ಹೊನ್ನಾವರ: ಅಂತಾರಾಷ್ಟ್ರೀಯ ಮನ್ನಣೆ ಪಡೆದು ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುತ್ತಿರುವ ಕಾಸರಕೋಡ್ ಇಕೋ ಬೀಚ್ ನ ಸೊಬಗು ಸಂಬಂಧಪಟ್ಟವರ ಅಸರ್ಮಪಕ ನಿರ್ವಹಣೆಯಿಂದ ಕುಂದುತ್ತಿದೆ.
ಬ್ಯೂಪ್ಲ್ಯಾಗ್ ಮಾನ್ಯತೆ ಪಡೆದ ಇಕೋ ಬೀಚ್ ಹಾಗೂ ಸನಿಹದಲ್ಲೇ ಇರುವ ಇಕೋ ಪಾರ್ಕಿನ ಸೌಂದರ್ಯ ವೀಕ್ಷಿಸಲು ದೇಶದ ವಿವಿಧೆಡೆಯಲ್ಲದೇ ವಿದೇಶದಿಂದಲೂ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದರೆ ಇಲ್ಲಿಯ ಸೌಂದರ್ಯ ಹೆಚ್ಚಿಸಲು ನಿರ್ಮಿಸಿದ ವಿವಿಧ ಕಲಾಕೃತಿಗಳು, ವಿಶ್ರಾಂತಿ ಆಸನ, ಮಕ್ಕಳ ಆಟಿಕೆ ಹಾನಿಯಾದರೂ ಅದರ ದುರಸ್ತಿಪಡಿಸುವ ಗೋಜಿಗೆ ಹೋಗಿಲ್ಲ. ಮೂಲ ಅಂದ ಕಳೆದುಕೊಂಡ ಕಲಾಕೃತಿ, ಮುರಿದು ಬಿದ್ದ ಬೆಂಚ್ ಅಲ್ಲಿಯ ವ್ಯವಸ್ಥೆಯನ್ನು ಅಣಕಿಸುವಂತಿದೆ.
ಪ್ರವಾಸಿಗರು ಪ್ರಕೃತಿ ಸೌಂದರ್ಯ ಕುಳಿತುಕೊಂಡು ಆಸ್ವಾದಿಸಲು ಮಾಡಲಾದ ಕಬ್ಬಿಣದ ಬೆಂಚುಗಳು ಅಪಾಯ ಸ್ಥಿತಿ ತಲುಪಿದೆ. ತುಕ್ಕು ಹಿಡಿದು, ಅಲ್ಲಲ್ಲಿ ರಂದ್ರ ಬಿದ್ದಿದೆ. ಇನ್ನೂ ಕೆಲವು ಅಡ್ಡಾದಿಡ್ದಿಯಾಗಿ ನೆಲ ಕಚ್ಚಿದೆ. ಕೆಲವು ಕಾಲು ಕೈ ಮುರಿದು ಗುಜರಿಯಲ್ಲಿ ಬಿದ್ದಂತೆ ಬಿದ್ದುಕೊಂಡಿದೆ. ಇನ್ನೂ ಪ್ರಾರಂಭದಲ್ಲಿ ಹುಲ್ಲು ಮತ್ತು ತಗಡಿನ ಹೊದಿಕೆಯಿಂದ ಮಾಡಲಾಗಿದ್ದ ವಿಶ್ರಾಂತಿಯ ತಾಣ ಕಾಣದಂತೆ ಮಾಯವಾಗಿದೆ. ಕಲಾಕೃತಿಯ ಒಂದಕ್ಕೆ ಕೈ ಇಲ್ಲ, ಮತ್ತೊಂದು ಅರ್ಧ ಕೈ ಕಬ್ಬಿಣದ ಸಲಾಖೆ ಕಾಣುತ್ತಿದೆ. ಇನ್ನೂ ಕೆಲವು ಕಲಾಕೃತಿ ನೆಲಕ್ಕೆ ಬಿದ್ದುಕೊಂಡಿದೆ. ಸಿಮೆಂಟ್ ನಿಂದ ಮಾಡಲಾದ ಆಸನದ ವ್ಯವಸ್ಥೆ ಮುರಿದು ಬಿದ್ದಿದೆ. ಕಸದ ಬುಟ್ಟಿಯಲ್ಲಿ ಕಸಹಾಕಿದರೆ ನೆಲಕ್ಕೆ ಬೀಳುತ್ತಿದೆ. ಪ್ರವಾಸಿಗರರ ಬಳಕೆಗೆ ಸಮರ್ಪಕ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯದಲ್ಲಿ ಕೆಂಪು ರಾಡಿ ನೀರು ಬರುತ್ತಿದೆ. ಅಲ್ಲಲ್ಲಿ ನೀರಿನ ಬಾಟಲಿ, ಪ್ಲಾಸ್ಟಿಕ್ ಬಿದ್ದು, ಸ್ವಚ್ಚತೆ ಮರಿಚೀಕೆಯಾಗಿದೆ. ಜಾಲತಾಣದ ಮೂಲಕ ಮಾಹಿತಿ ಪಡೆದು ಇಲ್ಲಿಯ ಪ್ರಕೃತಿ ಸೌಂದರ್ಯ ವೀಕ್ಷಿಸಲು ಬಂದರೆ ಇಕೋ ಪಾರ್ಕ್ ಒಳಗಡೆಯ ಅವ್ಯವಸ್ಥೆ ಮಾನ್ಯತೆಯ ಮಾನ ಕಳೆಯುವಂತಿದೆ.