ಹೊನ್ನಾವರ : ಜನರ ಬಹು ನಿರೀಕ್ಷೆಯ ಕುಡಿಯುವ ನೀರಿನ ಯೋಜನೆಯಲ್ಲಿ ಒಂದಾದ ಜಲ ಜೀವನ ಮಿಷನ್ ಕಾಮಗಾರಿ ದೇಶಾದ್ಯಂತ ಶರವೇಗದಲ್ಲಿ ನಡೆಯುತ್ತಿದೆ. ಹೀಗಿರುವಾಗ ತಾಲೂಕಿನಲ್ಲಿ ಈ ಯೋಜನೆಯ ಕಾಮಗಾರಿ ನಿರ್ವಹಣೆ ಬಗ್ಗೆ ಅಲ್ಲಲ್ಲಿ ಅಪಸ್ವರ ಕೇಳಿಬರಲು ಪ್ರಾರಂಭವಾಗಿದೆ.
ತಾಲೂಕಿನ ಚಿತ್ತಾರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸದೆ, ಕಾಮಗಾರಿ ಮಾಡಲಾಗಿದೆ ಎಂದು ವರದಿ ಕೊಟ್ಟಿರುವ ಬಗ್ಗೆ ಮಾಹಿತಿ ಪಡೆದ ಸಾರ್ವಜನಿಕರು ಗ್ರಾ. ಪಂ. ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಇನ್ನೂ ಜಲವಳ್ಳಿ ಗ್ರಾ. ಪಂ. ವ್ಯಾಪ್ತಿಯ ಕೆಲವು ಕಡೆ ಕಳೆದ ಎರಡು ತಿಂಗಳ ಹಿಂದೆ ಅರೇಬರೆ ಕಾಮಗಾರಿ ನಡೆಸಿರುವುದರಿಂದ ಇತ್ತೀಚಿಗೆ ಸುರಿದ ಮಳೆಗೆ ರಸ್ತೆಯಲ್ಲಿ ಕೆಸರು ಮಣ್ಣು ಬಂದು ರಾಶಿ ಬಿದ್ದು ಸಂಚಾರ ಮಾಡಲು ಆಗುತ್ತಿಲ್ಲ ಎಂದು ಸಾರ್ವಜನಿಕರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಜಳವಳ್ಳಿ ಗ್ರಾ. ಪಂ. ವ್ಯಾಪ್ತಿಯ ಕಾನಗೋಡ, ಗಾವೇರಿ, ಕವಲಗೇರಿ ವ್ಯಾಪ್ತಿಯಲ್ಲಿ ಕಳೆದ ಎರಡು ತಿಂಗಳಿಂದ ಹಿಂದೆ ಅರೆಬರೇ ಕೆಲಸ ಮಾಡಿ ಪೂರ್ತಿ ಕೆಲಸ ಮಾಡದೆ ಹಾಗೆ ಬಿಟ್ಟು ಹೋಗಿದ್ದಾರೆ. ರಸ್ತೆ ಅಂಚಿನಲ್ಲಿ ಅಗೆದು ಮಣ್ಣು ಮೇಲಕ್ಕೆ ಎತ್ತಿ ಹಾಗೆ ಬಿಟ್ಟು ಹೋಗಿರುತ್ತಾರೆ. ಈ ಹಿಂದೆ ಇರುವ ಘಟಾರ ಕೆಲವು ಕಡೆ ಮುಚ್ಚಿ ಹೋಗಿದ್ದು ಅದನ್ನು ಸರಿಪಡಿಸಿಲ್ಲ. ಸುಡು ಬಿಸಿಲಿಗೆ ನೀರಿನ ಅಭಾವ ಉಂಟಾಗಿ ಜನರ ಪರದಾಟ ನಡೆಯುತ್ತಿರುವ ಸಮಯದಲ್ಲಿ ಈ ಯೋಜನೆಯ ಕೆಲಸವು ಕುಟ್ಟುತ್ತ ಸಾಗಿದೆ.
ಈ ಯೋಜನೆಯ ಅರೇಬರೆ ಕೆಲಸಕ್ಕೆ ಬೇಸಿಗೆಯಲ್ಲಿ ಜನರು ದೂಳು ತಿಂದಾಯ್ತು, ಈಗ ಸುರಿದ ಮಳೆಗೆ ಕೆಸರು ಮಣ್ಣು ರಸ್ತೆಗೆ ಬಂದು ರಾಸಿ ಬಿದ್ದಿದೆ. ಅಲ್ಲಲ್ಲಿ ಪೈಪ್ ಹಾಗೆ ಬಿಟ್ಟಿರುವುದರಿಂದ ಪೈಪ್ ನೊಳಗೆ ಮಣ್ಣಿನ ನೀರು ಸೇರುತ್ತಿದೆ. ಮುಂದೆ ಅದೇ ನೀರು ಕುಡಿಯುವ ಪರಿಸ್ಥಿತಿ ನಮ್ಮದಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು, ನಿರ್ವಹಣಾ ಸಮಿತಿ ಅಧ್ಯಕ್ಷ, ಪದಾಧಿಕಾರಿಗಳು ನಿರ್ಲಕ್ಷ ತೋರದೆ ಕಾಮಗಾರಿ ತ್ವರಿತವಾಗಿ ನಡೆಸಲು ಸಂಬಂಧ ಪಟ್ಟ ಗೂತ್ತಿಗೆದಾರರಿಗೆ ತಿಳಿಸಿ ಆದಷ್ಟು ಬೇಗ ಕುಡಿಯುವ ನೀರು ಜನರಿಗೆ ಸಿಗುವಂತೆ ಮಾಡಬೇಕು ಎಂದು ಸಾರ್ವಜನಿಕ ಬೇಡಿಕೆ ಆಗಿದೆ.
ಅರ್ಧ ರಸ್ತೆಯಲ್ಲಿ ಮಣ್ಣು ರಾಶಿ ಇಟ್ಟು ಗಾಡಿ ತಿರುಗಾಡಲು ಅಡಚಣೆ ಮಾಡಿರುತ್ತಾರೆ. ಕೆಲಸಗಾರರು ಕೇಳಿದರೆ ನಾವು ಕೆಲಸಗಾರರು ಗುತ್ತಿಗೆದಾರರು ಕೇಳಿ ಅನ್ನುತ್ತಾರೆ ಗುತ್ತಿಗೆದಾರರು ಯಾರು ಅನ್ನುವುದು ಗೊತ್ತಿಲ್ಲ, ಹೊರಗಿನವರಂತೆ ಸ್ಥಳೀಯರು ಸಬ್ ಕಾಂಟ್ರಾಕ್ಟ್ ತಕ್ಕೊಂಡಿರುತ್ತಾರೆ. ಪಿಡಬ್ಲ್ಯೂ.ಇಂಜಿನಿಯರ್. ಪಿಡಿಓ. ಎಲ್ಲವರಿಗೂ ಸಂಪರ್ಕ ಮಾಡಿದ್ದೇವೆ ಎರಡು ಮೂರು ತಿಂಗಳಿಂದ ಯಾವುದಕ್ಕೂ ಯಾರು ಸ್ಪಂದಿಸುತ್ತಿಲ್ಲ. ಇವರ ಕೆಲಸ ಹೋಂಡಾ ತೆಗೆಯುವುದು ಪೈಪ್ ಹಾಕಿ ಮುಚ್ಚುವುದು ಬಿಲ್ ಮಾಡಿಕೊಳ್ಳುವುದು ಪೂರ್ಣಕಾಮಗಾರಿ ಮುಗಿಸುವ ಲಕ್ಷಣಗಳು ಯಾವುದೂ ಕಾಣುವುದಿಲ್ಲ. ಕಾಮಗಾರಿಯು ಕಳೆಪೆ ನಡೆದಿದೆ ಎಂದು ದೂರು ನೀಡಿದ್ದೇವೆ ಯಾವುದೇ ಇಂಜಿನಿಯರ್ ಯಾರೊಬ್ಬರೂ ಕೂಡ ಸ್ಥಳಕ್ಕೆ ಬಂದಿಲ್ಲ ಎಂದು ಸ್ಥಳೀಯರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.