ಬನವಾಸಿ: ಕದಂಬೋತ್ಸವ ಆಚರಣೆಯಲ್ಲಿ ಕದಂಬರ ಇತಿಹಾಸವನ್ನು ನಾಡಿಗೆ ತಿಳಿಸುವ ಕಾರ್ಯವಾಗಬೇಕು ಎಂದು ಪ್ರೋ.ಕೆ.ಎನ್.ಹೊಸ್ಮನಿ ಹೇಳಿದರು.
ಬನವಾಸಿ ಕದಂಬೋತ್ಸವದಲ್ಲಿ ಆಯೋಜಿಸಿದ್ದ ಇತಿಹಾಸ ಗೋಷ್ಠಿಯ ಅಧ್ಯಕ್ಷತೆ ಮಾತನಾಡಿದ ಅವರು, ಹಲವು ಪ್ರಥಮಗಳಿಗೆ ಬನವಾಸಿ ಹೆಸರುವಾಸಿ. ನಾಡಿನ ಕಲೆ ಸಂಸ್ಕೃತಿ ಸಂಪ್ರದಾಯಗಳಿಗೆ ಕದಂಬರ ಕೊಡುಗೆ ಅಪಾರವಾಗಿದೆ. ಕದಂಬೋತ್ಸವ ಆಚರಣೆಯಲ್ಲಿ ಕದಂಬರ ಕುರಿತು ತಿಳಿಸುವ ಕೆಲಸ ಆಗಬೇಕು. ವರದಾ ನದಿಯ ದಂಡೆಯ ಮೇಲಿರುವ ಬನವಾಸಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡವರು ಕದಂಬರು. ಭಾರತದ ಇತಿಹಾಸದಲ್ಲಿ ಕದಂಬರ ಇತಿಹಾಸಕ್ಕೆ ವಿಶೇಷ ಸ್ಥಾನಮಾನವಿದೆ. ಬನವಾಸಿ ರಾಜ್ಯದಲ್ಲಿ ಅನೇಕ ಪಾಂಡಿತ್ಯರಿದ್ದರು. ಗುರುಕುಲ ಪದ್ಧತಿಯಲ್ಲಿ ಅಂದಿನ ಕಾಲದಲ್ಲೇ ಉಚಿತ ಶಿಕ್ಷಣ ಪದ್ದತಿಯನ್ನು ಆರಂಭಿಸಲಾಗಿತ್ತು. ಯಾವ ದೇಶ ಚರಿತ್ರೆ ಯನ್ನು ಮರೆಯುತ್ತದೆಯೋ ಆ ದೇಶಕ್ಕೆ ಉಳಿಗಾಲವಿಲ್ಲ. ಕಾಳಿದಾಸನೂ ಬನವಾಸಿಯನ್ನು ಹೊಗಳಿದ್ದ ಎಂದು ತಿಳಿಯುತ್ತದೆ. ಇಂತಹ ಅದ್ಭುತ ಇತಿಹಾಸವನ್ನು ಹೊಂದಿದ ಭೂಮಿ ಬನವಾಸಿಯಾಗಿದೆ ಎಂದರು.
ಶ್ರೇಷ್ಠ ಸಾಹಿತಿ ಸುಬ್ರಾಯ ಮತ್ತೀಹಳ್ಳಿ ಇತಿಹಾಸ ಪ್ರಜ್ಞೆಯ ಅನಿವಾರ್ಯತೆ ಕುರಿತು ವಿಷಯ ಮಂಡಿಸಿ ಮಾತನಾಡಿದ ಅವರು ಇತಿಹಾಸ ಪ್ರಜ್ಞೆ ಇಲ್ಲದ ಮನುಷ್ಯ ನ ಬದುಕು ಸತ್ತುಹೋದಂತೆ.ಹಿಂದಿನ ಅರಿವು ನಮಗಿರಬೇಕು. ನರ್ಮದಾ ನದಿವರೇಗಿನಷ್ಟು ದೊಡ್ಡ ಸಂಸ್ಥಾನ ನಮ್ಮ ಕದಂಬ ಸಂಸ್ಥಾನ. ಕದಂಬರ ರಾಜ್ಯ ಲಾಂಛನದ ಮೂಡುವಿಕೆ ಆಗಬೇಕು. ನೆನಪಿನ ಒರತೆ ಪುಟ್ಟ ಸಭೆಯೊಳಗೆ ಮೂಡಿಸುವ ಪ್ರಯತ್ನ ವಾಗಲಿ. ಕದಂಬರ ಆಡಳಿತ ವೈಖರಿಯನ್ನು ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗ ಮೈ ರೊಮಾಂಚನ ವಾಗುತ್ತದೆ.ಪ್ರತಿ ಕಿಮಿ ಗೆ ಒಂದರಂತೆ ಕುದುರೆ ಲಾಯ ಇರುತ್ತಿತ್ತು. ಅಷ್ಟು ವೇಗದಲ್ಲಿ ರಾಜ್ಯದ ಮಾಹಿತಿಗಳನ್ನು ರಾಜರು ತರಿಸಿಕೊಳ್ಳುತ್ತಿದ್ದರು. ಚಾಲುಕ್ಯರು, ರಾಷ್ಟ್ರಕೂಟರೂ ಸಹ ಇವರ ಆಡಳಿತ ಪದ್ದತಿಯನ್ನು ಅನುಸರಿಸುತ್ತಿದ್ದರು. ಅದ್ಬುತ ಹಾಗೂ ವ್ಯವಸ್ಥಿತ ಆಡಳಿತ ವೈಖರಿಯನ್ನು ಕದಂಬವಂಶ ಹೊಂದಿತ್ತು ಎಂದು ಇತಿಹಾಸವನ್ನು ಓದಿದಾಗ ತಿಳಿಯುತ್ತದೆ.
ಬನವಾಸಿ ಹಾಗೂ ಮಲೆನಾಡಿನ ವೈಭವವನ್ನು ಪಂಪನ ಶೈಲಿಯಲ್ಲಿ ಕೇಳಿದರೆ ಚೆಂದ ಎನ್ನಿಸುತ್ತದೆ. ಬನವಾಸಿಯಲ್ಲಿ ಪಂಪ 35ವರ್ಷಗಳ ಕಾಲ ನೆಲೆಸಿದ್ದ ಎಂಬುದು ಇತಿಹಾಸ. ಮಧುಮಹೋತ್ಸವ ಎಂದು ಕದಂಬೋತ್ಸವಕ್ಕೆ ಇಟ್ಟರೆ ಚೆಂದ ಎನ್ನಿಸುತ್ತದೆ. ಮನುಷ್ಯನಾಗಿ ಹುಟ್ಟಲು ಸಾಧ್ಯವಾಗದಿದ್ದರೆ ಜೇನಿನ ಮರಿಯಾಗಿಯಾದರೂ ಬನವಾಸಿಯಲ್ಲಿ ಹುಟ್ಟಬೇಕು ಎಂದು ಪಂಪ ವರ್ಣಿಸಿದ್ದಾನೆ.
ಅಲ್ಲಮ ಪ್ರಭು ಶಿರಸಿ ಸಿದ್ದಾಪುರ ರಸ್ತೆಯ ಕರೂರಿನವರು.ಅವರ ಇತಿಹಾಸವನ್ನು ಜಗತ್ತಿಗೆ ತಿಳಿಸುವ ಕೆಲಸ ಆಗಬೇಕು. ಅಲ್ಲಮ ಪ್ರಭುವಿನ ತತ್ವ ನಮಗೆ ಅರ್ಥವಾದರೆ ಕದಂಬ ಸಾಮ್ರಾಜ್ಯದ ಸಾತ್ವಿಕ ಅರಿವು ನಮಗೆ ತಿಳಿಯುತ್ತದೆ ಎಂದರು. ಇತಿಹಾಸ ವನ್ನು ಓದುವ ವಿದ್ಯಾರ್ಥಿಗಳು ಇನ್ನುಮುಂದೆಯಾದರೂ ಹೆಚ್ಚಬೇಕು ಎಂದರು. ಭವ್ಯ ಹಳೇಯೂರು ಸ್ವಾಗತಿಸಿ, ನಿರೂಪಿಸಿ ವಂದಿಸಿದರು.