ಸಿದ್ದಾಪುರ; ಒಂದು ಕಾಲದಲ್ಲಿ ಗೋಪಾಲಕ ಎಂದರೆ ಯಾತಕ್ಕೂ ಬೇಡದವ ಎನ್ನುವ ಭಾವನೆ ಇತ್ತು. ಹೀಗಾಗಿಯೇ ವಾಡಿಕೆಯಲ್ಲಿ ಕಡಿಮೆ ಬುದ್ಧಿ ಇದ್ದವರನ್ನು “ದನಕಾಯಲು ಹೋಗು” ಎಂದು ಜರೆಯಲಾಗುತ್ತಿತ್ತು. ಆದರೆ ಶ್ರೀಕೃಷ್ಣ ಪರಮಾತ್ಮ ಮಾಡಿದ ಈ ಕಾಯಕದಷ್ಟು ಪವಿತ್ರ ಕಾರ್ಯ ಬೇರಿಲ್ಲ ಎಂದು ಶ್ರೀ ರಾಮಚಂದ್ರಾಪುರಮಠ ಮಹಾಸಂಸ್ಥಾನದ ಶ್ರೀ ರಾಘವೇಶ್ವರಭಾರತೀ ಶ್ರೀಗಳು ಹೇಳಿದರು.
ತಾಲೂಕಿನ ಭಾನ್ಕುಳಿಯ ಶ್ರೀ ರಾಮದೇವಮಠದಲ್ಲಿ ನಡೆಯುತ್ತಿರುವ ಶಂಕರಪಂಚಮೀ ಉತ್ಸವದಲ್ಲಿ ಗೋವಿನ ಕುರಿತಾಗಿ ಗಣನೀಯ ಸೇವೆಸಲ್ಲಿಸುತ್ತಿರುವ ಐವರಿಗೆ ಕಾಮದುಘಾ ಟ್ರಸ್ಟ್ ವತಿಯಿಂದ ಗೋಪಾಲ ಗೌರವವನ್ನು ಅನುಗ್ರಹಿಸಿ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡುತ್ತಿದ್ದರು. ಗೋಸೇವೆ ಮಾಡಿದರೆ ಅಂತವರ ಬುದ್ಧಿಶಕ್ತಿ ಚುರುಕಾಗುತ್ತದೆ ಎಂಬ ಕಾರಣಕ್ಕೆ ಬಹುಶಃ ಹಿಂದಿನವರು ದನಕಾಯಲು ಕಳಿಸುತ್ತಿದ್ದರು ಎಂದು ತರ್ಕಿಸಲೂ ಅವಕಾಶವಿದೆ. ಗೋವುಗಳೆಂದರೆ ಒಂದು ದೃಷ್ಟಿಯಲ್ಲಿ ಚಲಿಸುವ ವಿಶ್ವವಿದ್ಯಾಲಯಗಳೆಂದು ಪರಿಗಣಿಸಬೇಕು. ಬೇಂಚು, ಡೆಸ್ಕ, ಚಾಕ್ಪೀಸ್ ಇಲ್ಲದಿದ್ದರೂ ಗೋವುಗಳು ಮೌನದಲ್ಲಿ ಮಾಡುವ ಬೋಧನೆ ಮನುಷ್ಯರನ್ನು ಸರಿದಾರಿಯಲ್ಲಿ ಹಚ್ಚುವ ದಾರಿದೀಪವಾಗಿದೆ. ಇಂತಹ ಗೋವುಗಳ ವಿಚಾರದಲ್ಲಿ ಹಲವು ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿರುವ ಈ ಐವರೂ ಸಾಧಕರು ಸಮಾಜದ ಆಸ್ತಿ ಎಂದು ಶ್ರೀಗಳು ವಿಶ್ಲೇಷಿಸಿದರು.
ಗೋಪಾಲಗೌರವ ಕಾರ್ಯಕ್ರಮದಲ್ಲಿ ಸಹಯೋಗ ನೀಡಿದ ಮುಂಬೈನ ದಿನೇಶ ಶಹರಾ ಫೌಂಡೇಶನ್ ಸಂಸ್ಥಾಪಕ ಉದ್ಯಮಿ ದಿನೇಶ ಶಹರಾ ಅವರು ಮಾತನಾಡಿ ನಮ್ಮದು ಸನಾತನ ಧರ್ಮ. ನಾವು ವಸುದೈವ ಕುಟುಂಬಕಂ ಎಂಬ ಧ್ಯೇಯವನ್ನು ಹೊಂದಿದವರು. ಹೀಗೆ ಒಂದೇ ಭೂಮಿಯಲ್ಲಿ ಹುಟ್ಟಿ ಬೆಳೆದ ನಾವು ಏಕೆ ಪರಸ್ಪರರಲ್ಲಿ ದ್ವೇಷ, ಭಯೋತ್ಪಾದನೆ, ದೊಂಬಿಯಂತಹ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಇರುವ ಮೂರುದಿನದಲ್ಲಿ ನಮ್ಮಿಂದಾಗುವಷ್ಟು ಸತ್ಕಾರ್ಯ ಮಾಡಬೇಕು. ಹೀಗಾಗಿಯೇ ನಮ್ಮ ಫೌಂಡೇಶನ್ ಮೂಲಕ ವಿಕಲಚೇತನರಿಗಾಗಿ, ಜನಸಾಮಾನ್ಯರಿಗಾಗಿ, ಗೋವಿಗಾಗಿ, ಆರೋಗ್ಯ ತಪಾಸಣೆ, ಚಿಕಿತ್ಸೆ, ಉಚಿತ ಔಷಧೋಪಚಾರ ನೀಡಲು ಮುಂದಾಗಿದ್ದೇವೆ. ಇಂತಹ ಕಾರ್ಯಗಳಿಂದಾಗಿ ಮನಸ್ಸಿಗೆ ಸಂತಸ ದೊರೆಯುವ ಜೊತೆ, ಜೀವನಕ್ಕೆ ಸಾರ್ಥಕತೆ ಬರುತ್ತದೆ. ಇಲ್ಲಿ ನಡೆಯುತ್ತಿರುವ ಗೋಸೇವೆಯ ಕಾಯಕದಲ್ಲಿ ಶ್ರೀ ರಾಘವೇಶ್ವರಭಾರತೀ ಶ್ರೀಗಳು ನಮಗೂ ಕಿಂಚಿತ್ ಸೇವೆಯ ಅವಕಾಶ ನೀಡಿದ್ದು ನಮ್ಮ ಸುದೈವ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಗೋವಿನ ಕುರಿತಾಗಿ ಸತ್ಕಾರ್ಯ ಮಾಡುತ್ತಿರುವ ಕೇರಳ ಕಾಸರಗೋಡಿನ ಪೆರಿಯದ ಶ್ರೀಮತಿ ನಾಗರತ್ನಾ ವಿಷ್ಣು ಹೆಬ್ಬಾರ, ಹುಬ್ಬಳ್ಳಿಯ ಸಮಾಜಸೇವಕ ಮಹೇಂದ್ರ ಹಸ್ತಿಮಲ್ಜಿ ಸಿಂಘಿ, ಕಾಸರಗೋಡಿನ ನೆಕ್ಕಲಕೆರೆಯ ಸುಬ್ರಹ್ಮಣ್ಯಪ್ರಸಾದ, ದೊಡ್ಡಬಳ್ಳಾಪುರ ಘಾಟಿಸುಬ್ರಹ್ಮಣ್ಯದ ಡಾ.ಜೀವನಕುಮಾರ, ಬೈಲಹೊಂಗಲದ ಬಾಬುರಾವ್ ಪಾಟೀಲ ಇವರುಗಳಿಗೆ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಗೋಪಾಲ ಗೌರವ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವದಿಸಿದರು. ವೇದಿಕೆಯಲ್ಲಿ ದಿನೇಶ ಶಹರಾ ಫೌಂಡೆಶನ್ನ ಶ್ರೀಮತಿ ಮೀರಾಜಿ ಉಪಸ್ಥಿತರಿದ್ದರು. ಶ್ರೀಮತಿ ಜಾನ್ಹವಿ ಶಿರಸಿ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಕಾಮದುಘಾ ಟ್ರಸ್ಟನ ಡಾ.ವೈ.ವಿ. ಕೃಷ್ಣಮೂರ್ತಿ ಪ್ರಾಸ್ತಾವಿಕ ಮಾತನಾಡಿದರು. ಗಣಪತಿ ಹೆಗಡೆ ಗುಂಜಗೋಡ ನಿರ್ವಹಿಸಿದರು.