ಸಿದ್ದಾಪುರ: ಮಂಗನ ಕಾಯಿಲೆಯಿಂದ ಮೃತಪಟ್ಟ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ ಹತ್ತು ಲಕ್ಷ ರೂ.ಗಳನ್ನು ನೀಡುವುದರ ಜೊತೆ, ತಾಲೂಕಿನಲ್ಲಿ ಹರಡುತ್ತಿರುವ ಮಂಗನ ಕಾಯಿಲೆಯನ್ನು ನಿಯಂತ್ರಣಕ್ಕೆ ತರಲು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಸೂಕ್ತ ಮುಂಜಾಗೃತಾ ಕ್ರಮ ತೆಗೆದುಕೊಳ್ಳಬೇಕೆಂದು ಮಾಜಿ ಶಾಸಕ ಎಚ್.ಹಾಲಪ್ಪ ಆಗ್ರಹಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು ಕಳೆದ ಮೂರ್ನಾಲ್ಕು ವರ್ಷದ ಹಿಂದೆ ಸಾಗರ ತಾಲೂಕಿನ ಅರಲಗೋಡಿನಲ್ಲಿ ಮಂಗನ ಕಾಯಿಲೆಯಿಂದ 23 ಜನ ಮೃತಪಟ್ಟಿದ್ದರು. ಈ ಸಂದರ್ಭದಲ್ಲಿ ಕಾಯಿಲೆಯನ್ನು ತಡೆಗಟ್ಟಲು ರಾಜ್ಯ ಸರ್ಕಾರ ಎಲ್ಲ ಇಲಾಖೆಯ ಸಹಕಾರದೊಂದಿಗೆ ರೋಗದ ನಿಯಂತ್ರಣಕ್ಕೆ ಎಲ್ಲ ರೀತಿಯ ಸೂಕ್ತ ಕ್ರಮವನ್ನು ಕೈಗೊಂಡಿದ್ದಲ್ಲದೇ ಮೃತಪಟ್ಟ ಕುಟುಂಬಕ್ಕೆ ತಲಾ ಎರಡು ಲಕ್ಷ ರೂ.ಗಳನ್ನು ನೀಡಿತ್ತು.
ಸಿದ್ದಾಪುರ ತಾಲೂಕಿನಲ್ಲಿ ಈ ವರ್ಷ ಮಂಗನ ಕಾಯಿಲೆ ವಿಪರೀತವಾಗಿದೆ. ರೋಗದ ಲಕ್ಷಣ ಕಂಡು ಬಂದ ಎಲ್ಲರಿಗೂ ಸರ್ಕಾರ ಉಚಿತವಾಗಿ ಚಿಕಿತ್ಸೆ ನೀಡಬೇಕು. ಜಿಲ್ಲಾ ಹಾಗೂ ತಾಲೂಕು ಆಡಳಿತ ಜನರಲ್ಲಿ ಜಾಗೃತಿ ಮೂಡಿಸಬೇಕು. ಅದರಂತೆ ಜನರು ಸಹ ಎಚ್ಚರವಹಿಸಬೇಕಾಗಿದೆ. ಇಲ್ಲಿಯವರೆಗೆ ಸಿದ್ದಾಪುರ ತಾಲೂಕಿನಲ್ಲಿ ಈ ವರ್ಷ ಏಳು ಜನರು ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆಯವರು ಹೇಳುತ್ತಿದ್ದಾರೆ. ರೋಗ ಲಕ್ಷಣ ಕಂಡು ಬಂದವರು ಏಳೆಂಟು ಜನರು ವಿವಿಧ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಅವರಿಗೂ ಪರಿಹಾರ ನೀಡಬೇಕು. ಮಣಿಪಾಲ್ ಆಸ್ಪತ್ರೆಯಲ್ಲಿ ಮಂಗನ ಕಾಯಿಲೆ ಕುರಿತು ಸರ್ಕಾರದಿಂದ ಉಚಿತ ಚಿಕಿತ್ಸೆ ನೀಡುವ ವ್ಯವಸ್ಥೆ ಇದೆ. ಜಿಲ್ಲಾಧಿಕಾರಿಗಳು ಲೋಕಸಭಾ ಚುನಾವಣೆಯ ಕಾರ್ಯನಿರ್ವಹಣೆಯ ನಡುವೆಯೂ ಎಲ್ಲ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹಾಲಪ್ಪ ಸೂಚಿಸಿದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವು ನಿಶ್ಚಿತ. ಎಲ್ಲರೂ ಒಂದಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಬಿಜೆಪಿ ಕಾರ್ಯಕರ್ತರಲ್ಲಿ ವಿಶ್ವಾಸ ಇದೆ. ಸಂಘಟನೆ ಇದೆ. ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಗೆಲುವಿಗೆ ಎಲ್ಲರೂ ಒಂದಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಮಾತನಾಡಿ ಕಿತ್ತೂರು-ಖಾನಾಪುರ ಸೇರಿದಂತೆ ಜಿಲ್ಲೆಯ ಎಲ್ಲ ಆರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆಯ ಮೂಲಕ ಅಭ್ಯರ್ಥಿ ಗೆಲುವಿಗೆ ಮುಂದಾಗಿದ್ದಾರೆ. ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಗ್ರಾಪಂ ಮಟ್ಟದ ಮುಖಂಡರ, ಕಾರ್ಯಕರ್ತರ ಸಭೆ ನಡೆಸಿ ಪ್ರಚಾರ ವನಡೆಸುತ್ತಿದ್ದಾರೆ ಎಂದು ಹೇಳಿದರು.
ತಾಲೂಕು ಬಿಜೆಪಿ ಅಧ್ಯಕ್ಷ ತಿಮ್ಮಪ್ಪ ಎಂ.ಕೆ, ರಾಜ್ಯ ಕಾರ್ಯಕಾರಿಣ ಸದಸ್ಯ ಕೆ.ಜಿ.ನಾಯ್ಕ ಹಣಜೀಬೈಲ್, ಮಾರುತಿ ನಾಯ್ಕ, ಎಸ್.ಕೆ.ಮೇಸ್ತಾ, ತೋಟಪ್ಪ ನಾಯ್ಕ, ಪ್ರಶಾಂತ ನಾಯ್ಕ, ಅಣ್ಣಪ್ಪ ನಾಯ್ಕ ಇತರರಿದ್ದರು.