Slide
Slide
Slide
previous arrow
next arrow

ಸಿಇಟಿ ಗೊಂದಲಕ್ಕೆ ಸೂಕ್ತ ನಿರ್ಧಾರ ಪ್ರಕಟಿಸಲು ಆಗ್ರಹ

300x250 AD

ಕುಮಟಾ: ಪ್ರಸ್ತುತ ಸಾಲಿನಲ್ಲಿ ನಡೆಸಿದ ಸಿಇಟಿ ಪರೀಕ್ಷೆಯು ವಿದ್ಯಾರ್ಥಿಗಳಿಗೆ, ಹೆತ್ತವರಿಗೆ ಮತ್ತು ಅಧ್ಯಾಪಕ ವೃಂದದವರಿಗೂ ಗೊಂದಲದ ಮತ್ತು ಆತಂಕದ ಗೂಡಾಗಿದೆ. ಸರಕಾರ, ಮಕ್ಕಳ ಭವಿಷ್ಯದ ಜೊತೆಗೆ ಆಟ ಆಡುವುದು, ಪರೀಕ್ಷೆಯಲ್ಲಿ ಗೊಂದಲ ಸೃಷ್ಟಿಸಿ, ಮಕ್ಕಳು ಮಾನಸಿಕವಾಗಿ ಕುಗ್ಗುವಂತಾಗುವುದು ಭವಿಷ್ಯದ ದೃಷ್ಟಿಯಿಂದ ಒಳಿತಲ್ಲ. ಹೀಗಾಗಿ ಈ ಬಗ್ಗೆ ಶೀಘ್ರವಾಗಿ ಒಂದು ಸೂಕ್ತ ನಿರ್ಧಾರ ಪ್ರಕಟಿಸುವ ಮೂಲಕ ಎಲ್ಲ ಗೊಂದಲ ಪರಿಹರಿಸಬೇಕು ಎಂದು ಕರ್ನಾಟಕ ಅನುದಾನರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ (ಕುಪ್ಮಾ)ದ ಉತ್ತರ ಕನ್ನಡ ಜಿಲ್ಲಾ ಸಮಿತಿಯ ಸಂಯೋಜಕ ಗುರುರಾಜ ಶೆಟ್ಟಿ ಆಗ್ರಹಿಸಿದರು.

ಅವರು ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ವಿಧಾತ್ರಿ ಅಕಾಡಮಿ ಸಹಭಾಗಿತ್ವದ ಸರಸ್ವತಿ ಪಿ.ಯು. ಕಾಲೇಜಿನಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಶಿಕ್ಷಣ ಕೋರ್ಸುಗಳ ಪ್ರವೇಶಕ್ಕಾಗಿ ನಡೆಯುವ ಪ್ರವೇಶ ಪರೀಕ್ಷೆ ಸಿಇಟಿಯು ಈ ವರ್ಷ ವಿದ್ಯಾರ್ಥಿಗಳ ಪಾಲಿಗೆ ಸ್ನೇಹಪರವಾಗಿ ಇರದೇ ದುಸ್ತಪ್ಪವಾಗಿ ಪರೀಕ್ಷಾ ಕೊಠಡಿಯಲ್ಲಿಯೇ ಆತಂಕಕ್ಕೆ ಒಳಗಾಗುವ ಪರಿಸ್ಥಿತಿಯನ್ನು ಕರ್ನಾಟಕ ಪರೀಕ್ಷಾ ಮಂಡಳಿ (ಕೆಇಎ) ತಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಶೈಕ್ಷಣಿಕ ವರ್ಷವೂ ಪ್ರತೀವರ್ಷದಂತೆ ಸುಮಾರು 3 ಲಕ್ಷ ವಿದ್ಯಾರ್ಥಿಗಳು ರಾಜ್ಯಾದ್ಯಾಂತ ಸಿಇಟಿ ಪರೀಕ್ಷೆ ಬರೆಯುತ್ತಾರೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇದುವರೆಗೂ ಪರೀಕ್ಷೆಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಕೆಇಎ ಅವರು ಸಮನ್ವಯತೆಯಿಂದ ಸುಸೂತ್ರವಾಗಿ ನಡೆಸಿಕೊಂಡು ಬರುತ್ತಿದ್ದರು. ಆದರೆ, ಈ ವರ್ಷ ನಡೆಸಿದ ಸಿಇಟಿ ಪರೀಕ್ಷೆಯು ವಿದ್ಯಾರ್ಥಿಗಳಿಗೆ, ಹೆತ್ತವರಿಗೆ ಮತ್ತು ಅಧ್ಯಾಪಕ ವೃಂದದವರಿಗೂ ಗೊಂದಲದ ಮತ್ತು ಆತಂಕದ ಗೂಡಾಗಿದೆ ಎಂದು ಅವರು ತಿಳಿಸಿದರು.

ಸಿಇಟಿಯ ನಾಲ್ಕು ಪರೀಕ್ಷೆಗಳಲ್ಲಿ ಅಂದರೆ ಜೀವಶಾಸ್ತ್ರ ಮತ್ತು ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳಲ್ಲಿ ಕೇಳಲಾಗಿರುವ ಪ್ರಶ್ನೆಗಳು ಪದವಿ ಪೂರ್ವ ಶಿಕ್ಷಣ ಇಲಾಖೆಯು ಪಠ್ಯ ಪುಸ್ತಕದಿಂದ ತೆಗೆದು ಹಾಕಿರುವ ಅಧ್ಯಾಯಕ್ಕೆ ಸಂಬಂಧಿಸಿದ 45ಕ್ಕಿಂತ ಹೆಚ್ಚು ಪಶ್ನೆಗಳನ್ನು ಪಠ್ಯದ ಹೊರತಾಗಿ ಕೇಳಲಾಗಿದೆ. ಸಿಇಟಿ ಪರೀಕ್ಷೆಯ ಸಿಲೆಬಸ್ ಪದವಿ ಪೂರ್ವ ಶಿಕ್ಷಣ ಇಲಾಖೆಯು ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿಭಾಗಕ್ಕೆ ಅಳವಡಿಸಿರುವ ಪಠ್ಯದ ವಿಷಯಗಳನ್ನೇ ಒಳಗೊಂಡಿರುತ್ತದೆ. ಇದನ್ನು ಕೆಇಎ ಇಲಾಖೆಯು ಬಿಡುಗಡೆ ಮಾಡಿರುವ ಸಿಇಟಿ ಕೈಪಿಡಿಯ ಪುಟ ಸಂಖ್ಯೆ 29ರಲ್ಲಿ ಉಲ್ಲೇಖವಾಗಿದೆ. ಹಾಗಾಗಿ ಕರ್ನಾಟಕ ಪಿಯು ಬೋರ್ಡ್ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಯಾವ ಸಿಲೆಬಸ್ ನೀಡುತ್ತದೋ ಅದರ ಆಧಾರದ ಮೇಲೆ ಕೆಇಎ ಸಿಇಟಿಯಲ್ಲಿ ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಬೇಕು.

ಮೊದಲ ದಿನ ನಡೆದ ಎರಡು ಪರೀಕ್ಷೆಗಳಲ್ಲಿ ಪಠ್ಯದ ಹೊರತಾಗಿ ಪ್ರಶ್ನೆಗಳು ಬಂದಿರುವ ಕಾರಣ ಎರಡನೇ ದಿನ ವಿದ್ಯಾರ್ಥಿಗಳಿಗೆ ಸಿಲೆಬಸ್ ಪಠ್ಯವನ್ನು ಓದಬೇಕಾ ಅಥವಾ ಪಠ್ಯದ ಹೊರತಾಗಿ ಓದಬೇಕಾ ಎಂಬ ಬಗ್ಗೆ ಆತಂಕಕ್ಕೆ ಕಾರಣವಾಗಿದೆ. ಈ ಗೊಂದಲಕ್ಕೆ ಕಾರಣರು ಯಾರು? ಇದರ ಜವಾಬ್ದಾರಿಯನ್ನು ಯಾರು ವಹಿಸಿಕೊಳ್ಳುತ್ತಾರೆ? ಎಂಬ ಪ್ರಶ್ನೆ ನಮ್ಮೆಲ್ಲರನ್ನು ಕಾಡುತ್ತಿದೆ.

ಈ ವರ್ಷದ ಸಿಇಟಿ ಪರೀಕ್ಷೆಯಲ್ಲಾದ ಗೊಂದಲದ ಬಗ್ಗೆ ಮತ್ತು ಪಠ್ಯದ ಹೊರತಾಗಿ ಬಂದಿರುವ ಪ್ರಶ್ನೆಗಳ ಬಗ್ಗೆ ಕೆಇಎ ತಕ್ಷಣವೇ ಸ್ಪಷ್ಟಿಕರಣವನ್ನು ನೀಡಬೇಕು. ಇದು ಅವರ ಹಾಗೂ ಸರಕಾರದ ಕರ್ತವ್ಯ. ಪಿಯು ಬೋಡ್ ೯ ವೆಬ್‌ಸೈಟ್‌ನಲ್ಲಿ ಕಡಿತಗೊಂಡ ಪಠ್ಯಕ್ರಮಗಳನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿಯ ವಿಷಯಗಳು ಇವೆ. ಆದರೆ ಇದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಕಡಿತಗೊಂಡ ಪಠ್ಯಕ್ರಮವನ್ನು ಸಹ ಅಳವಡಿಸಿ ಪ್ರಶ್ನೆಪತ್ರಿಕೆಯನ್ನು ತಯಾರಿಸಿದ್ದಾರೆ. ಅಥವಾ ಕಳೆದ ವರ್ಷದ ಪ್ರಶ್ನೆಪತ್ರಿಕೆಯನ್ನು ಈ ವರ್ಷ ಪರೀಕ್ಷೆಯಲ್ಲಿ ನೀಡಿದ್ದಾರೆ ಎನ್ನುವ ವಿಷಯ ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಅವರು ದೂರಿದರು.

300x250 AD

ಎರಡು ದಿನಗಳಲ್ಲಿ ಪರೀಕ್ಷೆ ಬರೆಯುವಾಗ ವಿದ್ಯಾರ್ಥಿಗಳಲ್ಲಾದ ಮಾನಸಿಕ ತಳಮಳಕ್ಕೆ ಹೊಣೆಯಾರು? ಪ್ರಜ್ಞಾವಂತರಾದ ನಾವು ಪರೀಕ್ಷೆಯನ್ನು ನಡೆಸುವಲ್ಲಿ ಎಡವಿದ್ದು ಎಲ್ಲಿ? ಈ ರೀತಿ ಸಿಲೆಬಸ್‌ನಲ್ಲಿ ಇಲ್ಲದ ಪ್ರಶ್ನೆಗಳನ್ನು ಕೇಳುವಲ್ಲಿಯೂ ತಜ್ಞ ಉಪನ್ಯಾಸಕರ ತಂಡ ಗಮನ ಹರಿಸಿಲ್ಲವೇ? ಅಲ್ಲದೇ ಈ ಪ್ರಶ್ನೆ ಪತ್ರಿಕೆಯನ್ನು ಮರು ಪರಿಶೀಲಿಸಿಲ್ಲವೇ ಎಂಬ ಸಂದೇಹ ಉದ್ಭವಿಸುತ್ತದೆ. ಕಳೆದ ಹಲವು ದಶಕಗಳನ್ನು ಮೆಲುಕು ಹಾಕಿದಾಗ ದೊಡ್ಡಮಟ್ಟದ ಅವಾಂತರಗಳು ಕಂಡ ಉದಾಹರಣೆಗಳು ಇಲ್ಲ. ಸಾಮಾನ್ಯವಾಗಿ ಒಂದು ಎರಡು ಪ್ರಶ್ನೆಗಳು ತಪ್ಪುಗಳು ಆಗುವುದು ಅಥವಾ ಸಿಲೆಬಸ್‌ನ ಹೊರತಾಗಿರುವ ಪ್ರಶ್ನೆಗಳು ಬರುವುದು ಸಹಜ, ಆದರೆ 45ಕ್ಕಿಂತ ಹೆಚ್ಚು ಪ್ರಶ್ನೆಗಳು ಪಠ್ಯದ ಹೊರತಾಗಿ ಬಂದಿರುವುದು ಪರೀಕ್ಷೆಯ ಬಗ್ಗೆ ಇದ್ದ ಭರವಸೆಯನೆ ಹುಸಿಯಾಗಿಸಿದೆ. ಅಷ್ಟೇ ಅಲ್ಲದೇ ವಿದ್ಯಾರ್ಥಿಗಳನ್ನು ದೂರದೂರದ ಪರೀಕ್ಷಾ ಕೇಂದ್ರಗಳಿಗೆ ನಿಯೋಜಿಸಿರುವ ಉದ್ದೇಶವೇನು? ವಿದ್ಯಾರ್ಥಿಗಳ ಮಾನಸಿಕ ಒತ್ತಡವನ್ನು ಶಿಕ್ಷಣ ಇಲಾಖೆ ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಯಾಕೆ?, ಹೀಗೆ ಹಲವು ಪ್ರಶ್ನೆಗಳು, ಗೊಂದಲಗಳು, ಸಮಸ್ಯೆಗಳು ಒತ್ತಡಗಳು ವಿದ್ಯಾರ್ಥಿಗಳು ಸೇರಿದಂತೆ ನಾಗರಾಜ ಹೆಗಡೆ ಧಾರೇಶ್ವರ, ಕಿರಣ ಭಟ್ಟ ಹುತ್ತಾರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಹೆತ್ತವರಿಗೆ ಕಾಡುತ್ತಿದೆ ಎಂದು ಅವರು ತಿಳಿಸಿದರು. ಶಿಕ್ಷಣ ಇಲಾಖೆಯೊಂದಿಗೆ ಹೋರಾಟವಿಲ್ಲ ಬದಲಾಗಿ ಸಾಮರಸ್ಯದೊಂದಿಗೆ ತಕ್ಷಣವೇ ಪರಹಾರಕ್ಕಾಗಿ ಕೆಇಎ ಇಲಾಖೆ ಹಾಗೂ ಸರಕಾರ ಸ್ಪಂದಿಸಬೇಕು, ಸ್ಪಷ್ಟಿಕರಣವನ್ನು ಕೊಡಬೇಕು. ಆ ಮೂಲಕ ವಿದ್ಯಾರ್ಥಿಗಳ ಆತಂಕವನ್ನು ನಿವಾರಣೆ ಮಾಡುವ ಮೂಲಕ, ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳುಮಾಡದೇ ಇರುವ ಪಾತ್ರವನ್ನು ವಹಿಸಬೇಕು ಎಂದು ಅವರು ವಿನಂತಿಸಿದರು.

ಕುಪ್ಮಾದ ಸದಸ್ಯ ಜಿ. ಎಸ್. ಹೆಗಡೆ ಮಾತನಾಡಿ, ಕೆಇಎ ಇಲಾಖೆಯು ಮತ್ತು ಸರಕಾರ ಈ ಸಿಇಟಿ ಪರೀಕ್ಷೆಯಲ್ಲಿ ಆಗಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತವಾದ ಪರಿಹಾರವನ್ನು ಕೊಡಬೇಕು. ವಿದ್ಯಾರ್ಥಿಗಳಿಗೆ ನೇರವಾಗಿ ಕೃಪಾಂಕ ಅಂಕವನ್ನು ನೀಡುವುದೇ, ಅಥವಾ ಪುನರ್ ಪರೀಕ್ಷೆಯನ್ನು ನಡೆಸುವುದೇ. ಅಥವಾ ಪಠ್ಯದ ಹೊರತಾಗಿ ಬಂದಿರುವ ಪ್ರಶ್ನೆಗಳನ್ನು ಪುನರ್ ಅವಲೋಕನ ಮಾಡಿ ಅದನ್ನು ಕೈಬಿಟ್ಟು ಉಳಿದ ಪ್ರಶ್ನೆಗಳನ್ನು ಮಾತ್ರವೇ ಅಂಕ ಪರಿಗಣೆಗೆ ತೆಗೆದುಕೊಳ್ಳುವುದೇ. ಹೀಗೆ ಸೂಕ್ತವಾದ ಪರಿಹಾರವನ್ನು ಶಿಕ್ಷಣ ಸಂಸ್ಥೆ, ತಜ್ಞರೊಂದಿಗೆ ಸಭೆ ನಡೆಸಿ ಪರಿಹಾರವನ್ನು ನೀಡಬೇಕೆಂದು ವಿದ್ಯಾರ್ಥಿಗಳ ಪರವಾಗಿ ಕುಪ್ಪಾದ ಉತ್ತರ ಕನ್ನಡ ಜಿಲ್ಲಾ ಸಮಿತಿಯು ಈ ಮೂಲಕ ಒತ್ತಾಯಿಸುತ್ತಿದೆ ಎಂದರು.

ಸಿಲೆಬಸ್‌ನಿಂದ ಹೊರತಾಗಿರುವ ಪ್ರಶ್ನೆಗಳನ್ನು ಕೈ ಬಿಟ್ಟು ಸಿಲೆಬಸ್‌ನಲ್ಲಿರುವ ಪ್ರಶ್ನೆಗಳನ್ನು ಮಾತ್ರವೇ ಗಮನಿಸಿ ಉತ್ತರ ನೀಡಿದರೆ ನ್ಯಾಯ ಒದಗಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟ ಸದಸ್ಯರು, ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ, ಮೌಲ್ಯಾತಕ, ಗುಣಮಟ್ಟದ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಸೂಕ್ತವಾದ ಕ್ರಮವನ್ನು ಕೈಗೊಳ್ಳುವಂತೆ ವಿನಂತಿಸಿ, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಸರಕಾರವು ಕೈಗೊಳ್ಳುವ ಎಲ್ಲ ಕಾರ್ಯಕ್ರಮಗಳಲ್ಲಿಯೂ ನಾವು ಕೈಜೋಡಿಸುತ್ತೇವೆ ಎಂದು ಭರವಸೆಯಿತ್ತರು.

ವಿವಿಧ ಕಾಲೇಜು ಪ್ರತಿನಿಧಿಗಳಾದ ಶಶಾಂಕ ಶಾಸ್ತ್ರಿ, ನಾಗರಾಜ ಹೆಗಡೆ ಧಾರೇಶ್ವರ, ಕಿರಣ ಭಟ್ಟ ಹುತ್ತಾರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Share This
300x250 AD
300x250 AD
300x250 AD
Back to top