ಶಿರಸಿ : ನಾಡಿನ ಪ್ರಸಿದ್ಧ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಆಚರಣೆಯ ಮೂರನೇ ಹೊರಬೀಡು ಸಂಪ್ರದಾಯಿಕ ವಿಧಿವಿಧಾನಗಳೊಡನೆ ಮಂಗಳವಾರ ರಾತ್ರಿ ನಡೆಯಿತು.
ಮಂಗಳವಾರ ರಾತ್ರಿ ನಡೆದ ಪೂರ್ವ ದಿಕ್ಕಿನ ಮೂರನೇ ಹೊರಬೀಡಿನಲ್ಲಿ ಶ್ರೀ ಮಾರಿಕಾಂಬಾ ದೇವಸ್ಥಾನದಿಂದ ಹೊರಟ ಶ್ರೀ ದೇವಿಯ ಉತ್ಸವ ಮೂರ್ತಿ ಹೊತ್ತ ಪಲ್ಲಕ್ಕಿಯು ಮರ್ಕಿದುರ್ಗಿ ದೇವಸ್ಥಾನಕ್ಕೆ ಹೋಗಿ, ಜಾತ್ರಾ ಗದ್ದುಗೆಗೆ ತಲುಪಿ, ಅಲ್ಲಿಂದ ಪೂರ್ವದಿಕ್ಕಿನಲ್ಲಿನ ಬನ್ನಿಕಟ್ಟೆಗೆ ಆಗಮಿಸಿತು. ಬನ್ನಿಕಟ್ಟೆಯಲ್ಲಿ ಶ್ರೀ ದೇವಿಯ ಪೂಜಾ ಕೈಂಕರ್ಯ ಹಾಗೂ ಉತ್ಸವಗಳ ಆಚರಣೆಯಲ್ಲಿ ಪ್ರಮುಖ ಸ್ಥಾನ ಹೊಂದಿರುವ ಬಾಬದಾರ ಕುಟುಂಬಗಳು ತಂದ ಸಾಂಪ್ರದಾಯಿಕ ಪಡಲ್ಗಿಯೊಡನೆ ಪೂಜಿಸಲಾಯಿತು.
ಪೂಜಾ ವಿಧಿಗಳ ನಂತರ ಹಿಂತಿರುಗಿ ಹೊರಟ ಶ್ರೀದೇವಿಯ ಉತ್ಸವ ಮೂರ್ತಿಯು ಮರ್ಕಿದುರ್ಗಿ ದೇವಸ್ಥಾನಕ್ಕೆ ಹೋಗಿ, ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಮರಳಿತು. ಎರಡು ವರ್ಷಗಳಿಗೊಮ್ಮೆ ೯ ದಿನಗಳ ಕಾಲ ನಡೆಯುವ ಜಾತ್ರೆಯ ಸಾಂಪ್ರದಾಯಿಕ ಆಚರಣೆಗಳಲ್ಲಿನ ೫ ಹೊರಬೀಡುಗಳಲ್ಲಿ ಇದೀಗ ಮೂರನೇಯ ಹೊರಬೀಡಿನ ಆಚರಣೆಯು ಪೂರ್ವ ದಿಕ್ಕಿನಲ್ಲಿ ದೇವಸ್ಥಾನದ ಸಂಪ್ರದಾಯಿಕ ಆಚರಣೆಯಂತೆ ಬಾಬದಾರರ ಕುಟುಂಬದವರು, ದೇವಸ್ಥಾನದ ಆಡಳಿತ ಮಂಡಳಿ ಧರ್ಮದರ್ಶಿಗಳು, ನೌಕರರು, ಭಕ್ತರನ್ನೊಳಗೊಂಡ ನೂರಾರು ಜನರ ಉಪಸ್ಥಿತಿಯಲ್ಲಿ ಸಂಪನ್ನಗೊಂಡಿತು.