ಸಿದ್ದಾಪುರ: ನಾಡಿನ ನಾಮಾಂಕಿತ ಸಾಹಿತಿಗಳಾಗಿದ್ದ ವಿಷ್ಣು ನಾಯ್ಕರವರು ನುಡಿದಂತೆ ನಡೆದು ಬರೆದಂತೆ ಬದುಕಿದ ಆದರ್ಶ ಸಾಹಿತಿಯಾಗಿದ್ದರು ಎಂದು ಸಾಹಿತಿ ಸುಬ್ರಾಯ ಮತ್ತಿಹಳ್ಳಿ ನುಡಿದರು.
ಅವರು ಸಿದ್ದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ವಿಷ್ಣು ನಾಯ್ಕರಿಗೆ ಶೃದ್ದಾಂಜಲಿ ಸಭೆ ಉದ್ದೇಶಿಸಿ ಮಾತನಾಡಿದರು. ತಾಲೂಕು ಅಧ್ಯಕ್ಷ ಗೋಪಾಲ ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಮಾತನಾಡಿ ವಿಷ್ಣು ನಾಯಕರು ಸಕಾಲಿಕ ಪತ್ರಿಕೆ ಮೂಲಕ ನನ್ನಂತಹ ನೂರಾರು ಯುವಕರಲ್ಲಿನ ಅಕ್ಷರ ಪ್ರೀತಿಯನ್ನು ಪ್ರೋತ್ಸಾಹಿಸಿ ಬೆಳೆಸಿದ ಹೆಮ್ಮರವಾಗಿದ್ದರು ಎಂದು ಸ್ಮರಿಸಿದರು. ಕ.ಸಾ.ಪ ಅಧ್ಯಕ್ಷ ಗೋಪಾಲ ನಾಯ್ಕ ಮಾತನಾಡಿ ವಿಷ್ಣು ನಾಯಕರು ಕವಿ, ಕಾದಂಬರಿಕಾರ, ವಿಮರ್ಶಕ ರಾಗಿದ್ದರಲ್ಲದೇ ರಾಘವೇಂದ್ರ ಪ್ರಕಾಶನ ನಡೆಸಿ ನೂರಾರು ಕೃತಿಗಳನ್ನು ಪ್ರಕಟಿಸಿದ್ದು ಯಾವತ್ತೂ ಪ್ರಶಸ್ತಿಗೆ ಆಸೆಪಟ್ಟಿರಲಿಲ್ಲ ಎಂದರು. ನಿವೃತ್ತ ಪ್ರಾಂಶುಪಾಲ ಸುರೇಂದ್ರ ದಪೇದಾರ ಮಾತನಾಡಿ ತಾವು ಒಂದೇ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದ ನ್ನು ಒಡನಾಟ ಸ್ಮರಿಸಿದರು. ಕನ್ನೇಶ ಕೋಲಸಿರ್ಸಿ ಮಾತನಾಡಿ ದಿನಕರ ದೇಸಾಯಿಯವರ ಗರಡಿಯಲ್ಲಿ ಬೆಳೆದ ಇವರ ಬದುಕು ಆರಂಭದಿಂದಲೂ ಹೋರಾಟದ ಬದುಕಾಗಿತ್ತು ಎಂದರು. ಪ್ರಾಂಶುಪಾಲ ಎಮ್.ಕೆ.ನಾಯ್ಕ ಹೊಸಳ್ಳಿ, ಹಿರಿಯ ಸಾಹಿತಿ ಜಿ.ಜಿ. ಹೆಗಡೆ ಬಾಳಗೋಡ, ಕೋಶಾಧ್ಯಕ್ಷ ಪಿ.ಬಿ. ಹೊಸೂರು, ಪದಾಧಿಕಾರಿಗಳಾದ ರತ್ನಾಕರ ನಾಯ್ಕ, ಅಣ್ಣಪ್ಪ ನಾಯ್ಕ, ಟಿ.ಕೆಎಮ್. ಅಜಾದ್, ಉಪನ್ಯಾಸಕ ಎನ್.ಟಿ. ನಾಯ್ಕ, ಕವಿ ವಿಠ್ಠಲ ಅವರಗುಪ್ಪ, ಮುಂತಾದವರು ಉಪಸ್ಥಿತರಿದ್ದು ನುಡಿ ನಮನ ಸಲ್ಲಿಸಿದರು. ಉಪನ್ಯಾಸಕ ರತ್ನಾಕರ ನಾಯ್ಕ ನಿರೂಪಿಸಿದರು. ಕಾರ್ಯದರ್ಶಿ ಅಣ್ಣಪ್ಪ ನಾಯ್ಕ ವಂದಿಸಿದರು.