ಹೊನ್ನಾವರ: ತಾಲೂಕಿನ ಖರ್ವಾ ಗ್ರಾಮದ ನಾಥಗೇರಿಯ ಮಹೇಂದ್ರ ಗಣಪತಿ ಗೌಡ ಛತ್ತಿಸ್‌ಘರ್ ಬಿಲಾಯ್‌ನಲ್ಲಿ ನಡೆದ ನಾಲ್ಕನೇ ರಾಷ್ಟ್ರೀಯ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್ ಶಿಪ್ 2023-24 ರಲ್ಲಿ ಭಾಗವಹಿಸಿ ಆರ್ಟಿಸ್ಟಿಕ್ ಯೋಗ ಸಿಂಗಲ್‌ನಲ್ಲಿ ದ್ವಿತೀಯ ಸ್ಥಾನ ಹಾಗೂ ಟ್ರೇಡಿಸನಲ್ ಯೋಗದಲ್ಲಿ ತೃತೀಯ ಸ್ಥಾನ ಪಡೆದು, ಬೆಳ್ಳಿ,ಕಂಚಿನ ಪದಕವನ್ನು ಪಡೆಯುವ ಮೂಲಕ ಮತ್ತೊಮ್ಮೆ ಯೋಗದಲ್ಲಿ ಸಾಧನೆಗೈದಿದ್ದಾನೆ.
ದಿ.ಕೆ.ಮೋಹನ್ ಶೆಟ್ಟಿ ಪದವಿಪೂರ್ವ ಕಾಲೇಜಿನ ದ್ವೀತಿಯ ಪಿಯುಸಿ ವಿದ್ಯಾರ್ಥಿ ವ್ಯಾಸಂಗದಲ್ಲಿರುವ ಮಹೇಂದ್ರ ಗೌಡ ಯೋಗ ಸ್ಪರ್ಧೆಯಲ್ಲಿ 5 ಬಾರಿ ರಾಷ್ಟ್ರಮಟ್ಟಕ್ಕೆ 8ಬಾರಿ ರಾಜ್ಯಮಟ್ಟವನ್ನು ಪ್ರತಿನಿಧಿಸಿದ ಹೆಗ್ಗಳಿಕೆ ಹೊಂದಿರುವ ಸಾಧಕ.
ಮೂಲತಃ ಹೊನ್ನಾವರ ತಾಲೂಕಿನ ಖರ್ವಾ ಗ್ರಾಮದ ನಾಥಗೇರಿಯವರಾದ ಗಣಪತಿ ಗೌಡ,ಮಹಾಲಕ್ಷ್ಮೀ ಗೌಡ ದಂಪತಿಗಳ ಪುತ್ರನಾಗಿದ್ದಾನೆ. ಪ್ರಾಥಮಿಕ,ಪ್ರೌಢ ಶಾಲಾ ಹಂತದಲ್ಲಿಯೇ ಅದ್ಬುತ ಯೋಗಪಟುವಾಗಿದ್ದನು. ಖರ್ವಾ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವ್ಯಾಸಂಗದಲ್ಲಿದ್ದಾಗ ರಾಷ್ಟ್ರಮಟ್ಟದ ಯೋಗಾಶನ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವೀತಿಯ ಸ್ಥಾನಗಳಿಸಿ ಬೆಳ್ಳಿ ಪದಕ ಪಡೆದಿರುವುದು ಇಲ್ಲಿ ಸ್ಮರಿಸಬಹುದಾಗಿದೆ. ಪ್ರೌಢಶಾಲೆ ಹಾಗೂ ಕಾಲೇಜು ವ್ಯಾಸಂಗದ ವೇಳೆಯು ಯೋಗವನ್ನು ಮುಂದುವರೆಸಿದ್ದಾನೆ.ಅಲ್ಲಿಂದ ನಿರಂತರವಾಗಿ ರಾಜ್ಯ,ರಾಷ್ಟ್ರಮಟ್ಟದ ಯೋಗಾಶನ ಸ್ಪರ್ಧೆಗಳಲ್ಲಿ ಕಾಲೇಜನ್ನು ಪ್ರತಿನಿಧಿಸುತ್ತಾ ಬರುತ್ತಿದ್ದಾನೆ. ಖ್ಯಾತ ಯೋಗಪಟು,ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ರಾಜೇಶ್ವರಿ ಹೆಗಡೆ ಸಾಧನೆಗೈದ ವಿದ್ಯಾರ್ಥಿಯ ಯೋಗಗುರು ಆಗಿದ್ದಾರೆ.
ಇನ್ನೂ ಈ ಯೋಗಸಾಧಕನ ಸಾಧನೆಗೆ ಗ್ರಾಮಸ್ಥರು,ಶಿಕ್ಷಣ ಪ್ರೇಮಿಗಳು ಅಭಿನಂದಿಸಿ,ಹರ್ಷ ವ್ಯಕ್ತಪಡಿಸಿದ್ದಾರೆ. ಖರ್ವಾ ಗ್ರಾಮ ಪಂಚಾಯತ ವತಿಯಿಂದ ಪಿಡಿಒ ರಮೇಶ್ ನಾಯ್ಕ,ಕಾರ್ಯದರ್ಶಿ ಎನ್ ಎಚ್ ಅಂಬಿಗ ಸೇರಿದಂತೆ ಸಿಬ್ಬಂದಿ ವರ್ಗ ಮಹೇಂದ್ರನಿಗೆ ಸನ್ಮಾನಿಸಿ ಅಭಿನಂದಿಸಿದ್ದಾರೆ. ಗ್ರಾಮ ಪಂಚಾಯತ ಅಧ್ಯಕ್ಷ ಶ್ರೀಧರ್ ನಾಯ್ಕ ಸಾಧಕನ ಮನೆಗೆ ತೆರಳಿ ಸನ್ಮಾನಿಸಿ ಅಭಿನಂಧಿಸುವ ಮೂಲಕ ಪ್ರತಿಭೆಗೆ ಪ್ರೋತ್ಸಾಹಿಸಿದರು. ಬಡಕುಟುಂಬದ ಯುವಕನ ಸಾಧನೆ ಎಲ್ಲರು ಹೆಮ್ಮೆಪಡುವಂತದಾಗಿದ್ದು,ಇತರರಿಗೆ ಮಾದರಿಯಾಗಿದ್ದಾನೆ. ಇನ್ನು ದೊಡ್ಡಮಟ್ಟದ ಸಾಧನೆ ಮಾಡುವಂತಾಗಲಿ ಎಂದು ಹರ್ಷವ್ಯಕ್ತಪಡಿಸಿದರು.
ಮುಂದಿನ ಹಂತ ಶ್ರೀಲಂಕಾದಲ್ಲಿ ನಡೆಯುವ ಎಷ್ಯನ್ ಯೋಗಾಶನ ಸ್ಪೋರ್ಟ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ಯೋಗಪಟು ಮಹೇಂದ್ರ ಅವಕಾಶ ಪಡೆದಿದ್ದಾನೆ. ಬಡಕುಟುಂಬದಿಂದ ಬೆಳಗಿರುವ ಈ ಪ್ರತಿಭಾನ್ವಿತನಿಗೆ ಮುಂದಿನ ಹಂತದ ಸಾಧನೆಗೆ ತೆರಳಲು ಆರ್ಥಿಕ ಸಹಾಯವು ಅಗತ್ಯವಾಗಿರುತ್ತದೆ. ಜನಪ್ರತಿನಿಧಿಗಳು,ಶಿಕ್ಷಣ ಪ್ರೇಮಿಗಳು ಇಂತಹ ಹಳ್ಳಿ ಪ್ರತಿಭೆಗೆ ಪ್ರೋತ್ಸಾಹಿಸಬೇಕಿದೆ.