ಮುಂಡಗೋಡ: ತಾಲೂಕಿನ ಚವಡಳ್ಳಿ ಗ್ರಾಮದ ಮೈಲಾರಲಿಂಗ ಜಾತ್ರೆ ಸೋಮವಾರ ವಿಜೃಂಭಣೆಯಿಂದ ನಡೆಯಿತು.
ಚವಡಳ್ಳಿ ಮತ್ತು ಕ್ಯಾಸನಕೇರಿ ಗ್ರಾಮಗಳ ಭಜನೆ ಜಾಂಜ ಮೇಳ ಡೊಳ್ಳಿನ ಮಜಲು ಹಾಗೂ ಶಹನಾಯಿ ವಾದ್ಯ ವೈಭವಗಳೊಂದಿಗೆ ಹೊರಟು ‘ಏಳುಕೋಟಿ ಏಳುಕೋಟಿ ಏಳುಕೋಟಿಗ್ಯೋ ಛಾಂಗಮಲೋ’ ಎಂಬ ಘೋಷನೆಯೊಂದಿಗೆ ಮೈಲಾರಲಿಂಗ ಸನ್ನಿಧಿಗೆ ಆಗಮಿಸಿ ನಂತರ ಮಹಾಪೂಜೆ ಮಹಾಭಿಷೇಕ ಜರುಗಿದವು.
ಚವಡಳ್ಳಿ ಮತ್ತು ಕ್ಯಾಸನಕೇರಿ ಮಧ್ಯವಿರುವ ವಿಶಾಲವಾದ ಆಲದ ಮರದ ಅಡಿಯಲ್ಲಿ ಮೈಲಾರಲಿಂಗ ಮೂರ್ತಿಯಿದ್ದು, ಎರಡು ಗ್ರಾಮಗಳ ಪಲ್ಲಕಿಯು ಅಲ್ಲಿಗೆ ಬಂದು ತಲುಪುತ್ತದೆ. ನಂತರ ದೇವರ ಗದ್ದುಗೆ ಎದುರಿನ ಕಲ್ಲಿನಮೂರ್ತಿಗೆ ಕಬ್ಬಿಣದ ಸರಪಳಿಗಳನ್ನು ಕಟ್ಟಿ ಭಕ್ತರು ಏಳು ಕೋಟಿ ಏಳು ಕೋಟಿ ಎಂದು ಪ್ರದಕ್ಷಿಣೆ ಹಾಕುತ್ತ ಕಬ್ಬಿಣದ ಆರು ಸರಪಳಿಗಳನ್ನು ಕೈಯಿಂದ ತುಂಡರಿಸಿದರು. ಶಸ್ತ್ರ ಪವಾಡ,ಶಿವದಾರರ ಪವಾಡ,ಆರತಿ ಪವಾಡ ಮತ್ತು ಸರಪಳಿ ಪವಾಡವನ್ನು ಕಣ್ತುಂಬಿಕೊಂಡ ಭಕ್ತರು ದೇವರ ಆರ್ಶಿವಾದ ಪಡೆದರು
ಮಳೆ ಬೆಳೆ ಸಂಪಾಯಿತಲೆ ಪರಾಕ್: ಬೆಳಿಗ್ಗೆಯಿಂದಲೆ ಈ ವರ್ಷದ ಕಾರಣಿಕೆ ಕೇಳಲು ಸುತ್ತಮುತ್ತಲೂ ಗ್ರಾಮದ ಭಕ್ತರು ಸೇರಿದ್ದರು. ಹತ್ತಾರು ಅಡಿ ಎತ್ತರದ ಕಂಬ ಏರಿದ ಗೊರವಪ್ಪಜ್ಜ ಮಳೆ ಬೆಳೆ ಸಂಪಾಯಿತಲೆ ಪರಾಕ್ ಎಂದು ಕಾರಣಿಕೆ ನುಡಿದು ಕೆಳಗೆ ಜಿಗಿದರು. ಗೊರವಪ್ಪಜ್ಜಗಳು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಭಕ್ತರಿಗೆ ಭಂಡಾರ ಹಚ್ಚುತ್ತಿದ್ದ ಗೊರವಪ್ಪಜ್ಜರು ಭಕ್ತಿಯಲ್ಲಿ ತೇಲಿ ಹೆಜ್ಜೆ ಹಾಕಿದರು.