ದೇಶಪಾಂಡೆ ಮಧ್ಯಪ್ರವೇಶ: ಸಿ.ಎಂ. ಜೊತೆ ಮಾತುಕತೆ, ಹೊಸ ತಿರುವು
ಹೊನ್ನಾವರ : ಕಳೆದ ಕೆಲವು ದಿನಗಳಿಂದ 144 ಸೇಕ್ಷನಡಿಯಲ್ಲಿ ಪೊಲೀಸ್ ಬಂದೋಬಸ್ತ್ನೊಂದಿಗೆ ನಡೆಯುತ್ತಿದ್ದ ಕಾಸರಕೋಡ ವಾಣಿಜ್ಯ ಬಂದರು ಕಾಮಗಾರಿಯನ್ನು ಶನಿವಾರ ಸಂಜೆಯ ವೇಳೆಗೆ ಬಂದರು ಇಲಾಖೆಯವರು ತಾತ್ಕಾಲಿಕವಾಗಿ ನಿಲ್ಲಿಸಿ, ಸ್ಥಳದಲ್ಲಿರುವ ವಾಹನ, ಯಂತ್ರೋಪಕರಣ ತೆರವುಗೊಳಿಸಿದ ಘಟನೆ ನಡೆದಿದೆ.
ಕಾಮಗಾರಿ ನಡೆಸಲು ಅಡ್ಡಿ ಉಂಟಾಗದಂತೆ ಜಾರಿ ಮಾಡಲಾಗಿದ್ದ 144 ಸೆಕ್ಷನ್ ಶುಕ್ರವಾರ ಮುಕ್ತಾಯಗೊಂಡಿತ್ತು. ಶನಿವಾರ ಕೂಡ ರಸ್ತೆ ಕಾಮಗಾರಿ ನಡೆದಿತ್ತು. ಸ್ಥಳಕ್ಕೆ ಸ್ಥಳೀಯ ಮೀನುಗಾರರು ಬಂದು ಬಂದರು ಇಲಾಖೆಯ ಅಧಿಕಾರಿಗಳೊಂದಿಗೆ ಕಾಮಗಾರಿಗೆ ಸಂಬಂಧ ಪಟ್ಟಂತೆ ಅನುಮತಿ ಪತ್ರ, ಪೊಲೀಸ್ ಅಧಿಕಾರಿಗಳಲ್ಲಿ ಕಂಪನಿಗೆ ಭದ್ರತೆ ನೀಡಲು ಬಂದಿರುವ ಆದೇಶ ಪ್ರತಿ ಕೇಳಿದಾಗ, ಗುತ್ತಿಗೆ ಪಡೆದ ಕಂಪನಿಗೆ ಸಂಬಂಧ ಪಟ್ಟವರು ಮತ್ತು ಸ್ಥಳೀಯರ ನಡುವೆ ಮಾತಿಗೆ ಮಾತು ಬೆಳೆದು ವಾಗ್ವಾದ ನಡೆದಿರುವುದಾಗಿ ತಿಳಿದು ಬಂದಿದೆ.
ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಮೀನುಗಾರರು ಜಮಾವಣೆ ಆಗಿದ್ದು, ಮಾತಿಗೆ ಮಾತು ಬೆಳೆದು ಕಂಪನಿಯವರೊಂದಿಗೆ ವಾಗ್ವಾದ ಇಳಿದು ಕಾಮಗಾರಿಯ ಅನುಮತಿ ಪತ್ರ ತೋರಿಸಿ ಎಂದು ಪಟ್ಟು ಹಿಡಿದು ಕುಳಿತಾಗ, ಅಧಿಕಾರಗಳು ಇಲಾಖೆಗೆ ಬಂದು ಅನುಮತಿ ಪತ್ರ ಪಡೆದುಕೊಳ್ಳಿ ಎಂದು ಸಮಜಾಯಿಸಿ ಕೊಡಲು ಪ್ರಯತ್ನಪಟ್ಟರು ಮೀನುಗಾರರು ಅನುಮತಿ ಪತ್ರ ತೋರಿಸಿ ಕೆಲಸ ಮಾಡಿ ಎಂದು ಪಟ್ಟು ಬಿಡದೆ ಇದ್ದಾಗ ತಾತ್ಕಾಲಿಕವಾಗಿ ಕೆಲಸ ನಿಲ್ಲಿಸಿ ಸ್ಥಳದಲ್ಲಿರುವ ವಾಹನ ತೆಗೆದುಕೊಂಡು ಹೋಗಿರುವುದಾಗಿ ತಿಳಿದು ಬಂದಿದೆ.
ಲೋಕಸಭಾ ಚುನಾವಣೆಯ ಸಮಯದಲ್ಲಿ ಪೊಲೀಸ್ ಬಲದೊಂದಿಗೆ ಬಂದರು ಕಾಮಗಾರಿ ನಡೆಯುತ್ತಿರುವುದು ಜಿಲ್ಲೆಯಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಮತ ಬಹಿಷ್ಕಾರ ಮಾಡುತ್ತೇವೆ ಅಂದರು ನಿರ್ಲಕ್ಷ ತೋರಿ, ಬಂದರು ಕೆಲಸಕ್ಕೆ ಒತ್ತು ನೀಡಿದ ಅಧಿಕಾರಿಗಳ ನಡೆ ಬಗ್ಗೆ ಮೀನುಗಾರರು ಜಿಲ್ಲೆಯಲ್ಲಿ ಸಂಘಟಿತಗೊಳ್ಳುತ್ತಿದ್ದರು. ಪ್ರತಿ ಬೂತ್ ನಲ್ಲಿ ಮತ ಬಹಿಷ್ಕಾರದ ಚರ್ಚೆಗೆ ವೇಗ ಪಡೆದುಕೊಳ್ಳುತ್ತಿತ್ತು. ಇದೀಗ ತಾತ್ಕಾಲಿಕವಾಗಿ ಕೆಲಸವೇನೋ ನಿಂತಿದೆ. ಮುಂದೇನು ಅಂತ ಕಾದುನೋಡಬೇಕಿದೆ. ಕಂಪನಿಗೆ ಕೆಲಸ ಮಾಡಿ ಮುಗಿಸುವ ಆತುರ, ಅಧಿಕಾರಿಗಳಿಗೆ ಸರಕಾರದ ಆದೇಶ ಪಾಲನೆ ಮಾಡಬೇಕಾದ ಅನಿವಾರ್ಯತೆ, ಸ್ಥಳೀಯರಿಗೆ ನಮ್ಮೂರಿಗೆ ಈ ಕಾಮಗಾರಿ ಬೇಡವೇ ಬೇಡ ಎಂಬ ಹಠ, ಸಮಯಕ್ಕೆ ತಕ್ಕಂತೆ ವರಸೆ ಬದಲುಸುತ್ತಿರುವ ರಾಜಕಾರಣಿಗಳ ನಡುವೆ, ವಾಣಿಜ್ಯ ಬಂದರು ಕಾಮಗಾರಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
ಬಾಕ್ಸ್
ದೇಶಪಾಂಡೆ ಮಧ್ಯಪ್ರವೇಶ :
ಈ ಎಲ್ಲಾ ಬೆಳವಣಿಗೆಯ ನಡುವೆ ಮಾಜಿ ಸಚಿವ ಹಾಲಿ ಶಾಸಕ ಆರ್. ವಿ. ದೇಶಪಾಂಡೆ ಯವರು ಬಂದರು ಕಾಮಗಾರಿ ವಿಷಯದಲ್ಲಿ ಮಧ್ಯಪ್ರವೇಶ ಮಾಡಿರುವ ಬೆಳವಣಿಗೆ ನಡೆದಿದೆ. ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ನವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಕಾಸರಕೋಡ ಬಂದರು ಕಾಮಗಾರಿಗೆ ಸಂಬಂಧ ಪಟ್ಟಂತೆ, ಸ್ಥಳೀಯ ಮೀನುಗಾರರ ಪರಿಸ್ಥಿತಿ ಬಗ್ಗೆ ಮನದಟ್ಟು ಮಾಡಿ ಸುದೀರ್ಘ ಚರ್ಚೆ ನಡೆಸಿರುವ ಬಗ್ಗೆ ತಿಳಿದು ಬಂದಿದೆ. ಮುಖ್ಯಮಂತ್ರಿ ಜೊತೆ ಮಾತನಾಡಿದ ನಂತರ ಜಿಲ್ಲಾಧಿಕಾರಿ, ಬಂದರು ಇಲಾಖೆ ಅಧಿಕಾರಿ ಇನ್ನುಳಿದ ಅಧಿಕಾರಿ ಜೊತೆ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಮೀನುಗಾರರಿಗೆ ಹೆದರಬೇಡಿ, ಏನು ಸಮಸ್ಯೆ ಆಗದಂತೆ ಮತ್ತಷ್ಟು ಪ್ರಯತ್ನ ಮಾಡೋಣ, ಮುಖ್ಯಮಂತ್ರಿಯವರ ಜೊತೆ ಮತ್ತೊಮ್ಮೆ ಮಾತನಾಡುತ್ತೇವೆ ಎಂದು ಸ್ಥಳೀಯರಿಗೆ ಧೈರ್ಯ ತುಂಬಿರುವುದಾಗಿ ತಿಳಿದು ಬಂದಿದೆ.
ಬೈಟ್ಸ್
ಕಾಸರಕೋಡ ವಾಣಿಜ್ಯ ಬಂದರು ಕಾಮಗಾರಿಗೆ ಸಂಬಂಧ ಪಟ್ಟಂತೆ ಹಿರಿಯ ಮುಖಂಡ ಆರ್ ವಿ ದೇಶಪಾಂಡೆ ಯವರು ನನಗೆ ದೂರವಾಣಿ ಕರೆ ಮಾಡಿದ್ದರು. ಮುಖ್ಯಮಂತ್ರಿಯೊಂದಿಗೆ ಮಾತನಾಡಿದ್ದೇನೆ. ಹೆದರುವುದು ಬೇಡ, ಸಿ. ಎಂ. ಜೊತೆ ಮತ್ತೊಮ್ಮೆ ಮಾತುಕತೆ ಮಾಡೋಣ ಎಂದು ಧೈರ್ಯ ಹೇಳಿದ್ದಾರೆ.
ಚಂದ್ರಕಾಂತ ಕೋಚರೆಕರ, ಕಾರ್ಯದರ್ಶಿ ರಾಷ್ಟ್ರಿಯ ಮೀನುಗಾರ ಸಂಘಟನೆ