ಹೊನ್ನಾವರ: ಇಂದಿನ ಕಾಲಘಟ್ಟದಲ್ಲಿ ಯಾವುದೇ ಕೆಲಸ ಆಗಬೇಕು ಅಂದರೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಬಿಟ್ಟಿದೆ. ಆಧಾರ್ ಕಾರ್ಡ್ ಇಲ್ಲ ಹೇಳಾದರೆ ಅವರು ಆಧಾರವನ್ನೇ ಕಳೆದುಕೊಂಡಂತೆ. ಅದರಲ್ಲಿಯೂ ಇದ್ದ ಆಧಾರ್ ಕಾರ್ಡ್ ದಿನಕ್ಕೊಂದು ತಿದ್ದುಪಡಿ, ಮೊಬೈಲ್ ನಂಬರ್ ಜೋಡಣೆ, ಮರು ನವೀಕರಣ ಅಂತ ಆಧಾರ್ ಹಿಡಿದು ಒಡಾಡುತ್ತಲೇ ಇರಬೇಕಾಗಿದೆ.
ಹೀಗಿರುವಾಗ ಅದಕ್ಕೆ ಸಂಬಂಧ ಪಟ್ಟ ಕೆಲಸಕೆಂದು ತಹಸೀಲ್ದಾರ್ ಕಚೇರಿಗೆ ಹೋದರೆ ಹತ್ತು ದಿನ ಬಿಟ್ಟು ಬನ್ನಿ ಎಂದು ಬೋರ್ಡ್ ಜೋತು ಬಿಟ್ಟಿದ್ದಾರೆ. ಇನ್ನೂ ಅಂಚೆ ಕಚೇರಿಯಲ್ಲಿಯೂ ಮಾಡಲಾಗುತ್ತಿಲ್ಲ. ಕೆಲವು ಖಾಸಗಿ ಸರ್ವಿಸ್ ಸೆಂಟರ್ ನಲ್ಲಿ ಆಧಾರ್ ಗೆ ಸಂಬಂಧಪಟ್ಟ ಪೂರ್ಣ ಪ್ರಮಾಣದ ಕೆಲಸ ಆಗುತ್ತಿಲ್ಲ. ಶಾಲಾ-ಕಾಲೇಜು ಪ್ರಾರಂಭಗೊಳ್ಳುತ್ತಿದ್ದು, ವಿದ್ಯಾರ್ಥಿಗಳ ಆಧಾರ್ ಮರು ನವೀಕರಿಸಬೇಕಿದೆ. ಅದರ ಹೊರತಾಗಿ ಬೇರೆ ಬೇರೆ ಕೆಲಸಕ್ಕೆ ಆಧಾರ್ ತಿದ್ದುಪಡಿ ಆಗಬೇಕು. ಆದರೆ ಕಳೆದ ಒಂದು ತಿಂಗಳಿನಿಂದ ತಹಸೀಲ್ದಾರ್ ಕಚೇರಿಯಲ್ಲಿ ಈ ಕೆಲಸ ಸ್ಥಗಿತಗೊಂಡಿದೆ.
ತಹಸೀಲ್ದಾರ್ ಕಚೇರಿಯ ಆಧಾರ್ ಕಾರ್ಡ್ ವಿಭಾಗ ನಿರ್ವಹಣೆ ಮಾಡುತ್ತಿರುವವರು ಮಾಡಿದ ಒಂದು ಸಣ್ಣ ವ್ಯತ್ಯಾಸ ಆಧಾರ್ ಸರ್ವಿಸನ್ನೇ ರದ್ದುಗೊಳಿಸಲಾಗಿದೆ ಎನ್ನಲಾಗಿದೆ. ಆಧಾರ್ ಕಾರ್ಡ್ ಗೆ ಸಂಬಂಧಪಟ್ಟ ಕೆಲಸ ಮಾಡುವಾಗ ದಾಖಲೆ ನೀಡುವಲ್ಲಿ ಆಗಿರುವ ಆಚಾತುರ್ಯ ಒಂದು ವರ್ಷದ ಆಧಾರ್ ಐಡಿಯನ್ನು ರದ್ದು ಪಡಿಸಿದ ಕಾರಣ ಸಾರ್ವಜನಿಕರು ಆಧಾರ್ ಕಾರ್ಡ್ ಕೆಲಸದಿಂದ ವಂಚಿತರಾಗುವಂತಾಗಿದೆ. ಕಳೆದ ಹಲವು ವರ್ಷದಿಂದ ಈ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಉತ್ತಮವಾಗಿ ಕೆಲಸ ಮಾಡುತ್ತಿದ್ದರು. ದಿನಕ್ಕೆ ಅತೀ ಹೆಚ್ಚು ಆಧಾರ್ ತಿದ್ದುಪಡಿ ಇನ್ನಿತರ ಕೆಲಸ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಹೇಳುತ್ತಿದ್ದಾರೆ. ಕೆಲಸದ ಗಡಿಬಿಡಿಯಲ್ಲಿ ನಡೆದ ಅತಾಚುರ್ಯ ಆಧಾರ್ ಸೇವೆಯೇ ರದ್ದಾಗುವಂತಾಗಿದೆ.
ಕಳೆದ ಒಂದು ತಿಂಗಳಿನಿಂದ ಸಾವಿರಾರು ಜನ ಆಧಾರ್ ಕಾರ್ಡ್ ಕೆಲಸಕ್ಕೆ ಅಲೆದಾಡುತ್ತಿದ್ದಾರೆ. ಕುಮಟಾ ಅಥವಾ ಬೇರೆ ತಾಲೂಕಿಗೆ ಹೋಗುವ ಪರಿಸ್ಥಿತಿ ಇದೆ. ಸಾರ್ವಜನಿಕರ ಅನುಕೂಲಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳು, ಸಚಿವರು, ಶಾಸಕರು ಆಧಾರ್ ಐಡಿ ಮರಳಿ ಪಡೆಯುವ ಕೆಲಸ ಮಾಡಬೇಕಿದೆ.
ಸಾರ್ವಜನಿಕರ ಅನುಕೂಲಕ್ಕಾಗಿ ತಹಸೀಲ್ದಾರ್ ಕಚೇರಿಯಲ್ಲಿ ಆಧಾರ್ ಸರ್ವಿಸ್ ಆದಷ್ಟು ಬೇಗ ಪ್ರಾರಂಭಗೊಳ್ಳಬೇಕು. ಹೊನ್ನಾವರ ತಹಸೀಲ್ದಾರ್ ಕಚೇರಿಯ ಆಧಾರ್ ವಿಭಾಗ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿತ್ತು. ಸಣ್ಣ ವ್ಯತ್ಯಾಸ ಉಂಟಾಗಿ ಆಧಾರ್ ಐಡಿ ರದ್ದುಗೊಳಿಸಿರುವ ಬಗ್ಗೆ ಮಾಹಿತಿ ತಿಳಿದಿದೆ. ಸಂಬಂಧ ಪಟ್ಟವರು ಆದಷ್ಟು ಬೇಗ ಈ ಹಿಂದಿನಂತೆ ಪುನಃ ಪ್ರಾರಂಭ ಮಾಡಬೇಕಿದೆ ಎಂದು ಕಾಸರಕೋಡ ಗ್ರಾ. ಪಂ. ಸದಸ್ಯರಾದ ಚಂದ್ರಹಾಸ ಗೌಡ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.