ಕಾರವಾರ: ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ವತಿಯಿಂದ ಪ್ರತಿ ಮಾಹೆ ಜಿಲ್ಲಾ ಮಟ್ಟದಲ್ಲಿ ಗ್ರಾಮೀಣ ಪ್ರದೇಶದ ಜನರ ಸಂಕಷ್ಟಗಳಿಗೆ ಸ್ಪಂದಿಸಿ, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಅತ್ಯುತ್ತಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಬ್ಬರನ್ನು ಗುರುತಿಸಿ ನೀಡಲಾಗುವ “ಪಿಡಿಓ ಆಫ್ ದಿ ಮಂತ್” ಪ್ರಶಸ್ತಿಯ ಮಾರ್ಚ್ ತಿಂಗಳಿಗೆ ಆಯ್ಕೆಯಾದ ಕುಮಟಾ ತಾಲ್ಲೂಕಿನ ಸಂತೇಗುಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಾಲಚಂದ್ರ ಶಿವು ಪಟಗಾರ ಗೆ ಇಂದು ಜಿಲ್ಲಾ ಪಂಚಾಯತನಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ ಕಾಂದೂ ಅವರು ಪ್ರಶಸ್ತಿ ಪತ್ರ ನೀಡಿ, ಅಭಿನಂದಿಸಿದರು.
ಗ್ರಾಮ ಪಂಚಾಯತ್ ಅಧಿಕಾರಿಯಾಗಿ ಅವರ ಕಾರ್ಯಕ್ಷಮತೆ, ದಕ್ಷತೆ ಹಾಗೂ ವಿವಿಧ ಯೋಜನೆಗಳ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಸಾಧಿಸಿದ ಪ್ರಗತಿ ಹಾಗೂ ಸಾರ್ವಜನಿಕರಿಗೆ ಸಲ್ಲಿಸಿದ ಉತ್ತಮ ಸೇವೆಯನ್ನು ಗುರುತಿಸಿ ಅವರಿಗೆ ಈ ಪ್ರಶಸ್ತಿ ನೀಡಿ, ಅಭಿನಂದಿಸಲಾಗಿದ್ದು, ಅವರಂತೆ ಜಿಲ್ಲೆಯ ಎಲ್ಲ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು ಮತ್ತು ಜಿಲ್ಲೆಯ ಗ್ರಾಮೀಣ ಭಾಗದ ಸರ್ವತೋಮುಖ ಅಭಿವೃದ್ಧಿಗೆ ನೆರವಾಗಬೇಕು ಎಂದು ಸಿಇಓ ಈಶ್ವರ ಕುಮಾರ್ ಕಾಂದೂ ಹೇಳಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಾಲಚಂದ್ರ ಪಟಗಾರ, ಇನ್ನೂ ಉತ್ತಮ ಕೆಲಸ ಮಾಡಲು ಈ ಪ್ರಶಸ್ತಿ ನನಗೆ ಪ್ರೇರಣೆ ನೀಡಲಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಆಡಳಿತ ಶಾಖೆಯ ಉಪ ಕಾರ್ಯದರ್ಶಿ ಎಂ.ಸಿ ಚಂದ್ರಶೇಖರ, ಅಭಿವೃದ್ಧಿ ಶಾಖೆಯ ಉಪ ಕಾರ್ಯದರ್ಶಿ ಪ್ರಕಾಶ ಹಾಲಮ್ಮನವರ, ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ, ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ್ ಉಪಸ್ಥಿತರಿದ್ದರು.