ಜೊಯಿಡಾ: ಪಂಚಮಸಾಲಿ ಲಿಂಗಾಯತ ಸಮುದಾಯವನ್ನು 2 ಎ ಮೀಸಲಾತಿಗೆ ಹಾಗೂ ಲಿಂಗಾಯತರನ್ನು ಒಬಿಸಿ ಪಟ್ಟಿಗೆ ಸೇರಿಸಲು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುವ ಬಗ್ಗೆ ಹೋರಾಟ ಮಾಡಲು ತೀರ್ಮಾನಿಸಿದಂತೆ ಉಳವಿಯ ಶ್ರೀ ಚನ್ನಬಸವೇಶ್ವರ ಸಭಾಭವನದಲ್ಲಿ ಕೂಡಲ ಸಂಗಮ ಮಠದ ಬಸವಜಯ ಮೃತ್ಯುಂಜಯ ಸ್ವಾಮಿಯವರ ನೇತೃತ್ವದಲ್ಲಿ ಬೃಹತ್ ಸಭೆ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಉಳವಿಯಲ್ಲಿ ನಮ್ಮ ಸಮಾಜದ ಮೊದಲ ಸಭೆ ಇದು. ಚುನಾವಣೆಯ ಪೂರ್ವದಲ್ಲಿ ರಾಜಕಾರಣಿಗಳು ನಮಗೆ ಸಾಕಷ್ಟು ಆಶ್ವಾಸನೆ ನೀಡಿದ್ದರು. ನಂತರ ಅವರು ಯಾರ ಫೋನಿಗೂ ಸಿಗುತ್ತಿಲ್ಲ. ಹಾಗಾಗಿ ನಾವು ಯಾವ ರಾಜಕಾರಣಿಗಳನ್ನು ಇಂದಿನ ಸಭೆಗೆ ಕರೆದಿಲ್ಲ. ಇಂದಿನ ಸಭೆಯ ನಂತರ ಒಂದು ತೀರ್ಮಾನಕ್ಕೆ ಬಂದು ನಾವು ನಮ್ಮ ಮುಂದಿನ ಹೋರಾಟ ಏನು ಎಂದು ಹೇಳುತ್ತೇವೆ.
ಹಿಂದೆ ವಚನ ಸಾಹಿತ್ಯ ಉಳಿವಿಗೆ ಚನ್ನಬಸವಣ್ಣ ಉಳುವಿಗೆ ಬಂದು ಸಾಧನೆ ಮಾಡಿದಂತೆ ನಾವು ನಮ್ಮ ಹೋರಾಟದ ತೀರ್ಮಾನವನ್ನು ಉಳವಿಯಿಂದಲೇ ಆರಂಭಿಸಲು ತೀರ್ಮಾನಿಸಿದ್ದೇವೆ. ಈ ತೀರ್ಮಾನದಿಂದ ಹಿಂದೆ ಸರಿಯುವ ಮಾತೆ ಇಲ್ಲ. ರಾಜಕಾರಣ ಶಾಶ್ವತವಲ್ಲ. ಆದರೆ ಸಮಾಜ ಶಾಶ್ವತ, ನಮ್ಮ ಸಮಾಜದ ಜನತೆಯ ಒಳ್ಳೆಯದಕ್ಕೆ ನಾವು ತೆಗೆದುಕೊಳ್ಳುವ ತೀರ್ಮಾನದಿಂದ ಹಿಂದೆ ಸರಿಯುವುದಿಲ್ಲ.
ಹಿಂದೆ ಹೋರಾಟ ಮಾಡಿದಂತೆ ಬರುವ ಅಧಿವೇಶನದಲ್ಲಿ ಕೂಡ ನಮ್ಮ ಸಮಾಜದ ಎಲ್ಲ ಪಕ್ಷದ ಶಾಸಕರೂ ಒಂದೇ ಧ್ವನಿಯಲ್ಲಿ ನಮ್ಮ ನಿರ್ಣಯ ಒಪ್ಪಿಕೊಳ್ಳುವಂತೆ ಮಾಡಬೇಕಾಗಿದೆ. ಅಗತ್ಯ ಬಿದ್ದರೆ ವಿಧಾನ ಸೌಧದ ಎದುರು ಧರಣಿ ಮಾಡುವುದಕ್ಕೂ ಹಿಂದೆ ಬೀಳೋದಿಲ್ಲ.
ಬೇರೆಯವರು ಬದುಕಲಿಕ್ಕೆ ತ್ಯಾಗ ಮಾಡಿದ ಸಮಾಜ ಇಂದು ಬದುಕನ್ನು ಕಟ್ಟಿ ಕೊಳ್ಳಲು ಹೋರಾಟ ಮಾಡಬೇಕಾದ ಸ್ಥಿತಿ ಬಂದಿದೆ. ಭಾರತದ ಜನ ಬದುಕನ್ನು ಕಟ್ಟಿಕೊಳ್ಳಲು ಚೆನ್ನಮ್ಮ ತ್ಯಾಗ ಮಾಡಿದರು. ಇಡೀ ಜಗತ್ತಿನ ಜನ ಊಟ ಮಾಡಲಿ ಎಂದು ನಮ್ಮ ಜನ ಒಕ್ಕಲುತನ ಮಾಡಿ ಅನ್ನ ಕೊಡುತ್ತಿದ್ದಾರೆ. ಜಗತ್ತನ್ನು ಬದುಕಿಸಿದ ಸಮಾಜ ನಮ್ಮದು ಇಡೀ ಸಮಾಜಕ್ಕೆ ನ್ಯಾಯ ಕೊಟ್ಟ ಸಮಾಜ ಪಂಚಮಸಾಲಿ ಸಮಾಜ. ಇಷ್ಟಿದ್ದರೂ ನಮ್ಮ ಬದುಕಿನ ಬಗ್ಗೆ ಸರಕಾರದ ಮುಂದೆ ಹೋರಾಟ ಮಾಡಬೇಕಾಗಿದೆ. ಕಳೆದ ಮೂರು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ ಈಗ ನೀತಿ ಸಂಹಿತೆ ಇದೆ. ಹಿಂದಿನ ಸರಕಾರದ ಕೊನೆ ಘಳಿಗೆಯ ತೀರ್ಮಾನ ನಮ್ಮ ಕೈ ಗೆ ಬರಲಿಲ್ಲ. ಈ ಸರ್ಕಾರ ಕಳೆದ ಒಂಬತ್ತು ತಿಂಗಳಿಂದ ನಮಗೆ ಸ್ಪಂದನೆ ಕೂಡ ಮಾಡಿಲ್ಲ. ನಮ್ಮಿಂದನೆ ಬಂದ ಸರ್ಕಾರದ ವಿರುದ್ಧ ನಮಗೆ ಆಕ್ರೋಶವಿದೆ ಕನಿಷ್ಟ ಮಾತನಾಡುವ ಸೌಜನ್ಯ ಕೂಡ ಈ ಸರಕಾರಕ್ಕೆ ಇಲ್ಲ.
ಈ ಸರಕಾರ ಏನೂ ಮಾಡದೇ ಇರುವ ಕಾರಣ ನಮ್ಮ ಸಮಾಜದ ಮಕ್ಕಳ ಮುಂದಿನ ಭವಿಷ್ಯದ ದೃಷ್ಟಿಯಿಂದಲಾದರೂ ನಾವು ಒಂದು ದಾರಿ ಕಂಡುಕೊಳ್ಳಬೇಕಾಗಿದೆ. ಆ ದಿಶೆಯಲ್ಲಿ ಚರ್ಚಿಸುವ ಸಲುವಾಗಿ ನಾವು ಉಳವಿಯಲ್ಲಿ ಸೇರಿದ್ದೇವೆ. ಬೆಳಗಾಂ , ಧಾರವಾಡ , ಗದಗ , ಹಾವೇರಿ , ಬಿಜಾಪುರ , ಕಾರವಾರ, ಕೊಪ್ಪಳ , ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ ಪ್ರಮುಖರು ವಿಷಯ ತಿಳಿಸಿ ಒಂದು ತೀರ್ಮಾನ ತೆಗೆದುಕೊಳ್ಳೋಣ , ಆ ಮೂಲಕ ಸರಕಾರಕ್ಕೆ ನಮ್ಮ ದಿಟ್ಟ ಉತ್ತರ ಕೊಡೋಣ ನಮ್ಮ ಸಮಾಜವೇ ಚುನಾವಣೆಯಲ್ಲಿ ನಿರ್ಣಾಯಕ ಸಮಾಜವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಲ್ಲಿಕಾರ್ಜುನ ಹೀರೆಕೊಪ್ಪ ನಮ್ಮ ಸಮಾಜಕ್ಕೆ ಆಗಿರುವ ಅನ್ಯಾಯವನ್ನು ನಾವು ಸರಿಪಡಿಸಲು ಕೇಳಿಕೊಳ್ಳುತ್ತಿದೇವೆ. ಈ ಬಗ್ಗೆ ಸರಕಾರ ಕೊಡಲೇ ಅಗತ್ಯ ಕ್ರಮ ಕೈ ಕೊಳ್ಳಬೇಕಾಗಿದೆ ಎಂದರು. ದ್ಯಾಮಣ್ಣ ಗೌಡ ಪಾಟೀಲ ಮಾತನಾಡಿ ಪಂಚಮಸಾಲಿ ಜನರ ಜಾತಿ ಗಣತಿ ಸರಿಯಾಗಿಲ್ಲ. ನಮ್ಮ ಜನರು ಹೆಚ್ಚಿದ್ದರೂ ಕೇವಲ 60 ಲಕ್ಷ ಎಂದು ತೋರಿಸಲಾಗಿದೆ. ನಮ್ಮನ್ನು 2 ಎ ಗೆ ಸೇರಿಸಲು ಒತ್ತಾಯಿಸುವ ಸಲುವಾಗಿ ಸಂಕಲ್ಪ ಯಾತ್ರೆಯನ್ನು ಉಳವಿಯ ವರೆಗೆ ಹಮ್ಮಿಕೊಂಡಿದ್ದೇವೆ ಎಂದರು
ಸಭೆಯಲ್ಲಿ ಸುಮಾರು ಐನೂರು ಜನರು ಸೇರಿದ್ದರು.
ಸಭೆಯಲ್ಲಿ ನಿಗದಿತ 3 ಗಂಟೆಗೆ ಸಭೆ ಸೇರಿದರೂ ಸ್ವಾಮೀಜಿಯವರು ಒಂದು ಗಂಟೆ ತಡವಾಗಿ ಬಂದರು ಇದರಿಂದಾಗಿ ಸಭೆಯಲ್ಲಿ ಚರ್ಚೆಗಳು ಮುಂದು ವರೆದಿದ್ದವು. ಪಂಚಮಸಾಲಿ ಜನರ ಹೋರಾಟದ ನಿರ್ಣಯಗಳು ತಡವಾಗಿ ಸಿಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.