ದಾಂಡೇಲಿ : ನಗರದ ಬಸವೇಶ್ವರನಗರದಲ್ಲಿ ನಗರಸಭೆಯ ಅಧೀನದಲ್ಲಿರುವ ಮಾರ್ಕೆಟ್ ಕಟ್ಟಡದಲ್ಲಿ ಕಳೆದ ಅನೇಕ ದಿನಗಳಿಂದ ಮಾನಸಿಕ ಅಸ್ವಸ್ಥನೋರ್ವ ಜೀವ ಭಯದಲ್ಲಿ ದಿನದೊಡುತ್ತಿರುವ ಪ್ರಸಂಗ ಎದುರಾಗಿದೆ.
ಸ್ಥಳೀಯ ಜನರಿಗೆ ಅನುಕೂಲವಾಗಲೆಂದು ನಗರಸಭೆ ಕಳೆದ ಅನೇಕ ವರ್ಷಗಳ ಹಿಂದೆ ನಿರ್ಮಿಸಿರುವ ಈ ಮಾರ್ಕೆಟ್ ಕಟ್ಟಡ ವ್ಯಾಪಾರ ಕೇಂದ್ರವಾಗದೇ ನಿರ್ಗತಿಕರ ಹಾಗೂ ಮಾನಸಿಕ ಅಸ್ವಸ್ಥರಿಗೆ ಆಶ್ರಯ ತಾಣವಾಗಿದೆ. ಇದೇ ಮಾರ್ಕೆಟ್ ಕಟ್ಟಡದಲ್ಲಿ ಹಲವು ದಿನಗಳಿಂದ ಮಾನಸಿಕ ಅಸ್ವಸ್ಥನೊಬ್ಬ ಬಿಡಾರ ಹೂಡಿದ್ದು, ಈತ ಎಲ್ಲಿಯವನು ಈತ ಯಾರು ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಆದರೆ ಈತ ಇಲ್ಲಿ ಇರುವುದಕ್ಕೆ ಇವನಿಗಿಂತ ಮುಂಚೆ ಬಂದು ಇಲ್ಲಿ ತಂಗಿರುವ ಇನ್ನಿಬ್ಬರು ಮಾನಸಿಕ ಅಸ್ವಸ್ಥರು ಈತನ ಮೇಲೆ ಪ್ರತಿದಿನ ಹಲ್ಲೆ ಮಾಡುತ್ತಿದ್ದು, ಇದರಿಂದಾಗಿ ಈತ ತೀವ್ರ ಮನನೊಂದಿದ್ದಾನೆ. ಕಳೆದ ಮೂರ್ನಾಲ್ಕು ದಿನಗಳಿಂದ ತೀವ್ರ ಅಸ್ವಸ್ಥಗೊಂಡಿರುವ ಈತ ಏನನ್ನು ಹೇಳಿಕೊಳ್ಳದೆ ಮೌನದಿಂದ ಇದ್ದು, ಆರೋಗ್ಯ ಸಮಸ್ಯೆಯಿಂದ ಒದ್ದಾಡುತ್ತಿದ್ದಾನೆ. ಈತನ ಬಗ್ಗೆ ಸಂಬಂಧಪಟ್ಟವರು ಕೂಡಲೇ ಅಗತ್ಯ ಕ್ರಮವನ್ನು ಕೈಗೊಳ್ಳಬೇಕಾಗಿದೆ.