ಕಾರವಾರ: ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆ ನಾಮಪತ್ರ ಸಲ್ಲಿಕೆ, ಪರಿಶೀಲನೆ ಹಾಗೂ ನಾಮಪತ್ರಗಳನ್ನು ಹಿಂಪಡೆಯುವ ಕಾರ್ಯಗಳು ಸುಗಮ ಮತ್ತು ಶಾಂತಿಯುತವಾಗಿ ನಡೆಯಬೇಕಿರುವುದರಿಂದ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚರಿಕೆ ಕ್ರಮವಾಗಿ ಏಪ್ರಿಲ್ 12 ರಂದು ಬೆಳಗ್ಗೆ 6 ಗಂಟೆಯಿಂದ ಏಪ್ರಿಲ್ 22ರ ಸಂಜೆ 6 ಗಂಟೆಯವರೆಗೆ ಜಿಲ್ಲಾಧಿಕಾರಿ ಕಚೇರಿಯ ಆವರಣದ 100 ಮೀಟರ್ ವ್ಯಾಪ್ತಿಯ ಸುತ್ತ ಸಿ.ಆರ್.ಪಿ.ಸಿ ಸೆಕ್ಷನ್ 144 ಜಾರಿಗೊಳಿಸಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರನಿಷೇದಾಜ್ಞೆ ಹೊರಡಿಸಿ ಆದೇಶಿಸಿದ್ದಾರೆ.
ಈ ಅವಧಿಯಲ್ಲಿ ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಮಯದಲ್ಲಿ ನಿಷೇಧಿತ 100 ಮೀಟರ್ ಪರಿಧಿಯಲ್ಲಿ ಅಭ್ಯರ್ಥಿಯ ವಾಹನವನ್ನು ಒಳಗೊಂಡAತೆ ಗರಿಷ್ಠ 3 ವಾಹನಗಳಿಗೆ ಮಾತ್ರ ಕಚೇರಿ ಆವರಣದಲ್ಲಿ ನಿಲುಗಡೆಗೆ ಅನುಮತಿ ಹಾಗೂ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಚುನಾವಣಾಧಿಕಾರಿ ಕಚೇರಿಯನ್ನು ಪ್ರವೇಶಿಸಲು ಅಭ್ಯರ್ಥಿಯನ್ನು ಒಳಗೊಂಡಂತೆ ಗರಿಷ್ಠ 5 ಜನರಿಗೆ ಮಾತ್ರ ಅನುಮತಿ ನೀಡಿದೆ.
ಐದು ಮಂದಿಗಿಂತ ಹೆಚ್ಚು ಮಂದಿ ಗುಂಪುಗಾರಿಕೆ ನಡೆಸುವುದು, ಆಯುಧ/ಶಸ್ತ್ರಾಸ್ತ್ರಗಳು ಮತ್ತು ಮಾರಕಾಸ್ತ್ರಗಳನ್ನು ಹೊತ್ತು ತಿರುಗುವುದನ್ನು ನಿರ್ಭಂದಿಸಿದೆ. ನಾಮಪತ್ರ ಸಲ್ಲಿಸುವ ಕೇಂದ್ರದ ನಿಷೇಧಿತ 100 ಮೀಟರ್ ಪರಿಧಿಯಲ್ಲಿ ಚುನಾವಣಾ ನಡೆಯುವ ಕಾರ್ಯದ ಮೇಲೆ ನಿರತರಾಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ಅಭ್ಯರ್ಥಿಗಳು ಅನುಮತಿ ಹೊಂದಿದ ರಕ್ಷಣಾ ಇಲಾಖೆಯವರು ಹಾಗೂ ಅನುಮತಿ ಪಡೆದ ಮಾಧ್ಯಮದವರು ಇವರುಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ತರಹದ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿದೆ.
ಯಾವುದೇ ರೀತಿಯ ಘೋಷಣೆ ಕೂಗುವುದು, ಪಟಾಕಿ ಸಿಡಿಸುವುದು, ಮೆರವಣಿಗೆ ನಡೆಸುವುದು ಹಾಗೂ ಶಾಂತಿ ಶಿಸ್ತು ಪಾಲನೆಗೆ ಭಂಗ ತರುವ ರೀತಿಯಲ್ಲಿ ವರ್ತಿಸುವಂತಿಲ್ಲ. ಯಾವುದೇ ರೀತಿಯ ಸಾರ್ವಜನಿಕ ಆಸ್ತಿಗಳಿಗೆ ವಿರೂಪವನ್ನು ಉಂಟು ಮಾಡುವುದನ್ನಾಗಲಿ ಅಥವಾ ನಷ್ಟಗೊಳಿಸುವುದನ್ನಾಗಲಿ ಮಾಡತಕ್ಕದಲ್ಲ. ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ದ ಕಾನೂನಿನನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.