ಕಾರವಾರ: ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ, ಜಿಲ್ಲೆಯಲ್ಲಿ ಏಪ್ರಿಲ್ 12 ರಿಂದ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭಗೊಳ್ಳಲಿದ್ದು, ರಾಜಕೀಯ ಪಕ್ಷಗಳು ಮತ್ತು ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ನಾಮಪತ್ರಗಳು ತಿರಸ್ಕಾರವಾಗದಂತೆ, ಅತ್ಯಂತ ಎಚ್ಚರಿಕೆಯಿಂದ ಅರ್ಜಿಯನ್ನು ಭರ್ತಿ ಮಾಡುವಂತೆ ಮತ್ತು ಈ ಕುರಿತಂತೆ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯ ನೆರವು ಪಡೆಯುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಹೇಳಿದರು.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ರಾಜಕೀಯ ಪಕ್ಷಗಳಿಗೆ ನಾಮಪತ್ರ ಸಲ್ಲಿಕೆ ಕುರಿತು ಪಾಲಿಸಬೇಕಾದ ಕ್ರಮಗಳ ಕುರಿತು ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿಚುನಾವಣೆಗೆ ಸ್ಪರ್ಧಿಸುವ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಏಪ್ರಿಲ್ 6 ರಿಂದ ನಾಮಪತ್ರ ಸಲ್ಲಿಕೆಯ ಅರ್ಜಿಗಳನ್ನು ವಿತರಿಸಲಾಗುವುದು. ಏಪ್ರಿಲ್ 12 ರಿಂದ 19 ರ ವರೆಗೆ ( ಸರ್ಕಾರಿ ರಜೆ ಹೊರತುಪಡಿಸಿ) ಬೆಳಗ್ಗೆ 11 ರಿಂದ ಮಧ್ಯಾಹ್ನ 3 ರ ವರೆಗೆ ಚುನವಣಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಬಹುದಾಗಿದ್ದು, ಏಪ್ರಿಲ್ 20 ರಂದು ನಾಮಪತ್ರಗಳ ಪರಿಶೀಲನೆ ಮತ್ತು ಏಪ್ರಿಲ್ 22 ರಂದು ಮಧ್ಯಾಹ್ನ 3 ಗಂಟೆ ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾಗಿದೆ ಎಂದರು.
ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ನಿಗಧಿತ ನಮೂನೆ 2 ರಲ್ಲಿ ನಾಮಪತ್ರ ಸಲ್ಲಿಸಬೇಕಾಗಿದ್ದು, ಸೂಚಕರು ಮತ್ತು ಅಭ್ಯರ್ಥಿಗಳು ಕಡ್ಡಾಯವಾಗಿ ಸಹಿ ಮಾಡಬೇಕು ಇಲ್ಲವಾದಲ್ಲಿ ನಾಮಪತ್ರ ತಿರಸ್ಕೃತಗೊಳ್ಳಲಿದೆ. ಸೂಚಕರು ಕಡ್ಡಾಯವಾಗಿ ಇದೇ ಲೋಕಸಭಾ ಕ್ಷೇತ್ರದ ಮತದಾರರಾಗಿದ್ದು, ರಾಷ್ಟ್ರೀಯ ಮತ್ತು ರಾಜ್ಯ ಪಕ್ಷದ ಅಭ್ಯರ್ಥಿಯಾದಲ್ಲಿ ಒಬ್ಬ ಸೂಚಕರು ಮತ್ತು ನೊಂದಾಯಿತ ಪಕ್ಷ ಮತ್ತು ಪಕ್ಷೇತರರಾದಲ್ಲಿ 10 ಸೂಚಕರ ಸಹಿ ಇರಬೇಕು.
ನಮೂನೆ 26 ರಲ್ಲಿ 100 ರೂ ಛಾಪಾ ಕಾಗದದಲ್ಲಿ ಅಫಿಡವಿಟ್ ಸಲ್ಲಿಸಬೇಕು. ಅಫಿಡವಿಟ್ ನ ಎಲ್ಲಾ ಪುಟಗಳಿಗೆ ಸಹಿ ಮಾಡಬೇಕು ಮತ್ತು ಯಾವುದೇ ಕಾಲಂನ್ನು ಖಾಲಿ ಬಿಡಬಾರದು. ರಾಜಕೀಯ ಪಕ್ಷಗಳ ಅಭ್ಯರ್ಥಿಗಳಾದಲ್ಲಿ ಫಾರಂ ಎ ಮತ್ತು ಬಿ ಗಳ ಮೂಲ ಪ್ರತಿಗಳನ್ನು ನಾಮಪತ್ರ ಸಲ್ಲಿಕೆಯ ಕೊನೆಯ ದಿನಾಂಕದ ಮದ್ಯಾಹ್ನ 3 ಗಂಟೆಯೊಳಗೆ ಕಡ್ಡಾಯವಾಗಿ ಸಲ್ಲಿಸಬೇಕು.
ಅಭ್ಯರ್ಥಿಯು ಕನಿಷ್ಠ 25 ವರ್ಷ ವಯೋಮಿತಿ ಹೊಂದಿದ್ದು, ಗರಿಷ್ಠ 4 ನಾಮಪತ್ರ ಸಲ್ಲಿಸಬಹುದು. ಸಾಮಾನ್ಯ ಅಭ್ಯರ್ಥಿಗೆ 25000 ರೂ ಮತ್ತು ಪ.ಜಾತಿ ಪಂಗಡಕ್ಕೆ ಸೇರಿದ ಅಭ್ಯರ್ಥಿಗೆ 12500 ರೂ ಠೇವಣಿ ಹಣ ನಿಗಧಿಪಡಿಸಿದೆ. ನಾಮಪತ್ರ ಸಲ್ಲಿಸುವಾಗ ಚುನಾವಣಾಧಿಕಾರಿಗಳ ಕಚೇರಿಯ ಕಟ್ಟಡದ 100 ಮೀ ವ್ಯಾಪ್ತಿಯಲ್ಲಿ ಕೇವಲ 3 ವಾಹನಗಳಿಗೆ ಮಾತ್ರ ಪ್ರವೇಶವಿದ್ದು, ಚುನಾವಣಾಧಿಕಾರಿಗಳ ಕೊಠಡಿಗೆ ಅಭ್ಯರ್ಥಿಯ ಜೊತೆಗೆ 4 ಜನರಿಗೆ ಮಾತ್ರ ಅವಕಾಶವಿದ್ದು, ಮಾಧ್ಯಮದವರಿಗೆ ಪ್ರವೇಶವಿರುವುದಿಲ್ಲ, ವಾರ್ತಾ ಇಲಾಖೆಯ ಮೂಲಕ ನಾಮಪತ್ರ ಸಲ್ಲಿಕೆಯ ಪೊಟೋ ಮತ್ತು ವೀಡಿಯೋ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದರು.
ಅಭ್ಯರ್ಥಿಗಳು ಚುನಾವಣಾ ಆಯೋಗವು ಸೂಚಿಸಿರುವ ಎಲ್ಲಾ ದಾಖಲೆಗಳನ್ನು ನಾಮಪತ್ರದೊಂದಿಗೆ ತಪ್ಪದೇ ಸಲ್ಲಿಸಬೇಕು, ನಾಮಪತ್ರ ಸಲ್ಲಿಸುವ ಮುನ್ನಾ ದಿನ ತಮ್ಮ ನಾಮಪತ್ರಗಳು ಕ್ರಮಬದ್ದವಾಗಿರುವ ಕುರಿತಂತೆ ಅಪರ ಜಿಲ್ಲಾಧಿಕಾರಿಗಳ ಬಳಿ ತೆರಳಿ ಪರಿಶೀಲಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಆಮ್ ಆದ್ಮಿ ಪಕ್ಷ, ಬಿ.ಜೆ.ಪಿ. ಕಾಂಗ್ರೆಸ್, ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಪ್ರತಿನಿಧಿಗಳು ಉಪಸ್ಥಿತರಿದ್ದರು.