ಅಂಕೋಲಾ: ನಮ್ಮ ಕವಿತೆಗಳು ತತ್ವಜ್ಞಾನವಾಗಬೇಕು ಎಂದು ಖ್ಯಾತ ಕತೆಗಾರ್ತಿ ಸುನಂದಾ ಪ್ರಕಾಶ ಕಡಮೆ ಹೇಳಿದರು.
ಅವರು ಇಲ್ಲಿಯ ಕಾಕರಮಠದ ಶ್ರೀ ವಿಠ್ಠಲ ಸದಾಶಿವ ದೇವಸ್ಥಾನದ ಸಭಾಭವನದಲ್ಲಿ ನಡೆದ ವೈಶ್ಯ ಕವಿಗೋಷ್ಠಿಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಶ್ರೇಯಾ ಶೆಟ್ಟಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ವೈಶ್ಯ ಕವಿಗೋಷ್ಠಿ ಚಾಲನಾ ಸಮಿತಿ ಸಂಚಾಲಕ ರವೀಂದ್ರ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕವಿಗೋಷ್ಠಿಯಲ್ಲಿ ವೈಶ್ಯ ಸಮಾಜದ ಕವಿಗಳು ತಮ್ಮ ಕವನಗಳನ್ನು ವಾಚಿಸಿದರು.
ಕವಿಗೋಷ್ಠಿಯ ಕುರಿತು ವೇದಿಕೆಯ ಗಣ್ಯರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿ ಪ್ರಕಾಶ ಕಡಮೆ ಮಾತನಾಡಿ ತಮ್ಮ ಅಂತರಾಳದ ನುಡಿಗಳ ಮೂಲಕ ಕಾರ್ಯಕ್ರಮದ ಕುರಿತು ಶ್ಲಾಘಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ಮಾಜಿ ಅಧ್ಯಕ್ಷ ಮನೋಹರ ಗೋವಿಂದ ಮಲ್ಮನೆಯವರು ಇಂತಹ ಕಾರ್ಯಕ್ರಮಗಳು ಮುಂದೆ ಕೂಡ ನಡೆಯುವಂತಾಗಲಿ ಅದಕ್ಕೆ ತಮ್ಮ ಸಂಪೂರ್ಣ ಸಹಮತವಿದೆ ಎಂದು ಹೇಳಿದರು. ವೇದಿಕೆಯಲ್ಲಿ ಉಪಸ್ಥಿತರಿರುವ ಗಣ್ಯರನ್ನು ಈ ಸಂದರ್ಭದಲ್ಲಿ ಕವಿಗೋಷ್ಠಿಯ ಚಾಲನಾ ಸಮಿತಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಪ್ರಶಾಂತ ವಿ. ಶೆಟ್ಟಿ ವಂದಿಸಿದರು. ಸುಧಾ ಪ್ರಶಾಂತ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ತಮ್ಮ ಕವನಗಳಿಗೆ ರಾಗ ಸಂಯೋಜಿಸಿ ಪ್ರಶಾಂತ ವಿ. ಶೆಟ್ಟಿ ಮತು ಸುಧಾ ಶೆಟ್ಟಿ ದಂಪತಿಗಳು ಸುಶ್ರಾವ್ಯವಾಗಿ ಹಾಡಿರುವುದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರ ಪ್ರಶಂಸೆಗೆ ಪಾತ್ರವಾಯಿತು.