ಸಿದ್ದಾಪುರ: ತಾಲೂಕಿನ ಗೋಳಿಕೈ(ಹೊನ್ಮಾವ್)ಯಲ್ಲಿ ಕು| ಆಥರ್ವನ ಉಪನಯನ ಹಾಗೂ ಕು| ಪ್ರಣತಿಯ ಕನ್ಯಾಸಂಸ್ಕಾರದ ಕಾರಣಕ್ಕೆ ಹಮ್ಮಿಕೊಂಡ “ಕಾರ್ತವೀರ್ಯಾರ್ಜುನ” ಯಕ್ಷಗಾನ ಪ್ರದರ್ಶನವು ಯಶಸ್ವಿಯಾಗಿ ಜರುಗಿತು.
ಹತ್ತು ತಲೆಗಳೋ ಸಾವಿರ ಕರಗಳೋಂದು ಸಂಘರ್ಷ ಏರ್ಪಟ್ಟಾಗ ಕೆಡುಕಿಗೆ ಎಂದೂ ಜಯ ಸಿಗಲಾರದು. ಒಳಿತಿಗೆ ಸೋಲಾಗದು ಇದು ನಮ್ಮ ಪರಪಂರೆಯ ಒಳಹರಿವು. ಹೀಗೊಂದು ದೃಶ್ಯವಾಗುವ ಅವಕಾಶವಿರುವ ಯಕ್ಷಗಾನ ಪ್ರಸಂಗ ತಿರುಮಲ ಕವಿ ರಚಿಸಿದ “ಕಾರ್ತವೀರ್ಯಾರ್ಜುನ” ಕತೆಯಲ್ಲಿ. ಮಕ್ಕಳಿಲ್ಲದ ರಾಕಾವತಿ ಪುತ್ರಾಪೇಕ್ಷೆಯಿಂದ ಅಕಾಲದಲ್ಲಿ ಪತಿಸಂಗವನ್ನು ಬಯಸಿದಳು. ಮಾಹಿಷ್ಮತಿಯ ದೊರೆ ಕೃತವೀರ್ಯ ಅಬದ್ಧವೆಂದು ಎಷ್ಟು ಹೇಳಿದರೂ ಕೇಳದ ಸತಿಯನ್ನು ಸಂಧ್ಯಾ ಕಾಲದಲ್ಲಿ ಕೂಡಿದ್ದರ ಪರಿಣಾಮ ಕೈಗಳೇ ಇಲ್ಲದ ಶಿಶು ಜನಿಸಿತು. ವ್ಯಥೆಗೊಳಗಾದ ತಾಯಿ ರಾಕಾವತಿ ಮಗುವಿಗೆ ಗುರು ದತ್ತಾತ್ರೇಯರ ಅನುಗ್ರಹವು ಸಿಕ್ಕು ಸಾವಿರ ಭುಜಗಳು ದೊರೆಯುವಂತೆ ಮಾಡಿದಳು. ಹಾಗಾಗಿ ಕಾಲಾನಂತರದಲ್ಲಿಸಾವಿರ ಬಾಹುಗಳಿಂದ ಶೋಭಿಸಿದ ಕಾರ್ತವೀರ್ಯಾರ್ಜುನ ತಾನೇ ತಾನಾಗಿ ಮೆರೆಯುತ್ತಿದ್ದ. ಇದನ್ನು ತಿಳಿದ ಲಂಕೆಯ ದಶಕಂಠ ರಾವಣ ಅವನನ್ನು ತುಡುಕಿ ಸೋಲೋಪ್ಪಿಕೊಂಡ. ಹರನ ವರಕ್ಕಿಂತಲೂ ಗುರುವಿನ ಅನುಗ್ರಹವು ಬಲವತ್ತರವಾದುದು ಎಂದು ಈ ಪ್ರಸಂಗದಲ್ಲಿ ನಿರೂಪಿತವಾದ ವಿಷಯ. ಯಕ್ಷಗಾನದಲ್ಲಿ ಕಾರ್ತವೀರ್ಯಾರ್ಜುನ ಪ್ರಸಂಗವು ನಟ ಪರಂಪರೆಯನ್ನು ಹೊಂದಿದೆ. ಅತ್ಯಂತ ಜನಪ್ರಿಯ ಪ್ರಸಂಗ ಕೂಡ. ಶೃಂಗಾರ, ಹಾಸ್ಯ, ಕರುಣಾ ರೌದ್ರ ವೀರ ರಸಗಳಿಂದ ಪರಿಪುಷ್ಟವಾದ ಜನಪ್ರಿಯ ಪ್ರಸಂಗವಿದು. ಇಂತಹ ಮನಮೋಹಕ ಪ್ರದರ್ಶನವನ್ನು ಅತಿಥಿ ಕಲಾವಿದರುಗಳೊಂದಿಗೆ ಕಲಾಭಾಸ್ಕರ (ರಿ.) ಇಟಗಿಯವರು ನಡೆಸಿಕೊಟ್ಟರು. ಭಾಗವತರಾಗಿ ಕೊಳಗಿ ಕೇಶವ ಹೆಗಡೆ, ಮದ್ದಳೆ ವಾದನದಲ್ಲಿ ಶರತ್ ಜಾನಕೈ, ಚಂಡೆವಾದನದಲ್ಲಿ ಕೆ.ಎನ್.ಭಾರ್ಗವ ಹೆಗ್ಗೋಡು ಕಾಣಿಸಿಕೊಂಡರು. ತೋಟಿಮನೆ ಗಣಪತಿ ಹೆಗಡೆ ಕಾರ್ತವೀರ್ಯಾರ್ಜುನನಾಗಿ, ಮಂದಾರ್ತಿ ಪ್ರಸನ್ನ ಶೆಟ್ಟಿಗಾರ್ ರಾವಣನಾಗಿ, ಹಾಸ್ಯ ಪಾತ್ರಗಳಲ್ಲಿ ಚಪ್ಪರಮನೆ ಶ್ರೀಧರ ಹೆಗಡೆ, ರಾಕಾವತಿಯಾಗಿ ಇಟಗಿ ಮಹಾಬಲೇಶ್ವರ, ವಿಭೀಷಣನಾಗಿ ವೆಂಕಟೇಶ ಹೆಗಡೆ ಬೊಗರಿಮಕ್ಕಿ, ಕೃತವೀರ್ಯನಾಗಿ ಶಿರಗುಣಿ ಲಕ್ಷ್ಮಿನಾರಾಯಣ ಹೆಗಡೆ, ಪ್ರಹಸ್ತನಾಗಿ ನಾಗಪತಿ ಹೆಗಡೆ ಕೊಪ್ಪ, ರಾಣಿಯರಾಗಿ ದೀಪಕ ಕುಂಕಿ-ಮಹಾಬಲೇಶ್ವರ ಅಭಿನಯಿಸಿದರು.