ಯಲ್ಲಾಪುರ: ದೇವಾಲಯವು ಊರಿನ ಹೃದಯ ಇದ್ದಂತೆ. ಹೃದಯವು ಮನುಷ್ಯನ ದೇಹದ ರಕ್ತವನ್ನು ಶುದ್ದೀಕರಿಸಿ ಆರೋಗ್ಯವನ್ನು ಕಾಪಾಡುವಂತೆ, ದೇವಾಲಯಗಳು ಚಿಂತೆ,ಬೇಸರ ಮುಂತಾದವುಗಳಿಂದ ಕೂಡಿರುವ ಭಕ್ತರ ಅಶುದ್ಧ ಮನಸ್ಸುಗಳನ್ನು ಶುದ್ಧಗೊಳಿಸುತ್ತವೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ನುಡಿದರು
ಬುಧವಾರ ಯಲ್ಲಾಪುರ ತಾಲೂಕಿನ ಬಿಲ್ಲಿಗದ್ದೆಯ ರಾಮಲಿಂಗೇಶ್ವರ ದೇವಾಲಯದ ಅಷ್ಟಬಂಧ ಮಹೋತ್ಸವದ ಸಮಾರೋಪ ಸಮಾರಂಭದ ಧರ್ಮಸಭೆಯಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಹೃದಯದ ಆರೋಗ್ಯ ಸರಿಯಾಗಿದ್ದರೆ ಶರೀರದ ಆರೋಗ್ಯ ಸರಿಯಾಗಿರುವಂತೆ ದೇವಾಲಯಗಳ ವ್ಯವಸ್ಥೆ ಸರಿಯಾಗಿದ್ದರೆ ಆ ಊರಿನ ಸ್ಥಿತಿ ಸರಿಯಾಗಿರುತ್ತದೆ. ಹಾಗಾಗಿ ಊರಿನ ದೇವಾಲಯಗಳಲ್ಲಿ ಸರಿಯಾಗಿ ಪೂಜೆ, ಉತ್ಸವಾದಿಗಳು, ಅನ್ನದಾನ ನಡೆಯುವಂತೆ ನೋಡಿಕೊಳ್ಳಬೇಕು. ಇದರಿಂದ ಊರಿಗೆ ಕ್ಷೇಮವಾಗುತ್ತದೆ.
ಅಷ್ಟಬಂಧ ಮಹೋತ್ಸವ ಎಂದರೆ ದೇವಾಲಯದಲ್ಲಿ ದೇವರ ಸಾನ್ನಿಧ್ಯ ಪುನಃ ನವೀಕರಣಗೊಂಡಂತೆ. ಪುನಃ ಪ್ರತಿಷ್ಠೆ ಆದಂತೆ. ಶಿವಲಿಂಗ ಹಾಗೂ ಸೋಮಸೂತ್ರಕ್ಕೆ ಅಷ್ಟಬಂಧದ ಮೂಲಕವೇ ಸಂಬಂಧ ಇರುತ್ತದೆ. ವಿಶೇಷವಾಗಿ ಶಿವನ ಸಾನ್ನಿಧ್ಯ ಇರುವಲ್ಲಿ ಮತ್ತು ಪೀಠದ ಮೇಲೆ ಮೂರ್ತಿ ಇರುವಲ್ಲಿ ಆಗಾಗ ಅಷ್ಟಬಂಧ ನಡೆಯುತ್ತಿರಬೇಕು. ನಿತ್ಯ ಪೂಜೆಯ ಮೂಲಕ ದೇವರ ಸಾನ್ನಿಧ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.
ಅಷ್ಟಬಂಧ ಮಹೋತ್ಸವದ ನಿಮಿತ್ತ ದೇವಾಲಯದಲ್ಲಿ ವೇ.ಚಂದ್ರಚೂಡ ಭಟ್ಟ ಕಟ್ಟೆಯವರ ನೇತೃತ್ವದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆ ನಡೆಯಿತು. ಸ್ವರ್ಣವಲ್ಲೀ ಶ್ರೀಮದ್ ಆನಂದಬೋಧೇಂದ್ರ ಸ್ವರಸ್ವತೀ ಸ್ವಾಮೀಜಿಯವರ ಪೂರ್ವಾಶ್ರಮದ ತಂದೆ- ತಾಯಿಯವರಾದ ಈರಾಪುರದ ಗಣಪತಿ ಭಟ್ಟ ಹಾಗೂ ಭುವನೇಶ್ವರಿ ಭಟ್ಟ ಅವರನ್ನು ದೇವಾಲಯದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.