪಾದನೆ ಪರಿಪೂರ್ಣವಾಗುತ್ತದೆ ಎಂದರು. ಉಪ ನಿರ್ದೇಶಕರು, ಅಭಿವೃದ್ಧಿ ಮತ್ತು ಡಯಟ್ ಪ್ರಾಚಾರ್ಯರಾದ ಶ್ರೀ ಎನ್.ಜಿ.ನಾಯಕ ಮಾತನಾಡಿ ಪ್ರಯೋಗಾಲಯದ ಸ್ಥಾಪನೆಗೆ ಸಹಕರಿಸಿದ ಎಲ್ಲಾ ದಾನಿಗಳನ್ನು ಇಲಾಖೆ ಪರವಾಗಿ ಅಭಿನಂದಿಸುತ್ತಾ, ಪ್ರಯೋಗಾಲಯದಲ್ಲಿ ಬಳಸುವ ವಸ್ತುಗಳ ಪರಿಪೂರ್ಣ ಬಳಕೆ ವಿದ್ಯಾರ್ಥಿಗಳಿಗೆ ಸಿಗುವಂತಾಗಲು ಶಿಕ್ಷಕರು ಶ್ರಮಿಸಬೇಕು ಎಂದರು.
ಪ್ರಯೋಗಾಲಯದ ಪ್ರವರ್ತಕರು, ಮಾರ್ಗದರ್ಶಕರು ಮತ್ತು ದಾನಿಗಳನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಮತಿ ಉಷಾ ಹಾಸ್ಯಗಾರರು ಹಳ್ಳಿಯ ಭಾಗದ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಾದ ತಮಗೆಲ್ಲ ಇಂತಹ ಆಧುನಿಕ ಸೌಲಭ್ಯ ಸಿಗುತ್ತಿರುವುದು ಸಂತೋಷದಾಯಕ. ಇದು ವಿದ್ಯಾರ್ಥಿಗಳ ವೈಜ್ಞಾನಿಕ ಮನೋಭಾವನೆಯನ್ನು ಪ್ರೇರೇಪಿಸಲು, ತನ್ಮೂಲಕ ಭವಿಷ್ಯವನ್ನ ಉಜ್ವಲವಾಗಿ ಕಟ್ಟಿಕೊಳ್ಳಲು ಈ ಪ್ರಯೋಗಾಲಯ ಸಹಕಾರಿಯಾಗಲಿ ಎಂದು ಹೇಳುತ್ತಾ ಅಮೆರಿಕದಲ್ಲಿ ನೆಲೆಸಿರುವ ತಮ್ಮ ಸಹೋದರ ಶ್ರೀ ಆನಂದ ಹಾಸ್ಯಗಾರ ಕಳಿಸಿರುವ ಶುಭಾಶಯ ಪತ್ರವನ್ನು ಓದಿ ಹೇಳಿದರು.
ದಾನಿಗಳಾದ ಗಣೇಶ್ ಭಟ್ ಮಾತನಾಡಿ ತಿಳುವಳಿಕೆ ಮತ್ತು ಜ್ಞಾನ ವಿಭಿನ್ನವಾಗಿದೆ. ವಿಷಯದ ಕುರಿತು ಜ್ಞಾನವನ್ನು ಗಳಿಸುವ ಗುಣ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು. ತಿಳುವಳಿಕೆಯನ್ನು ಜ್ಞಾನವಾಗಿ ಪರಿವರ್ತಿಸಲು ಪ್ರಯೋಗಾಲಯ ಸೇತುವಾಗುತ್ತದೆ ಎಂದು ದೃಷ್ಟಾಂತದ ಮೂಲಕ ವಿವರಿಸಿದರು.
ವಿದ್ಯಾಭಿಮಾನಿಗಳಾದ ಪದ್ಮನಾಭ ಶಾನಭಾಗ್ ಮಾತನಾಡಿ ದಾನಿಗಳನ್ನ ಸ್ಮರಿಸಿ ಕಾರ್ಯಕ್ರಮಗೆ ಶುಭವನ್ನ ಕೋರಿ ವಿದ್ಯಾರ್ಥಿಗಳನ್ನು ಹುರಿದಂಬಿಸಿದರು. ಡಯಟ್ ಉಪ ಪ್ರಾಚಾರ್ಯರಾದ ಜಿ.ಎಸ್.ಭಟ್ಟ ಮಾತನಾಡುತ್ತಾ ಆಡಳಿತ ಮಂಡಳಿ, ಶಿಕ್ಷಕರು ಮತ್ತು ದಾನಿಗಳ ನಡುವೆ ಸಾತ್ವಿಕ ತ್ರಿಕೋನ ಸಂಬಂಧ ಇದ್ದರೆ, ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಉತ್ತಮ ಕೆಲಸಗಳು ಆಗಲು ಸಾಧ್ಯ ಎಂದು ಸೂಚ್ಯವಾಗಿ ತಿಳಿಸುತ್ತಾ, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುವಂತಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ ಗಜಾನನ ಹೆಗಡೆಯವರು ಶುಭ ಹಾರೈಸಿದರು. ಶಾಲೆಯ ಮುಖ್ಯಾಧ್ಯಾಪಕರಾದ ಎಲ್.ಎಮ್.ಹೆಗಡೆಯವರು ಪ್ರಯೋಗಾಲಯದ ನಿರ್ಮಾಣಕ್ಕೆ ಸಹಕರಿಸಿದ ಎಲ್ಲ ಮಹನೀಯರಿಗೆ ವಿಶೇಷ ವಂದನೆಗಳನ್ನು ಸಲ್ಲಿಸುತ್ತಾ, ಸರ್ವರನ್ನು ಸ್ವಾಗತಿಸಿದರು. ಒಂದು ಲಕ್ಷಕ್ಕಿಂತ ಹೆಚ್ಚು ಹಣ ನೀಡದ ದಾನಿಗಳಾದಆನಂದ್ ಹಾಸ್ಯಗಾರ, ರಾಮ ಹಾಸ್ಯಗಾರ, ಎನ್.ಆರ್.ಹೆಗಡೆ,ರಾಘೋಣ, ಗಣೇಶ ಭಟ್ಟ,ಗದ್ದೆ, ಡಾ.ಶಾಂತಿ ಹೆಗಡೆಯವರನ್ನು ಸ್ಮರಿಸಿ ಗೌರವಿಸಲಾಯಿತು. ಕುಮಾರಿ ಸಿಂಚನ ಆಚಾರಿ ಮತ್ತು ಸಂಗಡಿಗರು ಸ್ವಾಗತ ಗೀತೆ ಹಾಗೂ ವಿಜ್ಞಾನ ಗೀತೆ ಪ್ರಸ್ತುತಪಡಿಸಿದರು. ಶ್ರೀಕಾಂತ ಹಿಟ್ನಳ್ಳಿ ಅವರು ವಂದಿಸಿದರು. ಶ್ರೀಮತಿ ಮುಕ್ತಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಕಡತೋಕಾ ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ದುರ್ಗಮ್ಮ, ಮುಖ್ಯಾಧ್ಯಾಪಕರಾದ ದಿನೇಶ ವೈದ್ಯ, ಎಸ್.ಎಸ್.ಶೇರೆಗಾರ, ಶ್ರೀಮತಿ ಕಲ್ಪನಾ, ಆಡಳಿತ ಮಂಡಳಿಯ ಸದಸ್ಯರಾದ ಸುಬ್ರಾಯ ಭಟ್, ಎಮ್. ಕೆ. ಭಟ್ಟ ,ಶ್ರೀಮತಿ ದುರ್ಗಾಬಾಯಿ ಜೋಶಿ ಉಪಸ್ಥಿತರಿದ್ದರು. ಶಾಲೆಯ ಎಲ್ಲಾ ಶಿಕ್ಷಕರು, ಸಿಬ್ಬಂದಿಗಳು ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.