ಇಂದು ರಥದ ಕಲಶ ಕಂಬದ ಸ್ಥಾಪನೆ | ಭವ್ಯ ಶೋಭಾಯಾತ್ರೆಗೆ ಸಜ್ಜು
ಶಿರಸಿ: ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಶಿರಸಿ ಶ್ರೀ ಮಾರಿಕಾಂಬಾ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದ್ದು, ಭಕ್ತರು ತಮ್ಮ ಆರಾಧ್ಯ ದೇವಿ ಶಿರಸಿಯಮ್ಮ, ಮಾರಿಯಮ್ಮನ ಜಾತ್ರಾ ಗದ್ದುಗೆಯಲ್ಲಿ ದರ್ಶನಕ್ಕೆ, ಹರಕೆ ಪೂಜೆ ಸಲ್ಲಿಕೆಗೆ ಕಾತರರಾಗಿದ್ದರೆ, ಶ್ರೀದೇವಿಯ ಭಕ್ತರಿಗೆ ಸೇವೆ ಸಲ್ಲಿಸಲು, ದರ್ಶನ ಪಡೆಯಲು ವ್ಯವಸ್ಥೆ ಕಲ್ಪಿಸಲು ಶ್ರೀದೇವಸ್ಥಾನದ ಆಡಳಿತ ಮಂಡಳಿ, ಬಾಬದಾರರ ಕುಟುಂಬಗಳು ಹಾಗೂ ತಾಲೂಕಾ ಆಡಳಿತ, ಸರ್ಕಾರದ ವಿವಿಧ ಇಲಾಖೆಗಳು ಶ್ರಮಿಸುತ್ತಿವೆ.
ಬಣ್ಣ ಹಾಗೂ ಕಾವಿಯ ಕಲೆಯ ಸಾಂಪ್ರದಾಯಿಕ ಚಿತ್ರಗಳಿಂದ ಕಂಗೊಳಿಸುತ್ತಿರುವ ದೇವಸ್ಥಾನದ ಸಭಾ ಮಂಟಪದಲ್ಲಿ ಶ್ರೀ ಮಾರಿಕಾಂಬಾ ದೇವಿಯನ್ನು ಅಚ್ಚುಕಟ್ಟಾಗಿ ಮೂರುವರೆ ಶತಮಾನಗಳಿಂದ ನಡೆದುಬಂದ ಸಂಪ್ರದಾಯ, ಆಚರಣೆಯ ಪದ್ಧತಿಯಂತೆ ಗ್ರಾಮದೇವಿಯರಾದ ಮಾರಿಕಾಂಬೆಯ ಸಹೋದರಿಯರೆಂದು ಕರೆಯಲಾಗುವ ಶ್ರೀ ಮರ್ಕಿ-ಶ್ರೀದುರ್ಗಿಯರ ಜೊತೆ ಜಾತ್ರಾ ಕಲ್ಯಾಣ ಪ್ರತಿಷ್ಠೆಗಾಗಿ ಸಿದ್ಧಗೊಳಿಸುತ್ತಿದ್ದರೆ, ಮಂಗಳವಾರ ಮಧ್ಯರಾತ್ರಿಯ ಹೊತ್ತಿಗಿನ ನಿಗದಿತ ಮುಹೂರ್ತದಲ್ಲಿ ನಡೆಯುವ ಸಮಾರಂಭಕ್ಕೆ ಆಗಮಿಸುವ ಭಕ್ತಾದಿಗಳ ಪಾಲ್ಗೊಳ್ಳುವಿಕೆಗೂ ಅಗತ್ಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಜಾತ್ರಾ ಕಲ್ಯಾಣ ಪ್ರತಿಷ್ಠೆಯ ನಂತರ ಜಾತ್ರಾ ಗದ್ದುಗೆಗೆ ಶ್ರೀದೇವಿ ತೆರಳುವ ರಥೋತ್ಸವಕ್ಕಾಗಿ ಶ್ರೀದೇವಸ್ಥಾನದ ಎದುರು ರಥದ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ರಥದ ಕಲಶ ಕಂಬದ ಸ್ಥಾಪನೆ, ಅಟ್ಟಣಿಗೆ ನಿರ್ಮಾಣ ಪೂರ್ಣಗೊಂಡಿದ್ದು, ಮಂಗಳವಾರ ಮಧ್ಯಾಹ್ನ 12.27 ರಿಂದ 12.36 ಒಳಗಿನ ಶುಭಮುಹೂರ್ತದಲ್ಲಿ ರಥದ ಕಲಶ ಪ್ರತಿಷ್ಠೆ ನಡೆಯಲಿದೆ. ನಂತರ ಪತಾಕೆ ಜೋಡಣೆ ನಡೆಸಿ, ರಥವನ್ನು ಶ್ರೀದೇವಿಯ ರಥಾರೋಹಣ ಹಾಗೂ ರಥೋತ್ಸವದ ಶೋಭಾಯಾತ್ರೆಗೆ ಸಜ್ಜುಗೊಳಿಸಲಾಗುತ್ತದೆ.
ಅನ್ನಪ್ರಸಾದದ ವ್ಯವಸ್ಥೆಯನ್ನು, ಜಾತ್ರಾ ಮಂಟಪದಲ್ಲಿ ಶ್ರೀದೇವಿಯ ಸಿಹಿ ಪ್ರಸಾದ, ಕುಂಕುಮ ಪ್ರಸಾದದ ತಯಾರಿಯೂ ಭರದಿಂದ ಸಾಗಿದೆ. ಇದಲ್ಲದೇ ನಗರದ ಹೃದಯ ಭಾಗದಲ್ಲಿರುವ ಬಿಡ್ಕಿಬೈಲಿನ ಜಾತ್ರಾ ಗದ್ದುಗೆಯಲ್ಲಿ ಶ್ರೀದೇವಿಯ ದರ್ಶನಕ್ಕೆ ಸಾಗಲು ಭಕ್ತರಿಗೆ ಸರತಿ ಸಾಲಿಗಾಗಿ ಕಬ್ಬಿಣದ ಗ್ರಿಲ್ಗಳು, ಹಣ್ಣು ಕಾಯಿ ಸೇವೆಗಾಗಿ ವಿಶಾಲ ಜಾಗದಲ್ಲಿ ಹಣ್ಣು ಕಾಯಿ ಒಡೆಯುವ ಸೌಲಭ್ಯ, ಉಡಿ, ಸೀರೆ ಸೇವೆ ಹಾಗೂ ಇತರ ಸೇವೆಗಳ ಪಾವತಿ ಮತ್ತು ಸುವಸ್ತುಗಳ ಪೂರೈಕೆಗಾಗೀ ಸೇವಾ ಕೌಂಟರ್ಗಳು, ಜಾತ್ರಾ ಮಂಟಪದಲ್ಲಿ ಆಡಳಿತ ಮಂಡಳಿಯ ಕಾರ್ಯಾಲಯ, ಭಕ್ತರ, ಜಾತ್ರೆಯ ಸುರಕ್ಷತೆಗಾಗಿ ಪೋಲೀಸ್ ಚೌಕಿಗಳ ನಿರ್ಮಿಸಿದ್ದು, ಜಾತ್ರಾ ಚಪ್ಪರದಲ್ಲಿ ಶ್ರೀದೇವಿಯ ಪ್ರತಿಷ್ಠೆಯ ಪೂರ್ವದ ಅಂತಿಮ ಹಂತದ ನಿರ್ಮಾಣಗಳು ಯುದ್ದೋಪಾದಿಯಲ್ಲಿ ನಡೆಯುತ್ತಿವೆ.
ಜಾತ್ರಾ ಚಪ್ಪರದ ಪಕ್ಕದಲ್ಲಿ ಭಕ್ತರಿಗೆ ಹಣ್ಣು ಕಾಯಿ, ಉಡಿ ಇತ್ಯಾದಿ ಖರೀದಿಗಾಗಿ ಹಣ್ಣು ಕಾಯಿಗಳ ಅಂಗಡಿಗಳನ್ನು ಪ್ಲಾಟ್ಗಳನ್ನು ಟೆಂಡರ್ನಲ್ಲಿ ಪಡೆದ ವ್ಯಾಪಾರಿಗಳು ನಿರ್ಮಿಸಿ, ಸಾಮಾನು, ಸರಂಜಾಮುಗಳನ್ನು ಜೋಡಿಸಿಕೊಳ್ಳುತ್ತಿದ್ದಾರೆ. ಜಾತ್ರಾ ಸುತ್ತಮುತ್ತಲಿನ ಪರಿಸರದಲ್ಲಿ ಅಂಗಡಿ ಮುಗ್ಗಟ್ಟುಗಳ ಮಾಯಾಲೋಕವೇ ತೆರೆದುಕೊಳ್ಳುತ್ತಿದೆ. ಅಮ್ಯೂಸ್ಮೆಂಟ್ ಸಹಿತ ವಿವಿಧ ಮನೋರಂಜನೆಯ ವ್ಯವಸ್ಥೆಗಳು ಜೋಡಣೆಗೊಂಡು ಜನರನ್ನು ರಂಜಿಸಲು ಸಜ್ಜಾಗುತ್ತಿವೆ.
ಜಾತ್ರೆಯ ನಿಮಿತ್ತ ನಗರದಲ್ಲಿ ಬೀಡುಬಿಟ್ಟಿರುವ ನಾಟಕ ಕಂಪನಿಗಳು ತಮ್ಮ ಪ್ರದರ್ಶನಕ್ಕೆ ಸಿದ್ಧಗೊಳ್ಳುತ್ತಿವೆ. ನಗರದ ಪ್ರಮುಖ ಬೀದಿಗಳು ವ್ಯಾಪಾರಸ್ಥರು, ಅಂಗಡಿ, ಮುಗ್ಗಟ್ಟುಗಳ ನಿರ್ಮಾಣ ಕಾರ್ಯನಿರತರಿಂದ ತುಂಬಿ ತುಳುಕುತ್ತಿದೆ.
ದಿನ ಕಳೆಯುತ್ತಾ ಜಾತ್ರೆಯ ಆರಂಭದ ಕ್ಷಣಗಳು ಸಮೀಪಿಸಿದ್ದು, ನಗರವು ಶ್ರೀದೇವಿಯ ಸ್ವಾಗತಕ್ಕೆ ಕಾಯುತ್ತಿದೆ. ಜಾತ್ರಾ ಕಾರ್ಯಗಳ ಹತ್ತಾರು ಒತ್ತಡದ ಮಧ್ಯೆಯೂ ಶ್ರೀದೇವಿಯ ಜಾತ್ರೆ ಶ್ರೀದೇವಿಯ ಇಚ್ಛೆ, ಆಶೀರ್ವಾದದಿಂದ ಶುಭಪ್ರದವಾಗಿ ನಡೆಯುವುದೆಂಬ ನಂಬಿಕೆ ಭಕ್ತರಲ್ಲಿ ಮತ್ತಷ್ಟು ಹುರುಪಿನಿಂದ ಹಗಲು, ಇರುಳು ಕಾರ್ಯನಿರ್ವಹಿಸಲು ಪ್ರೇರೇಪಿಸುತ್ತಿದೆ.