ಶಿರಸಿ: ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಿಂದುಳಿದಂತಹ ಪ್ರದೇಶಗಳಿಂದ ಕೂಡಿದ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಸಂಘಟಿತ ವರ್ಗಗಳನ್ನು ಸಂಘಟಿಸಿ, ಹಕ್ಕಿಗಾಗಿ ಸಂಘಟನಾತ್ಮಕ ಸಂಘಟನೆ ಮತ್ತು ಸಾಂಘಿಕ ೪೦ ವರ್ಷ ಹೋರಾಟದ ಮೂಲಕ ಅರಣ್ಯ ಭೂಮಿ ಹಕ್ಕು ಹಾಗೂ ಸಾಮಾಜಿಕ ನ್ಯಾಯಕ್ಕೆ ಮಾಡಿದ ಕಾರ್ಯ ನೆಮ್ಮದಿ ತಂದಿದೆ ಎಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಹೇಳಿದರು.
ಕನ್ನಡಪರ ಗೋಕಾಕ ವರದಿ ಚಳುವಳಿಯಲ್ಲಿ ವಿದ್ಯಾರ್ಥಿ ಜೀವನದಲ್ಲಿ ಸಕ್ರಿಯವಾಗಿ ಸಾಮಾಜಿಕ ಮೀಸಲಾತಿ, ಅರಣ್ಯ ಭೂಮಿ ಹಕ್ಕು ಸಂಘಟನೆಗಳಲ್ಲಿ ಸಕ್ರಿಯವಾಗಿ ಇಂದಿನವರೆಗೂ ನಿರಂತರವಾದ ೪೦ ವರ್ಷ ಸಂಘಟನೆ- ಹೋರಾಟದ ಕೈಪಿಡಿಯನ್ನು ಸೋಮವಾರ ಅವರ ಕಾರ್ಯಾಲಯದಲ್ಲಿ ಬಿಡುಗಡೆಗೊಳಿಸಿ ಮಾತನಾಡುತ್ತ ಮೇಲಿನಂತೆ ಹೇಳಿದರು.
ಅನಕ್ಷರಸ್ಥ, ಆರ್ಥಿಕ ದುರ್ಬಲ ವರ್ಗದವರಿಗೆ ಜ್ಞಾನವನ್ನು ನೀಡಿ, ಜಾಗೃತ ಮೂಡಿಸಿ, ಅಸಂಘಟಿತ ವರ್ಗಗಳನ್ನ ಸಹಸ್ರಾರು ಸಂಖ್ಯೆಯಲ್ಲಿ ಸಂಘಟನಾತ್ಮಕವಾಗಿ ಸಂಘಟಿಸಿ, ಹೋರಾಟದ ಪಡೆಯನ್ನು ಕಟ್ಟಿಕೊಂಡು, ನಿರಂತರವಾಗಿ ಬೀದಿಗಿಳಿದು ಐತಿಹಾಸಿಕ ನಿರಂತರ ಹೋರಾಟವು ವಿಶೇಷವಾಗಿದೆ ಎಂದು ಅವರು ಹೇಳಿದರು.
ಹೋರಾಟಕ್ಕೆ ಸಾಮಾಜಿಕ ಬದ್ದತೆ:
ಅನಕ್ಷರಸ್ಥ, ಆರ್ಥಿಕವಾಗಿ ದುರ್ಬಲ, ಸಾಮಾಜಿಕ ಅಸಮತೋಲನಕ್ಕೆ ಒಳಗೊಂಡು, ಮೀಸಲಾತಿ ವಂಚಿತ ಜಾತಿಯ ಸದಸ್ಯರಲ್ಲಿ ಸಾಮಾಜಿಕ ಪ್ರಜ್ಞೆ ಮತ್ತು ಜಾಗೃತೆ ಮೂಡಿಸುವ ಮೂಲಕ ಮೀಸಲಾತಿ ಹಕ್ಕಿಗೆ ಕಳೆದ ನಾಲ್ಕು ದಶಕಗಳಲ್ಲಿ ಮೀಸಲಾತಿ ವಂಚಿತಗೊಂಡಿರುವಂತವರಿಗೆ ಹೋರಾಟದ ಮೂಲಕ ಸಾಮಾಜಿಕ ನ್ಯಾಯ ನೀಡಿರುವುದು ದಾಖಲಾರ್ಹ ಎಂದು ಅವರು ಹೇಳಿದರು
ಚೆನ್ನಪ್ಪ ರೆಡ್ಡಿ ಮೀಸಲಾತಿ ಆಯೋಗದಲ್ಲಿ, ಗುನಗಿ ಪಡ್ತಿ, ಉಪನಾಡವರ, ಕುಳವಡಿ ಮರಾಠಿ ಮುಂತಾದ ಜಾತಿಗಳು ಮೀಸಲಾತಿ ಪಟ್ಟಿಯಿಂದ ಕೈಬಿಟ್ಟಿರುವುದನ್ನು ಅಂದಿನ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಗಮನಕ್ಕೆ ತಂದು ನ್ಯಾಯ ಒದಗಿಸಿ ಕೊಡಲಾಗಿದ್ದು ೯೦ರ ದಶಕದಲ್ಲಿ ರಾಷ್ಟ್ರೀಯ ಹಿಂದುಳಿದ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಪಿ.ಕೆ ಶ್ಯಾಮಸುಂದರ ನೇತೃತ್ವದ ಆಯೋಗಕ್ಕೆ ಕೇಂದ್ರ ಸರಕಾರದ ಮೀಸಲಾತಿಯಿಂದ ವಂಚಿತರಾಗಿರುವ ಶೇರುಗಾರ್, ಸಿದ್ಧಿ, ಗುನಗಿ ಮತ್ತು ಕುಳವಾಡಿ ಮರಾಠಿ ಸಮಾಜವನ್ನು ತಾಂತ್ರಿಕ ದೋಷದಿಂದ ಮೀಸಲಾತಿ ವಂಚಿತವಾಗಿರುವ ಸಮಾಜದ ಪರವಾದ ಕಾರ್ಯ ಮಾಡಿರುವುದನ್ನು ಈ ಸಂದರ್ಭದಲ್ಲಿ ನೆನಪಿಸಿದರು.
ಅರಣ್ಯವಾಸಿಗಳಿಗೆ ಧ್ವನಿ:
ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಸ್ತವ್ಯ ಮತ್ತು ಸಾಗುವಳಿಗಾಗಿ ಸುಮಾರು ೮೫,೦೦೦ ಕುಟುಂಬಗಳು ಅರಣ್ಯ ಪ್ರದೇಶದ ಮೇಲೆ ಅವಲಂಬಿತವಾಗಿರುವಂತವರಿಗೆ, ಅರಣ್ಯವಾಸಿಗಳ ಭೂಮಿ ಹಕ್ಕಿಗಾಗಿ, ಅರಣ್ಯವಾಸಿಗಳ ಪರ ೩೩ ವರ್ಷದಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರಾಜ್ಯಾದ್ಯಂತ ಸುಮಾರು ೫೦೦೦ ಕ್ಕೂ ಮಿಕ್ಕಿ ಹೋರಾಟ, ಅಭಿಯಾನ, ಸಂಘಟನೆ, ಕಾನೂನು ಜಾಗೃತಿ, ಪಾದಯಾತ್ರೆ ಕಾರ್ಯಕ್ರಮ ದೇಶದ ಸಾಮಾಜಿಕ ಹೋರಾಟದ ಮೈಲಿಗಲ್ಲು ಎಂದು ರವೀಂದ್ರ ನಾಯ್ಕ ಉಲ್ಲೇಖಿಸಿದರು.