ದಾಂಡೇಲಿ: ಸಂಸತ್ತಿಗೆ ಆಯ್ಕೆಯಾದ ನಂತರ ಕೇಂದ್ರದ ಬಿಜೆಪಿ ಸರ್ಕಾರದ ಸಹಕಾರದಿಂದ ಅರಣ್ಯ ಅತಿಕ್ರಮಣದಾದರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ದಾಂಡೇಲಿಯಲ್ಲಿ ಪ್ರಚಾರ ಸಭೆ ನಡೆಸಿ ಮಾತನಾಡಿದ ಅವರು, ಅರಣ್ಯ ಅತಿಕ್ರಮಣದಾರರು ಕುಟುಂಬ ಮಾಡಿಕೊಂಡು ಉಳಿದುಕೊಂಡ ಜಾಗದಲ್ಲಿ ಯಾರಿಗೂ ತೊಂದರೆ ಆಗದಂತೆ ನಾನು ನೋಡಿಕೊಳ್ಳುತ್ತೇನೆ. ಎಲ್ಲಾ ಸಂಸದರು ಆಯ್ಕೆಯಾದ ಮೇಲೆ ಮೋದಿಯವರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಮಾಡುತ್ತೇವೆ ಎಂದರು.
ಕಾರ್ಯಕರ್ತರು ನಮ್ಮ ನಮ್ಮ ಬೂತ್ ಗಳಲ್ಲಿ ಹೆಚ್ಚಿನ ಲೀಡ್ ಕೊಡಿಸಬೇಕು. ಆಗ ಮಾತ್ರ ಬಿಜೆಪಿ ಆಯ್ಕೆಯಾಗಲು ಸಾಧ್ಯ. ಬೂತ್ ಮಟ್ಟದಲ್ಲಿ ಲೀಡ್ ಬಂದಾಗ ಮೋದಿಜಿಯವರು ಪ್ರಧಾನಿಯಾಗುತ್ತಾರೆ. ಇದು ದೇಶಕ್ಕೆ ನಡೆಯುವ ಚುನಾವಣೆ. ಮುಂದಿನ ೫ ವರ್ಷ ದೇಶದ ಭವಿಷ್ಯ ನಿರ್ಧರಿಸುವ ಚುನಾವಣೆ. ಕಾರಣ ದೇಶಕ್ಕಾಗಿ ನರೇಂದ್ರ ಮೋದಿಯವರೇ ಬೇಕು ಎಂದು ಕಮಲದ ಹೂವಿಗೆ ಮತ ಹಾಕಬೇಕು ಮತ್ತು ಹಾಕಿಸಬೇಕು ಎಂದರು.
ಮೋದಿಯವರು ಪ್ರಧಾನಿಗಾದ ಬಳಿಕ ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವಾಗಿದೆ. ಸನಾತನ ಧರ್ಮ ಉಳಿಯುತ್ತಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಅಭಿವೃದ್ಧಿಗೆ ಆಗುತ್ತಿದೆ. ವಯಕ್ತಿಕವಾಗಿ ಉಜ್ವಲ ಗ್ಯಾಸ್, ಮನೆ ಮನೆ ಗಂಗೆಯಿಂದ ನೀರು, ಆಯುಷ್ಮಾನ್ ಭಾರತ್, ಕಿಸಾನ್ ಸಮ್ಮಾನ್ ಯೋಜನೆ ಹೀಗೆ ಹಲವು ರೀತಿಯಲ್ಲಿ ಸಹಾಯವಾಗಿದೆ ಎಂದ ಅವರು, ಕಾಂಗ್ರೆಸ್ ಸರ್ಕಾರ ಕೇವಲ ಅಲ್ಪ ಸಂಖ್ಯಾತರ ಒಲೈಕೆಯಲ್ಲಿ ತೊಡಗಿಕೊಂಡಿದೆ. ಇದರಿಂದ ಜನ ಜೀವರ ದುಸ್ಥರವಾಗಿದೆ. ಮಹಿಳೆಯರ ಜೀವಕ್ಕೇ ಗ್ಯಾರಂಟಿ ಇಲ್ಲದಂತಾಗಿದೆ. ನೇಹಾ ಹಿರೇಮಠ ಅವರಂತಹ ಸಣ್ಣ ಮಗುವಿನ ಹತ್ಯೆಯಾಗಿದೆ. ೨೪ ಗಂಟೆಯಲ್ಲಿ ೧೦ ಜನರ ಕೊಲೆಯಾಗಿದೆ. ಶಾಂತಿ ಸುವ್ಯವಸ್ಥೆ ಇಲ್ಲದಂತಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು. ನಮ್ಮ ಜೀವ ಎಲ್ಲಕ್ಕಿಂತ ಮೊದಲು. ಕಾರಣ ಮೋದಿಜಿಯ ಗ್ಯಾರಂಟಿಯೇ ಅಗತ್ಯ ಎಂದು ಪ್ರತಿಪಾದಿಸಿದರು.
ಪ್ರಜಾಪ್ರಭುತ್ವದ ಮೌಲ್ಯ ಬೆಳೆಯಲು ಕಮಲದ ಹೂವಿಗೆ ಮತ ಹಾಕಬೇಕು. ಆತ್ಮಸಾಕ್ಷಿಯಾಗಿ ಬಿಜೆಪಿಯನ್ನು ಬೆಂಬಲಿಸಿಬೇಕು. ಈ ಹಿಂದೆ ಶಿಕ್ಷಣ ಸಚಿವನಾಗಿ, ಸಭಾಧ್ಯಕ್ಷನಾಗಿ ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ. ಮುಂದೆ ಸಂಸತ್ ಗೆ ಆಯ್ಕೆಯಾದಲ್ಲಿ ದಾಂಡೇಲಿ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮವಹಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನೀಲ್ ಹೆಗಡೆ, ಪರಿಷತ್ ಮಾಜಿ ಸದಸ್ಯ ಎಸ್.ಎಲ್.ಘೋಟ್ನೇಕರ್ ಇತರರು ಇದ್ದರು
ರಾಮ ಮಂದಿರ ನಿರ್ಮಾಣವಾಗಿ 500 ವರ್ಷಗಳ ಕನಸು ನನಸಾದ ಹಿನ್ನಲೆಯಲ್ಲಿ ಧನ್ಯವಾದ ಹೇಳಲು ಮೋದಿಜಿಯವರಿಗೆ ಮತ ನೀಡಬೇಕು. ದೇಶದ ರಕ್ಷಣೆ, ಸಮಗ್ರ ಅಭಿವೃದ್ಧಿಗೆ ಕಮಲದ ಹೂವಿಗೆ ಮತ ಹಾಕಬೇಕು.
ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ಅಭ್ಯರ್ಥಿ