ನಾರದ ಪದದಲ್ಲಿ, ‘ನರ್’ ಎಂದರೆ ‘ನೀರು’ ಮತ್ತು ‘ಅಜ್ಞಾನ’ ಮತ್ತು ‘ದ’ ಎಂದರೆ ‘ಕೊಡುವುದು’ ಅಥವಾ ‘ನಾಶ ಮಾಡುವುದು. ಅಂದರೆ ಸದಾ ಪಿತೃಗಳಿಗೆ ತರ್ಪಣದ ಮೂಲಕ ಯಾವಾಗಲೂ ಜಲವನ್ನು ಅರ್ಪಿಸುತ್ತಿದ್ದುದರಿಂದ ನಾರದ ಎಂಬ ಹೆಸರು ಬಂದಿದೆ. ಎರಡನೆಯ ಅರ್ಥವೆಂದರೆ ಅಜ್ಞಾನವನ್ನು ನಾಶಮಾಡಿ ಜ್ಞಾನದ ಬೆಳಕನ್ನು ನೀಡುವವನನ್ನು ನಾರದನೆಂದು ಕರೆಯಲಾಗುತ್ತದೆ.
ಭಾರತೀಯ ಜ್ಞಾನ ಪರಂಪರೆಯಲ್ಲಿ ಮಹರ್ಷಿ ನಾರದರನ್ನು ವಿವಿಧೆಡೆಯಲ್ಲಿ ಉಲ್ಲೇಖಿಸಲಾಗಿದೆ. ಅವರು ಬ್ರಹ್ಮದೇವನ ಮಗ, ವಿಷ್ಣುವಿನ ಭಕ್ತ ಮತ್ತು ಬೃಹಸ್ಪತಿಯ ಶಿಷ್ಯ ಎಂದು ಶಾಸ್ತ್ರಗಳಲ್ಲಿ ವಿವರಿಸಲಾಗಿದೆ. ನಾರದರನ್ನು ಲೋಕಕಲ್ಯಾಣದ ಸಂದೇಶವಾಹಕ ಮತ್ತು ತ್ರಿಲೋಕ ಸಂಚಾರಿಯೆಂದು ಬಿಂಬಿಸಲಾಗಿದೆ. ಪುರಾತನ ಕಾಲದಲ್ಲಿ ಮಾಹಿತಿ, ಸಂವಾದ ಮತ್ತು ಸಂವಹನ ವ್ಯವಸ್ಥೆಯು ಮುಖ್ಯವಾಗಿ ಮೌಖಿಕವಾಗಿತ್ತು ಮತ್ತು ಜನರು ಜಾತ್ರೆ, ತೀರ್ಥಯಾತ್ರೆಗಳು, ಯಜ್ಞ-ಯಾಗ ಕಾರ್ಯಕ್ರಮಗಳ ನಿಮಿತ್ತ ಜನಗಳು ಒಟ್ಟಿಗೆ ಸೇರಿದಾಗ, ಮಾಹಿತಿಗಳ ವಿನಿಮಯ ನಡೆಯುತ್ತಿತ್ತು.
ಕೌಟಿಲ್ಯನ ಅರ್ಥಶಾಸ್ತ್ರ’ದಲ್ಲಿ ದೇವರ್ಷಿ ನಾರದರನ್ನು ‘ಆಚಾರ್ಯ ಪಿಶುನಃ’ ಎಂಬ ಹೆಸರನಲ್ಲಿ ಹಲವಾರು ಬಾರಿ ಉಲ್ಲೇಖ ಮಾಡಲ್ಪಟ್ಟಿದೆ. ಇದಲ್ಲದೇ ಸಂಸ್ಕೃತ ನಿಘಂಟಿನಲ್ಲಿಯೂ ‘ಆಚಾರ್ಯ ಪಿಶುನಃ’ ಎಂದರೆ ದೇವರ್ಷಿ ನಾರದರು. ಮಾಹಿತಿ ನೀಡುವವರು, ಸಂಚಾರಿ, ಸುದ್ದಿ ಮುಟ್ಟಿಸುವವರು, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಮಾಹಿತಿ ನೀಡುವವರು ಎಂದು ಉಲ್ಲೇಖಿಸಲಾಗಿದೆ. ಆಚಾರ್ಯ ಎಂದರೆ ಗುರು. ಶಿಕ್ಷಕ, ಯಾಗದ ಮುಖ್ಯ ನಿರ್ವಾಹಕ, ವಿದ್ವಾಂಸ ಎಂಬ ಇತ್ಯಾದಿ ಅರ್ಥಗಳಿವೆ. ಈ ಎರಡೂ ಪದಗಳು ಅರ್ಥವೆಂದರೆ ಮಾಹಿತಿಯನ್ನು ನೀಡುವ ವಿದ್ವಾಂಸ ಅಥವಾ ಜ್ಞಾನಸಂಪನ್ನ ವ್ಯಕ್ತಿ ಎಂದು. ಸಂಸ್ಕೃತ ಸಾಹಿತ್ಯದಲ್ಲಿ ಈ ಅರ್ಥವನ್ನು ಸಂಯುಕ್ತವಾಗಿ ಹೋಲಿಕೆಯಾಗುವ ವ್ಯಕ್ತಿಯೆಂದರೆ ದೇವರ್ಷಿ ನಾರದರು. ಹೀಗೆ ಸಂಸ್ಕೃತ ಸಾಹಿತ್ಯದಲ್ಲಿ ದೇವರ್ಷಿ ನಾರದರಿಗೆ ಉಲ್ಲೇಖಿಸಿರುವ ಆಚಾರ್ಯ ಪಿಶುನಃದಿಂದ ದೇವರ್ಷಿ ನಾರದರು ಮೂರು ಲೋಕಗಳಲ್ಲಿಯೂ ಮಾಹಿತಿ ಅಥವಾ ಸುದ್ದಿವಾಹಕರಾಗಿ ಪ್ರಸಿದ್ಧರಾಗಿದ್ದರು ಎಂಬುದು ಸ್ಪಷ್ಟವಾಗುತ್ತದೆ.
ಈ ಅನುಕ್ರಮದಲ್ಲಿ, ದೇವರ್ಷಿ ನಾರದರ ಪತ್ರಿಕೋದ್ಯಮದ ನಡವಳಿಕೆಯನ್ನು ಸ್ಪಷ್ಟಪಡಿಸುವ ಮತ್ತೊಂದು ಉಲ್ಲೇಖವೂ ಮುಖ್ಯವಾಗಿದೆ. ಪುರಾಣಗಳ ಪ್ರಕಾರ, ಬ್ರಹ್ಮನ ವರದಿಂದ ಅವನ ಮಗ ದಕ್ಷನಿಗೆ ನೂರು ಪುತ್ರರನ್ನು ಪಡೆದಿದ್ದನು ಮತ್ತು ಆತನ ಎಲ್ಲಾ ಮಕ್ಕಳಿಗೆ ಸೃಷ್ಟಿ ಕಾರ್ಯದಲ್ಲಿ ತೊಡಗಲು ಆಜ್ಞೆಯಾಗಿತ್ತು. ಆದರೆ ಬ್ರಹ್ಮನ ಮಾನಸಪುತ್ರ ಮತ್ತು ದಕ್ಷನ ಸಹೋದರ ನಾರದ ದಕ್ಷನ ಎಲ್ಲಾ ಮಕ್ಕಳನ್ನು ಪ್ರಾಪಂಚಿಕದಿಂದ ಬೇರ್ಪಡಿಸಿ ತಪಸ್ಸಿನಲ್ಲಿ ತೊಡಗಿಸಿದರು. ದಕ್ಷನು ಪುನಃ ಮತ್ತೊಮ್ಮೆ ತನ್ನ ಮಕ್ಕಳಿಗೆ ಸೃಷ್ಟಿ ಕಾರ್ಯದಲ್ಲಿ ತೊಡಗುವಂತೆ ಆದೇಶಿಸಿದ. ಆದರೆ ನಾರದರು ಈ ಬಾರಿಯೂ ಪುತ್ರರನ್ನು ಸೃಷ್ಟಿಯ ಕಾರ್ಯದಲ್ಲಿ ತೊಡಗಲು ಬಿಡದೇ ತಪಸ್ಸಿನಲ್ಲಿ ತೊಡಗುವಂತೆ ಮಾಡಿಬಿಟ್ಟರು. ಇದರಿಂದ ಕೋಪಗೊಂಡ ದಕ್ಷನು ನಾರದರನ್ನು (1) ಯಾವಾಗಲೂ ಅಲೆದಾಡುವಂತೆ, (2) ಎಲ್ಲಿಯೂ ಹೆಚ್ಚು ಕಾಲ ಉಳಿಯದಂತೆ ಮತ್ತು (3) ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಮಾಹಿತಿಯನ್ನು ಮುಟ್ಟಿಸುವ ಕೆಲಸ ಮಾಡುವಂತಾಗಲಿ ಎಂದು ಶಾಪ ನೀಡಿದ. ದೇವರ್ಷಿ ನಾರದರು ದಕ್ಷನ ಶಾಪವನ್ನು ಲೋಕಕಲ್ಯಾಣಕ್ಕಾಗಿ ಈ ಮೂರು ಶಾಪಗಳನ್ನು ಸದುಪಯೋಗ ಪಡಿಸಿಕೊಂಡರು.
ಈ ಕುರಿತು ಶ್ರೀಕೃಷ್ಣನು ಅರ್ಜುನನಿಗೆ ಹೇಳಿದ್ದೇನೆಂದರೆ, ‘ದೇವರ್ಷಿ ನಾರದರು ತಮ್ಮನ್ನು ದಕ್ಷನ ಶಾಪದಿಂದ ಮುಕ್ತಗೊಳಿಸಿಕೊಳ್ಳಲು ಸಾಕಷ್ಟು ಸಮರ್ಥರಾಗಿದ್ದರೂ, ಅವರು ಲೋಕದ ಹಿತಕ್ಕಾಗಿ ಶಾಪವನ್ನು ಸ್ವೀಕರಿಸಿದರು ಮತ್ತು ಅಂದಿನಿಂದ ಅವನು ನಿರಂತರವಾಗಿ ಮೂರು ಲೋಕಗಳನ್ನು ಸುತ್ತತೊಡಗಿದರು. ಅಧಿಕ ಸಮಯ ಎಲ್ಲಿಯೂ ನಿಲ್ಲದೇ ಹಾಗೂ ಅಸೂರಿ ಶಕ್ತಿಯ ವಿನಾಶಕ್ಕಾಗಿ ಮತ್ತು ಸಜ್ಜನಶಕ್ತಿಯ ರಕ್ಷಣೆಗಾಗಿ, ಲೋಕಹಿತಕ್ಕಾಗಿ ಮೂರು ಲೋಕದ ಸುದ್ದಿಗಳನ್ನು ದೇವತೆಗಳಿಗೆ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ.”
ಆದ್ಯ ಪತ್ರಕರ್ತ ದೇವರ್ಷಿ ನಾರದರು ಸಂವಹನಕಾರ ಅಥವಾ ಮಾಹಿತಿಯ ಪ್ರಸಾರಕರಲ್ಲದೆ, ನಾರದ ಪುರಾಣ, ನಾರದ ಸ್ಮೃತಿ, ನಾರದೀಯ ಜ್ಯೋತಿಷ್ಯ ಮುಂತಾದ. ಗ್ರಂಥಗಳ ಗ್ರಂಥಕಾರರೂ ಆಗಿದ್ದರು. ಅವರು ಸಂಗೀತ ವಾದ್ಯ ‘ವೀಣೆ’ಯನ್ನು ಕಂಡುಹಿಡಿದರು. ಅವರಿಗೆ ಸಂಗೀತ ಶಾಸ್ತ್ರದ ಅತ್ಯುತ್ತಮ ಅರಿವಿತ್ತು. ನಾರದರ ಪ್ರಕಾರ, ಸುದ್ದಿಯೆಂಬುದು ಹೇಳುವವನ ಮತ್ತು ಕೇಳುಗನ ಕಥೆಯಾಗಿದೆ. ಈ ಸೂತ್ರವೇ ಪತ್ರಿಕೋದ್ಯಮದ ಮೂಲತತ್ವವಾಗಿದೆ.
ಪೂರ್ವಯುಗಗಳಲ್ಲಿ ನಾರದರು ದೇವತಾ ಪ್ರಪಂಚದಲ್ಲಿಯೂ ದೇವಾಂಶ ಪುರುಷ ಪ್ರಪಂಚದಲ್ಲಿಯೂ ನಮ್ಮಲ್ಲಿ ಈಗಣ ಪತ್ರಿಕೋದ್ಯೋಗಿಗಳ ಕೆಲಸವನ್ನು ಮಾಡುತ್ತಿದ್ದರು. ಲೋಕವಾರ್ತೆಯನ್ನು ಸಾರುವುದೂ, ದುಷ್ಟಚೇಷ್ಟೆಯನ್ನು ಗಮನಕ್ಕೆ ತರುವುದೂ, ಹಿತವನ್ನು ಸೂಚಿಸುವುದೂ ನಾರದರು ಮಾಡುತ್ತಿದ್ದ ಕೆಲಸಗಳು, ಆದ್ಯ ಪತ್ರಕರ್ತ ನಾರದರ ಪತ್ರಿಕೋದ್ಯಮದ ಉದ್ದೇಶವು ಸಜ್ಜನರ ರಕ್ಷಣೆ ಮತ್ತು ದುಷ್ಪರ ವಿನಾಶವಾಗಿತ್ತು. ಆದ್ಯ ಪತ್ರಕರ್ತರಾದ ನಾರದರು ಸಾಗರದ ಮಂಥನದ ಸಂದರ್ಭದಲ್ಲಿ ವಿಷ ಹೊರಬೀಳುವ ವಿಷಯವನ್ನು ಮುಂಚೆಯೇ ಮಂಥನದಲ್ಲಿ ತೊಡಗಿದ್ದ ಎರಡೂ ಪಕ್ಷಗಳಿಗೆ ಮೊದಲು ಮಾಹಿತಿ ನೀಡಿದ್ದರು. ಆದರೆ ಎರಡೂ ಪಕ್ಷಗಳು ಈ ಬಗ್ಗೆ ಗಮನ ಹರಿಸದ ಕಾರಣ ವಿಷ ಹರಡಿತು. ಹಾಗೆಯೇ ಸತಿಯು ತನ್ನ ದೇಹವನ್ನು ದಕ್ಷನ ಯಜ್ಞಕುಂಡದಲ್ಲಿ ದಹಿಸಿಕೊಂಡಿದ್ದನ್ನು ಮೊದಲು ಶಿವನಿಗೆ ತಿಳಿಸಿದವರು ಆದ್ಯ ಪತ್ರಕರ್ತರಾದ ನಾರದರೇ. ಹಿರಣ್ಯಕಶಿಪುವಿಗೆ ಅಪಾಯವನ್ನು ಸೂಚಿಸಿದವರೂ, ಇಂದನಿಗೆ ಎಚ್ಚರಿಕೆ ಹೇಳಿದವರೂ, ಸತ್ಯಭಾಮಿಗೆ ಆಕೆಯ ಹಕ್ಕನ್ನು ತಿಳಿಸಿಕೊಟ್ಟವರೂ, ಧ್ರುವನಿಗೆ, ಹಿತೋಪದೇಶ ಮಾಡಿದವರೂ, ಮಹಾಭಾರತ ಯುದ್ಧದ ಸಮಯದಲ್ಲಿ ತೀರ್ಥಯಾತ್ರೆಯಲ್ಲಿದ್ದ ಬಲರಾಮನಿಗೆ ಮಹಾಭಾರತ ಯುದ್ಧ ಮುಗಿದುದರ ಬಗ್ಗೆ ತಿಳಿಸಿದ್ದು, ಅರ್ಜುನನಿಗೆ ಗರ್ವಭಂಗ ಮಾಡಿಸಿದವರೂ, ಮಹಾವಿಷ್ಣುವಿಗೆ ಲೋಕಗಳ ಸ್ಥಿತಿಯನ್ನು ಅರಿಕೆ ಮಾಡುತ್ತಿದ್ದವರೂ ಸಕಲ ಜೀವಿಗಳಿಗೂ ದೈವಲೀಲೆಯನ್ನು ಕೀರ್ತಿಸಿ ಜ್ಞಾನಾನಂದಗಳನ್ನು ನೀಡುತ್ತಿದ್ದವರೂ ನಾರದರೇ, ನಾರದರು ಪತ್ರಕರ್ತರಾಗಿ ಜಗನ್ನಾಥನ ರಥಯಾತ್ರೆ ಆರಂಭಿಸಿದರು. ಇಷ್ಟೇ ಅಲ್ಲ, ಪತ್ರಕರ್ತರಾಗಿ ಕಾಶಿ, ಪ್ರಯಾಗ, ಮಥುರಾ, ಗಯಾ, ಬದರಿಕಾಶ್ರಮ, ಕೇದಾರನಾಥ, ರಾಮೇಶ್ವರಂ ಸೇರಿದಂತೆ ಎಲ್ಲ ತೀರ್ಥಕ್ಷೇತ್ರಗಳ ವ್ಯಾಪ್ತಿ ಮತ್ತು ಮಹತ್ವವನ್ನು ತಮ್ಮ ನಾರದ ಪುರಾಣದಲ್ಲಿ ವಿವರಿಸಿದ್ದಾರೆ. ಪ್ರಶೋತ್ತರ ರೂಪದ ಸಂದರ್ಶನವನ್ನು ಪ್ರಥಮವಾಗಿ ಆರಂಭಿಸಿದರು ನಾರದರೇ. ಪ್ರಶ್ನೆಗೆ ಸರಿಯಾದ ಉತ್ತರ ನೀಡಿದವರಿಗೆ ಪ್ರಶಸ್ತಿ ನೀಡುವ ಸಂಪ್ರದಾಯವನ್ನು ಪ್ರಾರಂಭಿಸಿದರು ಎಂಬ ಉಲ್ಲೇಖವನ್ನು ಪುರಾಣಗಳಲ್ಲಿ ಕಾಣಬಹುದು.
ಮಹರ್ಷಿ ನಾರದರ ಪ್ರಮುಖ ಗ್ರಂಥಗಳು:
ನಾರದ ಪುರಾಣ: ನಾರದರ ಈ ಪುಸ್ತಕದಲ್ಲಿ ನದಿಗಳ ಮಹಿಮೆ ಮತ್ತು ಪುಣ್ಯ ಕ್ಷೇತ್ರಗಳ ಪ್ರಾಮುಖ್ಯತೆ, ಭಕ್ತಿ, ಜ್ಞಾನ, ಯೋಗ, ಧ್ಯಾನ, ವರ್ಣಾಶ್ರಮ ವ್ಯವಸ್ಥೆ, ಸದ್ವರ್ತನೆ, ಉಪವಾಸ, ಶ್ರಾದ್ದ ಇತ್ಯಾದಿಗಳನ್ನು ವಿವರಿಸಲಾಗಿದೆ. ಆರು ವೇದಾಂಗಗಳು, ವಿಶೇಷವಾಗಿ ತ್ರಿಸ್ಕಂಧ ಜ್ಯೋತಿಷ್ಯದ ವಿವರವಾದ ವಿವರಣೆ, ಮಂತ್ರ-ತಂತ್ರ ವಿದ್ಯಾ, ಪ್ರಾಯಶ್ಚಿತ್ತ ಕಾನೂನು ಮತ್ತು ಎಲ್ಲಾ ಹದಿನೆಂಟು ಪುರಾಣಗಳ ಅಧಿಕೃತ ಪರಿಚಯ- ‘ನಾರದ ಪುರಾಣ’ದ ಪ್ರಮುಖ ವಿಷಯಗಳಾಗಿವೆ.
ನಾರದ ಸ್ಮೃತಿ: ನಾರದ ಸ್ಮೃತಿಯಲ್ಲಿ ವ್ಯಾವಹಾರಿಕ ವಿಷಯಗಳನ್ನು ವಿವರಿಸಲಾಗಿದೆ. ನ್ಯಾಯ, ವೇತನ, ಆಸ್ತಿ ಮಾರಾಟ ಮತ್ತು ಖರೀದಿ, ಉತ್ತರಾಧಿಕಾರ, ಅಪರಾಧ, ಸಾಲ ಇತ್ಯಾದಿ ವಿಷಯಗಳ ಮೇಲೆ ಕಾನೂನುಗಳಿವೆ. ಈ ಕೃತಿಯಲ್ಲಿ ನಾರದರ ಸಂಗೀತ ಗ್ರಂಥದ ಉಲ್ಲೇಖವೂ ಇದೆ.
ನಾರದ ಭಕ್ತಿ-ಸೂತ್ರಗಳು: ಮಹರ್ಷಿ ನಾರದರು ಬರೆದ 84 ಭಕ್ತಿ ಸೂತ್ರಗಳನ್ನು ನಾವು ಸೂಕ್ಷ್ಮವಾಗಿ ಅಧ್ಯಯನ ಮಾಡಿದರೆ, ಪತ್ರಿಕೋದ್ಯಮಕ್ಕೆ ಮಾತ್ರವಲ್ಲದೆ ಇಡೀ ಮಾಧ್ಯಮಕ್ಕೆ ಶಾಶ್ವತ ಸಿದ್ಧಾಂತಗಳನ್ನು ಅನುಸರಿಸಿರುವುದು ಗೋಚರಿಸುತ್ತದೆ. ಅವರು ಬರೆದ ಭಕ್ತಿ ಸೂತ್ರ ಇಂದಿನ ಕಾಲದಲ್ಲಿಯೂ ಪ್ರಸ್ತುತವಾಗಿದೆ. 72 ನೇ ಸೂತ್ರವು ಏಕಾತ್ಮತೆಯನ್ನು ಪೋಷಿಸುವ ಅತ್ಯಂತ ಸುಂದರವಾದ ವಾಕ್ಯವಾಗಿದೆ. ಇದರಲ್ಲಿ ನಾರದರು ಸಮಾಜದಲ್ಲಿ ಒಡಕುಗಳನ್ನು ಉಂಟುಮಾಡುವ ಅಂಶಗಳನ್ನು ಚರ್ಚಿಸಿ, ಅವುಗಳನ್ನು ನಿಷೇಧಿಸಿದ್ದಾರೆ. ‘ನಾಸ್ತಿ ತೇಷು ಜಾತಿವಿಧಾರೂಪಕುಲಧನ ಕ್ರಿಯಾ ಭೇರ್ದ’- ಅಂದರೆ, ಜಾತಿ, ಜ್ಞಾನ, ರೂಪ, ಕುಲ, ಸಂಪತ್ತು. ಕೆಲಸ ಇತ್ಯಾದಿಗಳ ಆಧಾರದ ಮೇಲೆ ಯಾವುದೇ ತಾರತಮ್ಯ ಇರಬಾರದು.
ಪ್ರಾಚೀನ ಸಾಹಿತ್ಯದಲ್ಲಿ ನಾರದ-ಸಂವಾದ:
ನಾರದ-ಬ್ರಹ್ಮ ಸಂಭಾಷಣೆಯು ‘ಶ್ರೀ ಶಿವ ಮಹಾಪುರಾಣ’ದಲ್ಲಿ ಕಂಡುಬರುತ್ತದೆ. ಇದು ಪ್ರಾಚೀನ ಸಾಹಿತ್ಯದಲ್ಲಿ ನಾರದರ ಪ್ರಸ್ತುತತೆಯನ್ನು ತೋರಿಸುತ್ತದೆ. ನಾರದರ ಸಂಭಾಷಣೆಗಳು ‘ಶ್ರೀ ಶಿವಮಹಾಪುರಾಣ’ ಹಾಗೂ ‘ವಾಮನ ಪುರಾಣ’ದ ವಿವಿಧ ಅಧ್ಯಾಯಗಳಲ್ಲಿ ಕಂಡುಬರುತ್ತವೆ. ಇದಲ್ಲದೆ, ಜೈನ ಮತದ ಪ್ರಾಚೀನ ಇತಿಹಾಸದಲ್ಲಿ ನಾರದರ ಸಂವಾದವನ್ನು ಉಲ್ಲೇಖಿಸಲಾಗಿದೆ.
‘ವಾಲ್ಮೀಕಿಯ ರಾಮಾಯಣ’ 1.6ರಲ್ಲಿ ನಾರದನನ್ನು ‘ತ್ರಿಲೋಕಜ್ಞ’ ಎಂದು ಕರೆಯಲಾಗಿದೆ. ಮೂರೂ ಲೋಕಗಳಲ್ಲಿ ಸಂಚರಿಸಿದ ಅನುಭವದಿಂದ ಅವರು ಸಂಪೂರ್ಣ ಜ್ಞಾನಿಗಳಾಗಿದ್ದರು. ಪುರಾಣಗಳಲ್ಲಿ ಅವರನ್ನು ದೇವರ್ಷಿ ಎಂದು ಕರೆಯಲಾಗಿದೆ.
ಸನತ್ಕುಮಾರನನ್ನು ಮಹರ್ಷಿ ನಾರದರ ಗುರು ಎಂದು ಪರಿಗಣಿಸಲಾಗಿದೆ. ಛಾಂದೋಗೋಪನಿಷತ್ತಿನ ಏಳನೇ ಅಧ್ಯಾಯದ ಪ್ರಕಾರ, ನಾರದರು ಸನತ್ಕುಮಾರರಿಂದ ಆಧ್ಯಾತ್ಮಿಕ ಜ್ಞಾನವನ್ನು ಪಡೆದರು ಮತ್ತು ಸನತ್ಕುಮಾರರಿಂದ ಅವರು ರೋಗಗಳಿಗೆ ಸಂಬಂಧಿಸಿದ ಅನೇಕ ವಿಧಿವಿಧಾನಗಳನ್ನು ತಿಳಿದುಕೊಂಡರು.
ಆಧುನಿಕ ಕಾಲಖಂಡ:
ಆಧುನಿಕ ಭಾರತದ ಮೊದಲ ಹಿಂದಿ ವಾರಪತ್ರಿಕೆ ‘ಉದಂತ ಮಾರ್ತಂಡ’ ಅನ್ನು 30 ಮೇ 1826 ರಂದು ಕೋಲ್ಕತ್ತಾದಿಂದ ಪ್ರಾರಂಭಿಸಲಾಯಿತು. ಆ ದಿನ ನಾರದ ಜಯಂತಿಯ ದಿನವಾಗಿತ್ತು ಹಾಗೂ ಈ ಪತ್ರಿಕೆಯ ಮೊದಲ ಸಂಚಿಕೆಯ ಮೊದಲ ಪುಟದಲ್ಲಿ ಸಂಪಾದಕರು, ದೇವಋಷಿ ನಾರದರ ಜನ್ಮ ದಿನಾಚರಣೆಯ ಶುಭ ಸಂದರ್ಭದಲ್ಲಿ ಈ ಪತ್ರಿಕೆಯನ್ನು ಪ್ರಕಟಿಸಲಾಗುತ್ತಿದೆ. ಏಕೆಂದರೆ ನಾರದರು ಆದರ್ಶ ಪತ್ರಕರ್ತರಾಗಿ, ಮೂರು ಲೋಕಗಳಲ್ಲಿ (ದೇವರುಗಳು, ಮಾನವರು, ರಾಕ್ಷಸರು) ಸಮಾನವಾದ ಸಹಜ ಸಂವಹನವನ್ನು ಹೊಂದಿದ್ದರು.
ವಾಸ್ತವವಾಗಿ, ನಾವು ಇತಿಹಾಸದ ಪುಟಗಳನ್ನು ತಿರುಗಿಸಿ ನೋಡಿದರೆ, ಮಾಹಿತಿ ಸಂವಹನ ಕ್ಷೇತ್ರದಲ್ಲಿ (ಆಧುನಿಕ ಭಾಷೆಯಲ್ಲಿ – ಕಮ್ಯುನಿಕೇಶನ್) ಅವರ ಪ್ರಯತ್ನಗಳು ನವೀನ. ತ್ವರಿತ ಮತ್ತು ಪರಿಣಾಮಕಾರಿಯಾಗಿತ್ತು. ಅವರ ಪ್ರತಿಯೊಂದು ಪರಾಮರ್ಶೆ ಮತ್ತು ಹೇಳಿಕೆಗಳಲ್ಲಿ ಲೋಕಹಿತವೇ ಪ್ರಧಾನವಾಗಿತ್ತು. ಆದ್ದರಿಂದ, ಭವಿಷ್ಯವನ್ನು ಒಳಗೊಂಡಂತೆ ಭೂತಕಾಲದಿಂದ ವರ್ತಮಾನದವರೆಗೆ ಎಲ್ಲಾ ಲೋಕಗಳ ಅತ್ಯುತ್ತಮ ಸಾರ್ವಜನಿಕ ಸಂವಹನಕಾರರು ಯಾರಾದರೂ ಇದ್ದರೆ, ಅದು ದೇವರ್ಷಿ ನಾರದರೇ.
ಮೊದಲ ಸಂಸ್ಕೃತ ಪತ್ರಿಕೆ:
ಹತ್ತೊಂಬತ್ತನೇ ಶತಮಾನದ ಮಧ್ಯಭಾಗಕ್ಕಿಂತ ಮುಂಚೆಯೇ, ಭಾರತದಾದ್ಯಂತ ಅನೇಕ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ಪ್ರಕಟವಾದವು. ಸಂಸ್ಕೃತ ಪತ್ರಿಕೆಗಳು ಹಿಂದಿ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಂತೆಯೇ ಅದೇ ಸಮಯದಲ್ಲಿ ಅಭಿವೃದ್ಧಿ ಹೊಂದಿದವು. ಹತ್ತೊಂಬತ್ತನೇ ಶತಮಾನದಲ್ಲಿ, ಅನೇಕ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ಸಂಸ್ಕೃತದೊಂದಿಗೆ ಮಿಶ್ರಣಗೊಂಡವು. ಅವುಗಳಲ್ಲಿ ಅನೇಕ ಸಂಸ್ಕೃತ ಶ್ಲೋಕಗಳು ಪ್ರಕಟವಾಗುತ್ತಿದ್ದವು. ಮೊದಲ ಹಿಂದಿ ಪತ್ರಿಕೆ ‘ಉದಂತ ಮಾರ್ತಂಡ’, ನ್ನು ನೋಡಿದರೆ ಈ ಪತ್ರಿಕೆಯ ಸಂಪಾದಕರಾದ ಜುಗಲ್ ಕಿಶೋರ್ ಶುಕ್ಲಾ ಅವರು ಸಂಸ್ಕೃತದ ವಿದ್ವಾಂಸರಾಗಿದ್ದರು. ಅನೇಕ ಸ್ವರಚಿತ ಶ್ಲೋಕಗಳು ಅದರಲ್ಲಿ ಪ್ರಕಟವಾಗುತ್ತಿದ್ದವು. ಪತ್ರಿಕೆಯ ಹೆಸರೂ ಸಂಸ್ಕೃತದಲ್ಲಿತ್ತು. ಹಾಗೆಯೇ ಇನ್ನೂ ಅನೇಕ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ಇದ್ದವು, ಆದರೆ ಸಂಪೂರ್ಣ ಸಂಸ್ಕೃತ ಭಾಷೆಯಲ್ಲಿ ಮಾಸಿಕ ಪತ್ರಿಕೆಯು 1 ಜೂನ್ 1866 ರಂದು ಬನಾರಸನಿಂದ ‘ಕಾಶಿವಿದ್ಯಾಸುಧಾನಿಧಿ’ ಎಂಬ ಹೆಸರಿನಲ್ಲಿ ಪ್ರಕಟವಾಯಿತು. ಇದನ್ನು ಸಂಸ್ಕೃತದ ಮೊದಲ ಪತ್ರಿಕೆ ಎಂದು ಪರಿಗಣಿಸಲಾಗಿದೆ.
ಸಂಸ್ಕೃತ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳ ಸಂಪಾದಕರ ಜೀವನವು ಯಾವಾಗಲೂ ತ್ಯಾಗ ಮತ್ತು ಆದರ್ಶಗಳಿಂದ ತುಂಬಿದೆ. ತಮ್ಮ ಜೀವನದುದ್ದಕ್ಕೂ ಹಲವಾರು ಅಡೆತಡೆಗಳನ್ನು ಎದುರಿಸಿದರೂ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳ ಪ್ರಕಟಣೆಯಿಂದ ಅವರುಗಳು ಹಿಂದೆ ಸರಿಯಲಿಲ್ಲ. ಲಾಭದ ಉದ್ದೇಶದಿಂದ ಯಾವುದೇ ಸಂಸ್ಕೃತ ಪತ್ರಿಕೆಯನ್ನು ಪ್ರಕಟಿಸಲಿಲ್ಲ. ಆದುದರಿಂದ ಸಂಸ್ಕೃತ ಪತ್ರಿಕೋದ್ಯಮವು ಆತ್ಮಸ್ಥೆರ್ಯದ ಮೇಲೆ ಅವಲಂಬಿತವಾಗಿದೆ ಎಂದು ತೋರುತ್ತದೆ, ಅಂದಿನಿಂದ ಈ ಹರಿವು ನಿರಂತರವಾಗಿ ಹರಿಯುತ್ತಲೇ ಇದೆ.
ಪತ್ರಕರ್ತರಾಗಿ ಮಹರ್ಷಿ ನಾರದರು:
ಮಹರ್ಷಿ ನಾರದರನ್ನು ಶ್ರೇಷ್ಠ ಸುದ್ದಿ ನೀಡುವವರೆಂದು ಪರಿಗಣಿಸಲಾಗಿದೆ. ಪ್ರಾಚೀನ ಕಾಲದಲ್ಲಿ ಗೂಢಚಾರರಿಂದ ಸುದ್ದಿಗಳನ್ನು ಪಡೆಯಲಾಗುತ್ತಿತ್ತು. ‘ರಾಮಾಯಣ’ ಮತ್ತು ‘ಮಹಾಭಾರತ’ದಲ್ಲಿ ಸುದ್ದಿ ನೀಡುವವರ ಹೆಸರುಗಳು ಕಂಡುಬರುತ್ತವೆ. ರಾಮಾಯಣ ಕಾಲದದಲ್ಲಿ ‘ಸುಮುಖ’ ಎನ್ನುವವನು ಗೂಢಚಾರನ ವೇಷ ಧರಿಸಿ ರಾಮನಿಗೆ ಸುದ್ದಿ ಮುಟ್ಟಿಸುತ್ತಿದ್ದ. ಮಹಾಭಾರತದ ಅಧ್ಯಯನದಿಂದ ತಿಳಿದು ಬರುವುದೇನೆಂದರೆ, ಆ ಸಮಯದಲ್ಲಿ ಸುದ್ದಿ ನೀಡುವವರನ್ನು ನಿಯೋಜನೆ ಮಾಡಿಕೊಳ್ಳಲಾಗುತ್ತಿತ್ತು. ಅವರುಗಳು ಸುದ್ದಿಯನ್ನು ಒಂದೆಡೆಯಿಂದ ಇನ್ನೊಂದೆಡೆಗೆ. ತರುವ-ಮುಟ್ಟಿಸುವ ಕೆಲಸ ಮಾಡುತ್ತಿದ್ದರು. ಮಹಾಭಾರತದಲ್ಲಿ ‘ಸಂಜಯ’ ಸುದ್ದಿಗಾರನಾಗಿ ಕಾರ್ಯನಿರ್ವಹಿಸಿದ್ದ. ಸಂಜಯನು ಕುರುಕ್ಷೇತ್ರದಲ್ಲಿ ನಡೆದ ಯುದ್ಧವನ್ನು ಪ್ರತ್ಯಕ್ಷವಾಗಿ ಕಂಡಂತೆ ಧೃತರಾಷ್ಟ್ರನಿಗೆ ವಿವರಿಸುತ್ತಾನೆ. ಪುರಾತನ ಸಾಹಿತ್ಯದ ಅಧ್ಯಯನದಿಂದ ‘ಭಟರು’ ಮತ್ತು ‘ದೂತರು’ ಸುದ್ದಿ ನೀಡುವ ಕೆಲಸ ಮಾಡುತ್ತಿದ್ದರು. ಮತ್ತು ಅವರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗಿತ್ತು ಎಂದು ತಿಳಿದು ಬರುತ್ತದೆ.
ಆದ್ಯ ಪತ್ರಕರ್ತರಾದ ನಾರದರು ಇಂದಿನ ಪತ್ರಕರ್ತರಿಗೆ ನೀಡಿದ ಮಾನದಂಡಗಳನ್ನು ವಿಶ್ಲೇಷಿಸುವುದು ಸಹ ಅಗತ್ಯವಾಗಿದೆ. ಮಾಯೆಯ ಅನುಭವ ಪಡೆಯಲು ಒಮ್ಮೆ ಹೆಣ್ಣಿನ ರೂಪವನ್ನು ಧರಿಸಿದ್ದರು. ಇದು ಅವರ ಅನುಭವದ ಪತ್ರಿಕೋದ್ಯಮ ಅಭ್ಯಾಸಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಜಗತ್ತಿನ ಬೇರೆಲ್ಲೂ ಕಾಣದ ಸಾವಿನ ಆತ್ಮವೃತ್ತಾಂತದ ಚರಿತ್ರೆಯನ್ನೂ ಬರೆದಿದ್ದಾರೆ. ಕಲಿಯುಗದಲ್ಲಿ ಭಕ್ತಿಮಾರ್ಗಕ್ಕೆ ಮಹತ್ವ ನೀಡಿದ ಫಲವಾಗಿ ಭಕ್ತಿಯ ಪ್ರಚಾರಕ್ಕಾಗಿ ಭಕ್ತಿಸೂತ್ರವನ್ನು ಬರೆದರು. ಕಲಿಯುಗದಲ್ಲಿ ಧರ್ಮದ ರಕ್ಷಣೆ ಮತ್ತು ಸದಾಚಾರ ಆಚರಣೆಯನ್ನು ಪ್ರೇರೇಪಿಸುವ ಶ್ರೀ ಸತ್ಯನಾರಾಯಣ ಕಥಾನಕವು ಪ್ರಚುರಗೊಂಡಿದ್ದೂ ನಾರದರಿಂದಲೇ, ‘ಮಹಾಭಾರತ’ದ ನಂತರ, ಮಹರ್ಷಿ ವೇದವ್ಯಾಸರು ಶಾಂತಿ ಮತ್ತು ಸಂತೋಷಕ್ಕಾಗಿ ಭಗವಾನ್ ಶ್ರೀ ಕೃಷ್ಣನ ಚರಿತ್ರೆಯನ್ನು ಬರೆಯಲು ಪ್ರೇರೇಪಿಸಿದರು. ಈ ಸ್ಪೂರ್ತಿಯ ಫಲವಾಗಿ ಮಹರ್ಷಿ ವೇದವ್ಯಾಸರು ಶ್ರೀಮದ್ಭಾಗವತವನ್ನು ಬರೆದರು. ಇದರೊಂದಿಗೆ ಇಂದ್ರಪ್ರಸ್ಥದ (ದೆಹಲಿ) ನಾಮಕರಣ ಮತ್ತು ‘ಕುರುಕ್ಷೇತ್ರ’ದ ನಾಮಕರಣ ಮತ್ತು ಇತಿಹಾಸವನ್ನು ನಾರದರು. ವಿವರಿಸಿದ್ದಾರೆ.
ಪತ್ರಿಕೋದ್ಯಮದ ಪ್ರಾರಂಭದಲ್ಲಿಯೇ ಆದ್ಯಪತ್ರಕರ್ತರಾದ ನಾರದರು ಪ್ರಸ್ತುತಪಡಿಸಿದ ಆದರ್ಶ ಮತ್ತು ಸ್ವರೂಪ ಅನನ್ಯವಾಗಿದೆ. ಮೊದಲ ಪತ್ರಕರ್ತರಾದ ಮಹರ್ಷಿ ನಾರದರ ಕೊಡುಗೆಯನ್ನು ನಾವು ಸದಾ ಸ್ಮರಿಸಬೇಕು. ಅವರು ಮಾನವೀಯತೆಯನ್ನು ಮಹಾ ವಿಪತ್ತುಗಳಿಂದ ರಕ್ಷಿಸಲು ಶ್ರಮಿಸಿದರು. ಒಮ್ಮೆ ಅರ್ಜುನನು ದಿವ್ಯಾಸ್ತಗಳನ್ನು ಪರೀಕ್ಷಿಸಲು ಹೊರಟಾಗ ಅರ್ಜುನನನ್ನು ಹಾಗೆ ಮಾಡದಂತೆ ತಡೆದು. “ದಿವ್ಯಾಸ್ತ್ರಗಳ ಪರೀಕ್ಷೆಯೆಂಬುದು ಪ್ರಯೋಗ ಮಾಡುವಂತಹುದಲ್ಲ. ಅವುಗಳನ್ನು ರಕ್ಕಸೀ ಶಕ್ತಿಗಳಿಂದ ಪ್ರಪಂಚವನ್ನು ರಕ್ಷಿಸಲು ಇದನ್ನು ಬಳಸಬೇಕು” ಎಂದು ನಾರದರು ಅರ್ಜುನನಿಗೆ ತಿಳಿ ಹೇಳಿದರಲ್ಲದೇ ಈ ಮೂಲಕ ದೇವರ್ಷಿ ನಾರದರು ಪತ್ರಿಕೋದ್ಯಮದ ಕರ್ತವ್ಯವನ್ನು ನಿರ್ವಹಿಸಿದರು. ಅವರ ಪತ್ರಿಕೋದ್ಯಮವು ಶ್ರೇಷ್ಠ ಮತ್ತು ಅತ್ಯುತ್ತಮವಾಗಿತ್ತು.
ಮಹರ್ಷಿ ನಾರದ:
ಪ್ರಸ್ತುತತೆ ಸಾಮಾಜಿಕ ಮಾಧ್ಯಮಗಳ ಈ ಕಾಲದ ಪತ್ರಿಕೋದ್ಯಮದಲ್ಲಿ ನಾರದರ ಹಾಕಿದ ಸಂಪ್ರದಾಯವು ಹೆಚ್ಚು ಪ್ರಸ್ತುತವಾಗಿದೆ. ಯಾವುದೇ ಕಾರ್ಯವು ಪ್ರಾರಂಭಗೊಂಡು, ಕ್ರಮೇಣ ಕಾಲಾನಂತರದಲ್ಲಿ ಅದರ ಕೆಲವು ಉನ್ನತ ಆದರ್ಶಗಳು ರೂಪಗೊಳ್ಳುತ್ತವೆ. ಕಾಲಾನಂತರದಲ್ಲಿ, ಆ ಕೆಲಸದಲ್ಲಿ ತೊಡಗಿರುವ ಜನರು ಆ ಆದರ್ಶಗಳ ಉದಾಹರಣೆಗಳನ್ನು ನೀಡಲು ಪ್ರಾರಂಭಿಸುತ್ತಾರೆ ಮತ್ತು ಆ ಆದರ್ಶಗಳನ್ನು ತಲುಪಲು ಪ್ರಯತ್ನಗಳನ್ನು ಮಾಡುತ್ತಾರೆ. ಆ ಕಾರ್ಯದಲ್ಲಿ ತೊಡಗಿರುವ ವ್ಯಕ್ತಿಯು ಆ ಆದರ್ಶಗಳನ್ನು ಅನುಸರಿಸಲು ಪ್ರಯತ್ನಿಸಿದರೆ, ಅವರನ್ನು ಪ್ರಶಂಸಿಸಲಾಗುತ್ತದೆ. ಎಲ್ಲರೂ ಈ ಆದರ್ಶಗಳನ್ನು ಅನುಸರಿಸಲು ಪ್ರಯತ್ನಿಸುತ್ತಾರೆ. ಎಷ್ಟು ಅನುಸರಿಸುತ್ತಾರೆ ಅಥವಾ ಇಲ್ಲವೋ ಎನ್ನುವುದು ಬೇರೆ ವಿಷಯ. ಆದರೆ ಆದರ್ಶಗಳು ಯಾವಾಗಲೂ ಕಣ್ಮುಂದೆ ಇರಬೇಕು ಏಕೆಂದರೆ ಅವುಗಳು ನಮಗೆ ಮಾರ್ಗದರ್ಶನವನ್ನು ನೀಡುತ್ತವೆ. ಒಬ್ಬ ಆದರ್ಶ ರಾಜಕಾರಣಿ ಹೇಗಿರಬೇಕು ಎಂಬುದಕ್ಕೆ ಸರ್ದಾರ್ ಪಟೇಲ್ ಅಥವಾ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಆದರ್ಶಗಳ ಉದಾಹರಣೆಗಳನ್ನು ಹೆಚ್ಚಾಗಿ ನೀಡಲಾಗುತ್ತದೆ. ಒಬ್ಬ ರಾಜತಾಂತ್ರಿಕ ಹೇಗಿರಬೇಕು? ಆಗ ರಾಜತಾಂತ್ರಿಕರು ಚಾಣಕ್ಯನ ಹೆಸರನ್ನು ತೆಗೆದುಕೊಳ್ಳುತ್ತಾರೆ. ಆದರ್ಶ ರಾಜ ಅಥವಾ ಆದರ್ಶ ರಾಜ್ಯ ಯಾವುದು ಎನ್ನುವುದಕ್ಕೆ ರಾಮರಾಜ್ಯದ ಉದಾಹರಣೆಯನ್ನು ನೀಡಲಾಗುತ್ತದೆ. ನಾವು ಸತ್ಯಸಂಧತೆಯ ಬಗ್ಗೆ ಮಾತನಾಡುವಾಗ, ಮಹಾರಾಜ ಹರಿಶ್ಚಂದ್ರನ ಉನ್ನತ ಆದರ್ಶದ ಹೆಸರನ್ನು ತೆಗೆದುಕೊಳ್ಳಲಾಗುತ್ತದೆ. ಹಾಗೆಯೇ, ಪತ್ರಿಕೋದ್ಯಮದ ಉನ್ನತ ಆದರ್ಶಗಳ ಬಗ್ಗೆ ಮಾತನಾಡುವಾಗ, ಮಹರ್ಷಿ ನಾರದರ ಹೆಸರು ಸುಲಭವಾಗಿ ನೆನಪಿಗೆ ಬರುತ್ತದೆ.
ವಾಸ್ತವವಾಗಿ, ಪತ್ರಿಕೋದ್ಯಮದಲ್ಲಿ ಆದರ್ಶಗಳ ಹುಡುಕಾಟ ಅಥವಾ ಆದರ್ಶ ಪತ್ರಕರ್ತನ ಗುರುತಿಸುವಿಕೆ ನಮ್ಮನ್ನು ಮಹರ್ಷಿ ನಾರದ ಬಳಿಗೆ ಕೊಂಡೊಯ್ಯುತ್ತದೆ. ಸುದ್ದಿಯನ್ನು ತೆಗೆದುಕೊಳ್ಳುವಲ್ಲಿ, ನೀಡುವಲ್ಲಿ ಅಥವಾ ವರದಿಗಳನ್ನು ರಚಿಸುವಲ್ಲಿ ಅವರು ನೀಡಿದ ಆದರ್ಶಗಳು ಮತ್ತು ಸಂಪ್ರದಾಯಗಳು ಇಂದಿನ ಪತ್ರಿಕೋದ್ಯಮಕ್ಕೆ ಮಾನದಂಡವಾಗಿದೆ. ಲೋಕಸಂಚಾರದಲ್ಲಿ ಅವರಿಂದ ನೀಡಲ್ಪಟ್ಟ ಮೌಲ್ಯಗಳು ಇಂದಿನ ಪತ್ರಕರ್ತರಿಗೆ ಆದರ್ಶವಾಗಿವೆ.
ನಾರದ ಜಯಂತಿಯ ಬಗ್ಗೆ ಪೂರ್ವಾಗ್ರಹ:
‘ಆದ್ಯಪತ್ರಕರ್ತ ದೇವರ್ಷಿ ನಾರದ’ ಎಂಬ ಈ ಶೀರ್ಷಿಕೆಯನ್ನು ನೋಡಿಯೇ ಅನೇಕ ಪ್ರಗತಿಪರ ಮತ್ತು ಉದಾರವಾದಿ ಪತ್ರಕರ್ತರು ಎಂದು ಹೇಳಿಕೊಳ್ಳುವವರು ಹುಬ್ಬೇರಿಸಬಹುದು. ಸಂಘದವರು ಎಲ್ಲದಕ್ಕೂ ಯಾವುದಾದರೊಂದು ಪೌರಾಣಿಕ ಉಲ್ಲೇಖಗಳನ್ನು ಹುಡುಕಲು ಮತ್ತು ಅದನ್ನು ಸಮಾಜದ ಮೇಲೆ ಹೇರಲು ಬಯಸುತ್ತಾರೆ ಎಂದು ಅವರು ಹೇಳಬಹುದು. ಈ ಕುರಿತು ಡಿವಿಜಿಯವರು ಹೀಗೆ ಹೇಳುತ್ತಾರೆ “ಈಗ ನಾರದರಿಲ್ಲ: ಪತ್ರಿಕಾ ಲೇಖಕರು ಅವರ ಸ್ಥಾನದಲ್ಲಿ ನಿಲ್ಲಬೇಕಾಗಿದೆ. ಒಂದು ವೇಳೆ ನಾರದರೇನಾದರೂ ಈಗ ನಮ್ಮ ಪ್ರಪಂಚಕ್ಕೆ ಬಂದರೆ, ಅವರನ್ನು ಹಿಂದಿನಂತೆ ಲೋಕವು ಪುರಸ್ಕರಿಸುವುದೋ-ಎಂಬ ವಿಷಯದಲ್ಲಿ ಸಂಶಯ ಪಡುವುದಕ್ಕೂ ಕಾರಣವುಂಟು, ಏಕೆಂದರೆ, ಈಗ ಭೂಲೋಕದಲ್ಲಿ ಸ್ವತಂತ್ರ ವಿಚಾರಬುದ್ದಿ ಹೆಚ್ಚುತ್ತಿವೆ “ನಾರದರ ವೀಣಾನಾದಕ್ಕೆ ಮರುಳಾಗಿ ಯಾರೂ ಅವರ ಮಾತಿಗೆ ‘ತಥಾಸ್ತು’ ಎನ್ನಬಾರದು – ಎಂದು ಎಚ್ಚರ ಹೇಳುವಷ್ಟು ಸ್ವತಂತ್ರರೂ ಧೈರ್ಯಶಾಲಿಗಳೂ ನಮ್ಮ ಪತ್ರಿಕಾ ಭಾತೃಗಳಲ್ಲಿಯೇ ಅನೇಕರಿದ್ದಾರೆ.”
ಆದರೆ ಜೇಷ್ಠ ಕೃಷ್ಣ ದ್ವಿತೀಯದ ಸಂದರ್ಭದಲ್ಲಿ ದೇಶದ ಹಲವು ರಾಜ್ಯಗಳಲ್ಲಿ ನಾರದ ಜಯಂತಿ ಕಾರ್ಯಕ್ರಮಗಳನ್ನು ಸಂಭ್ರಮದಿಂದ ಆಯೋಜಿಸಲಾಗುತ್ತಿದೆ ಎಂದು ತಿಳಿದರೆ ಅವರಿಗೆ ಇನ್ನಷ್ಟು ಆಶ್ಚರ್ಯಗೊಳ್ಳಬಹುದು. ಈ ಸಂದರ್ಭಗಳಲ್ಲಿ ಪತ್ರಕರ್ತರನ್ನು ಸನ್ಮಾನಿಸಲಾಗುತ್ತದೆ ಹಾಗೂ ರಾಷ್ಟ್ರೀಯ ದೃಷ್ಟಿಕೋನದಿಂದ ಮಾತನಾಡುವ ಹಿರಿಯ ಪತ್ರಕರ್ತರು ಮಾಧ್ಯಮದ ಕುರಿತು ಮಾತನಾಡುತ್ತಾರೆ.
ನಾರದ ಜಯಂತಿಯ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪತ್ರಕರ್ತರು ಭಾಗವಹಿಸುತ್ತಿದ್ದಾರೆ. ಯಾವುದೇ ರಾಜ್ಯದಲ್ಲಿ ಮೊದಲ ಬಾರಿಗೆ ಈ ಕಾರ್ಯಕ್ರಮ ನಡೆದರೆ ಕೆಲವರಿಂದ ಅಪಹಾಸ್ಯದ ಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು, ಆದರೆ ಈಗ ಅನೇಕ ರಾಜ್ಯಗಳಲ್ಲಿ ಇದು ಪ್ರತಿಷ್ಠಿತ ಕಾರ್ಯಕ್ರಮವಾಗಿದೆ. ದೇವರ್ಷಿ ನಾರದರು ಮೂಲ ಪತ್ರಕರ್ತರು ಎಂಬುದು ಸಂಘದ ಸೃಷ್ಟಿ ಎಂದು ಕೆಲವರು ಮಿಥ್ಯಾರೋಪ ಮಾಡಬಹುದು. ಆದರೆ ಭಾರತದ ಮೊದಲ ಹಿಂದಿ ವಾರಪತ್ರಿಕೆ ‘ಉದಾಂತ ಮಾರ್ತಾಂಡ’ ಮೇ 30, 1826 ರಂದು ಕೋಲ್ಕತ್ತಾದಲ್ಲಿ ಪ್ರಕಟಣೆ ಪ್ರಾರಂಭವಾದ ದಿನ ಜೇಷ್ಠ ಕೃಷ್ಣ ದ್ವಿತೀಯ, ಅಂದರೆ ನಾರದ ಜಯಂತಿಯಾಗಿತ್ತು. ಅದರ ಮೊದಲ ಸಂಚಿಕೆಯ, ಮೊದಲ ಪುಟದಲ್ಲಿ ಪತ್ರಿಕೆಯ ಸಂಪಾದಕರು ಸಂತಸ ವ್ಯಕ್ತಪಡಿಸಿದ್ದೇನೆಂದರೆ ‘ಆದ್ಯಪತ್ರಕರ್ತ ದೇವರ್ಷಿ ನಾರದರ ಜನ್ಮದಿನದ ಶುಭ ಸಂದರ್ಭದಲ್ಲಿ ಈ ಪತ್ರಿಕೆ ಪ್ರಕಟವಾಗುತ್ತಿದೆ’ ಎಂದು. ಈ ಘಟನೆಯು ಸಂಘ ಸ್ಥಾಪನೆಯ ಸುಮಾರು ಒಂದು ಶತಮಾನದ ಮೊದಲು ನಡೆದಿದ್ದು.
ಸಂಪೂರ್ಣಾನಂದರ ಪ್ರಕಾರ ‘ಪತ್ರಕರ್ತರು ಮಹರ್ಷಿ ನಾರದರನ್ನು ನಮ್ಮ ಆದ್ಯಗುರುವೆಂದು ಪರಿಗಣಿಸಬೇಕು. ಮಹರ್ಷಿ ನಾರದರು ಆಳವಾದ ಚಿಂತಕರಾಗಿದ್ದರು. ಅವರು ಶೌರ್ಯ, ಧೈರ್ಯ ಮತ್ತು ಆತ್ಮ ತ್ಯಾಗದ ಸುದ್ದಿಯನ್ನು ಜಗತ್ತಿನಾದ್ಯಂತ ಹರಡಿದರು. ಸದ್ಗುಣಗಳ ಖ್ಯಾತಿಯನ್ನು ಹರಡುವ ಮತ್ತು ವಿಪತ್ತು ಮತ್ತು ಆನೈಕ್ಯತೆಯನ್ನು ನಾಶಮಾಡುವ ಬಯಕೆಗಿಂತ ಬೇರೆ ಮತ್ತಾವ ಇನ್ನೊಂದು ಆದರ್ಶವಿದೆ?.
ವಾಸ್ತವವಾಗಿ, ನಾರದರು ಭಕ್ತಿಮಾರ್ಗದ ಸ್ಥಾಪನೆ ಮತ್ತು ಪ್ರಚಾರಕ್ಕಾಗಿ ಅವತಾರ ಎತ್ತಿದವರು. ಕಠಿಣ ತಪಸ್ಸಿನಿಂದ ಬ್ರಹ್ಮಋಷಿಯ ಸ್ಥಾನಮಾನ ಪಡೆದಿದ್ದಾರೆ. ದೇವರ್ಷಿ ನಾರದರು ಸದಾ ಧರ್ಮ ಪ್ರಚಾರ ಮತ್ತು ಜನಕಲ್ಯಾಣಕ್ಕೆ ಸಮರ್ಪಿತರು. ಈ ಕಾರಣಕ್ಕಾಗಿ, ನಾರದರು ಎಲ್ಲಾ ಯುಗಗಳಲ್ಲಿ ಎಲ್ಲಾ ಲೋಕಗಳಲ್ಲಿ, ಎಲ್ಲಾ ವಿದ್ಯೆಗಳಲ್ಲಿ, ಸಮಾಜದ ಎಲ್ಲಾ ವರ್ಗಗಳಲ್ಲಿ ಯಾವಾಗಲೂ ಇದ್ದಾರೆ. ದೇವತೆಗಳು ಮಾತ್ರವಲ್ಲದೆ ರಾಕ್ಷಸರು ಸಹ ಅವರನ್ನು ಯಾವಾಗಲೂ ಗೌರವಿಸುತ್ತಿದ್ದರು. ಕಾಲಕಾಲಕ್ಕೆ ಅವರನ್ನು ಆರಾಧಿಸಿದ್ದಾರೆ.