Slide
Slide
Slide
previous arrow
next arrow

ನಾಡಗುಳಿ ಚಿತ್ರಕಲಾ ಪ್ರದರ್ಶನ ಯಶಸ್ವಿ; ಮಂತ್ರಮುಗ್ಧವಾಗಿಸಿದ ತಬಲಾ ಸೋಲೊ,ಭಕ್ತಿಭಾವ ಸಂಗೀತ

300x250 AD

ಶಿರಸಿ: ನಗರದ ಹೊಟೆಲ್ ಸುಪ್ರಿಯಾ ಇಂಟರ್‌ನ್ಯಾಶನಲ್‌ನ ಸಂಭ್ರಮ ಸಭಾಭವನದಲ್ಲಿ ಎರಡು ದಿನಗಳ ಕಾಲ ಏರ್ಪಡಿಸಲಾಗಿದ್ದ ಚಿತ್ರಕಲಾವಿದೆ ರೇಖಾ ಸತೀಶ ಭಟ್ಟ ನಾಡಗುಳಿಯವರ ಚಿತ್ರಕಲಾ ಪ್ರದರ್ಶನದಂಗವಾಗಿ ಸಂಘಟಿಸಿದ್ದ ತಬಲಾ ಸೋಲೊ ಹಾಗೂ ಭಕ್ತಿಭಾವ ಸಂಗೀತ ಕಿಕ್ಕೇರಿದ ಕಲಾಭಿಮಾನಿಗಳ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದೆ.

ಆರಂಭಿಕವಾಗಿ ನಡೆದ ತಬಲಾ ಸೋಲೊದಲ್ಲಿ ರಾಷ್ಟ್ರಮಟ್ಟದ ತಬಲಾ ಖ್ಯಾತಿಯ ಡಾ.ಉದಯ ಕುಲಕರ್ಣಿ ಗೋವಾ ತಮ್ಮ ತಬಲಾ ವಾದನದಲ್ಲಿ ಬೊಲ್‌ಗಳನ್ನು ವೈವಿಧ್ಯಮಯವಾಗಿ ನುಡಿಸುತ್ತಾ ಚಿತ್ರಕಲಾ ಪ್ರದರ್ಶನಕ್ಕೊಂದು ಹೊಸತನದ ಮೆರಗು ನೀಡಿದರು.ಈ ಸಂದರ್ಭದಲ್ಲಿ ತೆಹರಾದಲ್ಲಿ ದತ್ತರಾಜ ಮಹಲ್ಗಿ ಸುಂದರವಾಗಿ ಸಹಕರಿಸಿದರೆ ಸಹ ತಬಲಾ ವಾದನದಲ್ಲಿ ಹೈದರಾಬಾದಿನ ಆದಿತ್ಯ ಕುಲಕರ್ಣಿ ಸಾಥ್ ನೀಡಿದರು.

ನಂತರ ಆರಂಭಗೊಂಡ ಭಕ್ತಿಭಾವ ಸಂಗೀತದಲ್ಲಿ ಖ್ಯಾತ ವಿದುಷಿ ರೇಖಾ ದಿನೇಶ್ ಅವರು ಆರಂಭಿಕವಾಗಿ ಪರಿಸರಕ್ಕೆ ಸಂಬಂಧಪಟ್ಟ ಸುಂದರ ಸಾಹಿತ್ಯವುಳ್ಳ ಹಾಡಿನೊಂದಿಗೆ ತಮ್ಮ ಗಾನ ಕಾರ್ಯಕ್ರಮ ಆರಂಭಿಸಿದರು.ತದನಂತರದಲ್ಲಿ ಜನಪ್ರಿಯವಾದ ರಾಮಭಜನೆ ಹಾಡುತ್ತ ಪ್ರೇಕ್ಷಕರ ಗ್ಯಾಲರಿ ಕೂಡಾ ರಾಮನಾಮ ಭಜಿಸುವಂತೆ ಮಾಡಿದ್ದು ಕಲಾಭಿಮಾನಿಗಳಿಗೆ ರಸದೂಟ ನೀಡಿದಂತಾಗಿತ್ತು.ಉತ್ತಮ ಸಾಹಿತ್ಯದ ಭಾವಗೀತೆ,ಭಕ್ತಿಗೀತೆಯನ್ನು ಹಾಡುತ್ತ ಕೊನೆಯಲ್ಲಿ ರಾಗ್ ಭೈರವಿಯಲ್ಲಿ ತರಾನಾದೊಂದಿಗೆ ಸಂಗೀತ ಕಾರ್ಯಕ್ರಮ ಸಮಾಪ್ತಿಗೊಳಿಸಿದಾಗ ಇಡೀ ಸಭಾಭವನದಲ್ಲಿ ಕರತಾಡನ ಶಬ್ದ ಮೊಳಗಿತ್ತು.

300x250 AD

ವಿ.ರೇಖಾರವರ ಗಾನಕ್ಕೆ ತಬಲಾದಲ್ಲಿ ಡಾ.ಉದಯ ಕುಲಕರ್ಣಿ,ಹಾರ್ಮೊನಿಯಂನಲ್ಲಿ ಅಜೇಯ ಹೆಗಡೆ ಸಮರ್ಥವಾಗಿ ಸಾಥ್ ನೀಡಿ ಸೈ ಎನಿಸಿಕೊಂಡರೆ, ಹಿನ್ನೆಲೆಯ ತಾಳದಲ್ಲಿ ಕಿರಣ ಕಾನಗೋಡ ಹಾಗೂ ಸಹಗಾನ ಮತ್ತು ತಂಬುರಾದಲ್ಲಿ ಯುವ ಗಾಯಕಿಯರಾದ ಪೃಥ್ವಿ ಬೊಮ್ನಳ್ಳಿ ಮತ್ತು ಸ್ನೇಹಾ ಅಮ್ಮೀನಳ್ಳಿ ಸಹಕರಿಸಿದರು.
ರೇಖಾ ಸತೀಶ ಭಟ್ಟ ದಂಪತಿ ಮತ್ತು ಕುಟುಂಬದವರು ಸೇರಿ ಎಲ್ಲಾ ಕಲಾವಿದರಿಗೆ ಶಾಲು ಹೊದೆಸಿ ಸ್ಮರಣಿಕೆಯೊಂದಿಗೆ ಗೌರವಿಸಿದರೆ,ಗಿರಿಧರ ಕಬ್ನಳ್ಳಿ ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿದರು.

Share This
300x250 AD
300x250 AD
300x250 AD
Back to top