ಕಾರವಾರ: ಜಿಲ್ಲೆಯಲ್ಲಿ ಈ ಬಾರಿಯ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದ ಸ್ಥಳಗಳಲ್ಲಿ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಮುಖ್ಯಮಂತ್ರಿಗಳಿಗೆ ತಿಳಿಸಿದರು.
ಅವರು ಗುರುವಾರ, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ, ರಾಜ್ಯದಲ್ಲಿ ಬರ ನಿರ್ವಹಣೆ ಮತ್ತು ಮುಂಗಾರು ಪೂರ್ವ ಸಿದ್ದತೆಗಳ ಕುರಿತು ನಡೆದ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗಿನ ವೀಡಿಯೋ ಸಂವಾದ ಸಭೆಯಲ್ಲಿ ಮಾತನಾಡಿದರು.
ಈ ಬಾರಿಯ ಬೇಸಿಗೆಯಲ್ಲಿ ಜಿಲ್ಲೆಯಲ್ಲಿ 118 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿದ್ದು, ಈ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಮತ್ತು ಖಾಸಗಿ ಬೋರ್ವೆಲ್ ಗಳ ಮೂಲಕ ನೀರು ಪೂರೈಕೆ ಮಾಡಿದ್ದು, ಸಮಸ್ಯೆ ತಲೆದೋರಬಹುದಾದ ಗ್ರಾಮಗಳನ್ನು ಮುಂಚಿತವಾಗಿ ಗುರುತಿಸಿ, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕಾರಣ ಯಾವುದೇ ಸಮಸ್ಯಾತ್ಮಕ ಗ್ರಾಮಗಳು ಇಲ್ಲದಂತೆ ಸಮಸ್ಯೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದ್ದು, ಕುಡಿಯುವ ನೀರು ಪೂರೈಕೆ ಮಾಡಿರುವವರ ವೆಚ್ಚವನ್ನೂ ಸಹ ಪಾವತಿ ಮಾಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಮುಂಗಾರು ಪೂರ್ವ ಸಿದ್ದತೆಗಳ ಕುರಿತಂತೆ ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ, ಅಗತ್ಯ ನಿರ್ದೇಶನಗಳನ್ನು ನೀಡಲಾಗಿದ್ದು, ಕೃಷಿ ಚಟುವಟಕೆಗಳಿಗೆ ಯಾವುದೇ ಅಡಚಣೆಯಾಗದಂತೆ ಸಾಕಷ್ಟು ಪ್ರಮಾಣದ ರಸಗೊಬ್ಬರ, ಭಿತ್ತನೆ ಬೀಜ ಮತ್ತು ಕೀಟನಾಶಕಗಳ ದಾಸ್ತಾನು ಮಾಡಿಕೊಳ್ಳಲಾಗಿದೆ, ಬೆಳೆ ಪರಿಹಾರದ ಮೊತ್ತವನ್ನು ರೈತರ ಖಾತೆಗಳಿಗೆ ಜಮೆ ಮಾಡಲಾಗಿದ್ದು, ಜಿಲ್ಲೆಯಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಈ ಬಾರಿ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಬೀಳುವ ಮುನ್ಸೂಚನೆ ಇದ್ದು, ಎಲ್ಲಾ ಜಿಲ್ಲೆಗಳಲ್ಲಿ ರೈತರಿಗೆ ಭಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳ ಕೊರತೆಯಾಗದಂತೆ ಎಚ್ಚರವಹಿಸಬೇಕು. ರೈತರಿಗೆ ಸಕಾಲದಲ್ಲಿ ಬ್ಯಾಂಕ್ ಸಾಲ ದೊರೆಯುವಂತೆ ಮಾಡಬೇಕು. ಮಳೆಯಿಂದ ಸಂಭವಿಸುವ ಪ್ರಾಕೃತಿಕ ವಿಕೋಪಗಳನ್ನು ಸಮರ್ಥವಾಗಿ ನಿರ್ವಹಿಸಲು ಅಗತ್ಯ ಮುನ್ನೆಚ್ಚರಿಕೆ ಕೈಗೊಂಡು ಮಾನವ ಜೀವಹಾನಿ ತಪ್ಪಿಸಬೇಕು. ಕಲುಷಿತ ನೀರಿನಿಂದ ಕಾಲರಾದಂತಹ ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರವಹಿಸಬೇಕು. ಕುಡಿಯುವ ನೀರು ಕಲುಷಿತಗೊಂಡು ಅನಾಹುತಗಳಾದಲ್ಲಿ ಸಂಬ0ಧಪಟ್ಟ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದರು.
ಬಜೆಟ್ನಲ್ಲಿ ಘೋಷಣೆ ಮಾಡಲಾದ ಕಾಮಗಾರಿಗಳನ್ನು ಅನುಷ್ಠಾನ ಮಾಡಲು ತ್ವರಿತಗತಿಯಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು. ನೀತಿ ಸಂಹಿತೆ ಸಡಿಗೊಂಡಿರುವ ಹಿನ್ನಲೆಯಲ್ಲಿ ಟೆಂಡರ್ ಪ್ರಕ್ರಿಯೆಗಳನ್ನು ಮುಗಿಸಿ, ಕಾಮಗಾರಿಗೆ ಕಾರ್ಯಾದೇಶ ನೀಡಬೇಕು. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಬರ ಮತ್ತು ವಿಕೋಪ ನಿರ್ವಹಣೆಯ ಮೊತ್ತವನ್ನು ವೆಚ್ಚ ಮಾಡಿ ಸಾರ್ವಜನಿಕರಿಗೆ ನೆರವು ಒದಗಿಸಬೆಕು. ಸರ್ಕಾರದ ಅಭಿವೃಧ್ದಿ ಕಾರ್ಯಕ್ರಮಗಳ ಪ್ರಯೋಜನ ಎಲ್ಲಾ ಅರ್ಹರಿಗೆ ದೊರೆಯುವಂತೆ ನೋಡಿಕೊಳ್ಳಬೇಕು. ಜಿಲ್ಲಾಧಿಕಾರಿಗಳು ತಮ್ಮ ವ್ಯಾಪ್ತಿಯ ಅಧೀನ ಕಚೇರಿಗಳಿಗೆ, ಶಾಲೆಗಳಿಗೆ, ಹಾಸ್ಟೆಲ್ ಗಳಿಗೆ, ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸುವುದರ ಮೂಲಕ ಆಡಳಿತ ಯತ್ರವನ್ನು ಚುರುಕುಗೊಳಿಸಬೇಕು. ನಮ್ಮ ಸರ್ಕಾರವು ತಪ್ಪು ಮಾಡುವ ಅಧಿಕಾರಿಗಳ ವಿರುದ್ದ ಸೂಕ್ತ ಶಿಸ್ತು ಕ್ರಮ ಹಾಗೂ ಉತ್ತಮ ಕಾರ್ಯ ಮಾಡುವ ಅಧಿಕಾರಿಗಳನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಲಾಗುವುದು ಎಂದರು.
ಮುಖ್ಯಮ0ತ್ರಿಗಳೊ0ದಿಗೆ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೃಷ್ಣ ಭೈರೇಗೌಡ, ಹೆಚ್.ಕೆ.ಪಾಟೀಲ್, ಮುನಿಯಪ್ಪ, ಚೆಲುವರಾಯ ಸ್ವಾಮಿ, ಪ್ರಿಯಾಂಕ ಖರ್ಗೆ,ಭೈರತಿ ಸುರೇಶ್,ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.