ಸಿದ್ದಾಪುರ: ಈ ಭೂಮಿ ಯಕ್ಷಗಾನ ಕಲೆಗೆ ಹದನಾದದ್ದು. ಇಲ್ಲಿನ ಕಲಾವಿದರು ಯಕ್ಷಗಾನದ ಅಭ್ಯುಧಯಕ್ಕೆ ಕಾರಣರಾಗಿದ್ದಾರೆ ಎಂದು ಉದ್ಯಮಿ, ಶ್ರೀ ಅನಂತ ಯಕ್ಷಕಲಾ ಪ್ರತಿಷ್ಠಾನದ ಅಧ್ಯಕ್ಷ ವಿ.ಎಂ.ಭಟ್ಟ ಕೊಳಗಿ ಹೇಳಿದರು.
ಅವರು ಶಿರಳಗಿಯ ಶ್ರೀ ಲಕ್ಷ್ಮಿನೃಸಿಂಹ ದೇವಸ್ಥಾನದ ಸಭಾಭವನದಲ್ಲಿ ಶ್ರೀ ಅನಂತ ಯಕ್ಷಕಲಾ ಪ್ರತಿಷ್ಠಾನ ಆಯೋಜಿಸಿದ ಲಂಕಾ ದಹನ ಯಕ್ಷಗಾನ ಆಖ್ಯಾನದ ಪೂರ್ವದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಪ್ರಸಿದ್ಧ ಕಲಾವಿದ ಕೊಳಗಿ ಅನಂತ ಹೆಗಡೆಯವರ ಹೆಸರಿನಲ್ಲಿ ರೂಪುಗೊಂಡ ಅನಂತ ಯಕ್ಷಕಲಾ ಪ್ರತಿಷ್ಠಾನ ಯಕ್ಷಗಾನದ ಕುರಿತಾಗಿ ಹಲವು ವರ್ಷಗಳಿಂದ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಯಕ್ಷಕಲೆಗೆ ಕೊಡುಗೆ ನೀಡಿದ ಹಿರಿಯರನ್ನು ಗೌರವಿಸುತ್ತ ಬಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅರ್ಥಪೂರ್ಣವಾಗಿ ಕಾರ್ಯಕ್ರಮ ಹಮ್ಮಿಕೊಳ್ಳುವ ಯೋಜನೆಯಿದೆ ಎಂದರು.
ಆಶಯ ಮಾತುಗಳನ್ನಾಡಿದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ ಸಂಘಟನೆಗಳು ತನ್ನ ಉದ್ದೇಶಕ್ಕೆ ಬದ್ಧವಾಗಿ ಕಾರ್ಯಕ್ರಮ ಆಯೋಜಿಸಿದಾಗ ಆಕ್ಷೇತ್ರಕ್ಕೆ ಸೂಕ್ತ ಗೌರವ ದೊರೆಯುತ್ತದೆ.ಅದನ್ನು ಅನಂತ ಯಕ್ಷಕಲಾ ಪ್ರತಿಷ್ಠಾನ ನಡೆಸಿಕೊಂಡು ಬರುತ್ತಿದೆ. ಅನಂತ ಹೆಗಡೆಯವರು ಪ್ರಾರಂಭದಲ್ಲಿ ಯಕ್ಷಗಾನ ಕಲೆಯ ತೊಡಗಿಕೊಂಡದ್ದು ಕೊಳಗಿ-ಶಿರಳಗಿ ಹವ್ಯಾಸಿ ಮೇಳ. ಅನಂತ ಹೆಗಡೆ ಮಾತ್ರವಲ್ಲದೇ ಇದೇ ಮೇಳದಲ್ಲಿದ್ದ ಗೋಡೆ ನಾರಾಯಣ ಹೆಗಡೆ, ಭಾಸ್ಕರ ಜೋಶಿ, ತಿಮ್ಮಪ್ಪ ಹೆಗಡೆ, ಕೇಶವ ಹೆಗಡೆ ಮುಂತಾದವರು ದೇಶ,ವಿದೇಶಗಳಲ್ಲೂ ಯಕ್ಷಕಲೆಯನ್ನು ವಿಸ್ತರಿಸಿದವರು. ಅವರಂತೆ ಸಮರ್ಥ ಕಲಾವಿದರಾದ ತಿಮ್ಮಪ್ಪ ಭಟ್ಟ, ಗಜಾನನ ಭಟ್ಟ, ಗೋಪಾಲ ಭಟ್ಟ,ಗಣಪತಿ ಹೆಗಡೆ ಕೊಳಗಿ ಮುಂತಾದವರು ಕೂಡ ಹವ್ಯಾಸಿ ಕಲಾವಿದರಾಗೇ ಹೆಸರು ಮಾಡಿದವರು. ಅನೇಕ ಯುವ ಕಲಾವಿದರೂ ಈಗಲೂ ಸಕ್ರೀಯರಾಗಿದ್ದಾರೆ.ಅಂಥದೊಂದು ಹಿರಿಮೆ ಇಲ್ಲಿನ ಮೇಳಕ್ಕಿದೆ ಎಂದರು.
ಅತಿಥಿಗಳಾದ ಗ್ರಾಪಂ ಸದಸ್ಯ ಶ್ರೀಕಾಂತ ಭಟ್ಟ ಯಕ್ಷಗಾನ ನಮ್ಮ ಅರಿವನ್ನು ಹೆಚ್ಚಿಸುತ್ತದೆ.ಅದರ ಉಳಿವಿಗೆ ಪ್ರೇಕ್ಷಕರಾದ ನಮ್ಮ ಕೊಡುಗೆಯೂ ಅಗತ್ಯ ಎಂದರು.ಶ್ರೀ ಲಕ್ಷ್ಮಿನೃಸಿಂಹ ದೇವಾಲಯದ ಆಡಳಿತ ಸಮಿತಿ ಅಧ್ಯಕ್ಷ ರಾಮಚಂದ್ರ ಹೆಗಡೆ ಕಾರ್ಯಕ್ರಮ ಉದ್ಘಾಟಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಕೇಶವ ಹೆಗಡೆ ಕೊಳಗಿ ಸ್ವಾಗತಿಸಿದರು. ಗಣಪತಿ ಹೆಗಡೆ ಗುಂಜಗೋಡ ನಿರೂಪಿಸಿ,ವಂದಿಸಿದರು.
ನಂತರ ಲಂಕಾದಹನ ಯಕ್ಷಗಾನ ಪ್ರದರ್ಶನಗೊಂಡಿತು. ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ,ಶಂಕರ ಭಾಗವತ ಯಲ್ಲಾಪುರ,ವಿಘ್ನೇಶ್ವರ ಕೆಸರಕೊಪ್ಪ.ಮುಮ್ಮೇಳದಲ್ಲಿ ತಿಮ್ಮಪ್ಪ ಹೆಗಡೆ(ಜಾಂಬವಂತ), ಅಶೋಕ ಭಟ್ಟ ಸಿದ್ದಾಪುರ(ಹನುಮಂತ), ಭಾಸ್ಕರ ಜೋಶಿ(ಸೀತೆ), ಪ್ರಣವ್ ಭಟ್ಟ(ರಾವಣ), ವೆಂಕಟೇಶ ಬೊಗರಿಮಕ್ಕಿ(ಲಂಕಿಣಿ),ಶಿವು ಶಿರಳಗಿ(ಸರಮೆ) ಮುಂತಾದವರು ಪಾತ್ರ ನಿರ್ವಹಿಸಿದರು.