ಸಿದ್ದಾಪುರ: ಜೀವನದಲ್ಲಿ ಸುಖ ಸಿಗಬೇಕಾದರೆ ನಾವು ಧರ್ಮದಿಂದ ಜೀವನ ನಡೆಸಬೇಕು. ಧರ್ಮ ಮತ್ತು ಸಂಸ್ಕಾರ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಧರ್ಮಸ್ಥಳ ಶ್ರೀರಾಮ ಕ್ಷೇತ್ರದ ಪೀಠಾಧ್ಯಕ್ಷರಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಪಟ್ಟಣದ ನೆಹರೂ ಮೈದಾನದಲ್ಲಿ ಜರುಗಿದ ಸಿದ್ದಾಪುರ ಉತ್ಸವವನ್ನು ಶನಿವಾರ ಉದ್ಘಾಟಿಸಿ ಅವರು ಆಶೀರ್ವಚನ ನೀಡಿ, ಇಂದು ಸಮಾಜದಲ್ಲಿ ಹೆಜ್ಜೆ ಹೆಜ್ಜೆಗೂ ಧರ್ಮ, ಜಾತಿ, ಮತ ಎಂಬ ವಿಚಾರವನ್ನು ಮುಂದಿಟ್ಟು ನಮ್ಮನ್ನು ಒಡೆಯುವ ಕೆಲಸ ನಡೆಯುತ್ತಿದೆ.ಆದರೆ ಇಂದು ಈ ಸಿದ್ದಾಪುರ ಉತ್ಸವದಲ್ಲಿ ಜಾತಿ, ಧರ್ಮ, ಮತ ಭೇದವನ್ನು ಮರೆತು ಎಲ್ಲರೂ ಒಟ್ಟಾಗಿ ಸಂಭ್ರಮಿಸುತ್ತಿರುವುದು ಶ್ಲಾಘನೀಯ .ಯಾವುದೇ ಧರ್ಮ ಅಥವಾ ಧರ್ಮಗ್ರಂಥ ಜೀವಿಯನ್ನು ದ್ವೇಷಿಸಬೇಕು ಅಥವಾ ಹಿಂಸಿಸಬೇಕು ಎಂದು ಬೋಧಿಸುವುದಿಲ್ಲ. ಆದರೆ ಮನುಷ್ಯ ಆ ಪ್ರವೃತ್ತಿಯನ್ನು ಬೆಳೆಸಿಕೊಂಡಿರುವುದು ಅವನ ತಪ್ಪಾದ ಗ್ರಹಿಕೆಯಿಂದ. ನಮ್ಮ ಧರ್ಮವನ್ನು ಪ್ರೀತಿಸುವುದರ ಜತೆಗೆ ಉಳಿದ ಧರ್ಮವನ್ನು ಗೌರವಿಸಬೇಕು ಎಂದರು.
ಶಾಸಕ ಭೀಮಣ್ಣ ನಾಯ್ಕ ಮಾತನಾಡಿ ಸಿದ್ದಾಪುರದ ಸರ್ವತೋಮುಖ ಅಭಿವೃದ್ಧಿಗೆ ಶಕ್ತಿಮೀರಿ ಪ್ರಯತ್ನಿಸಲಾಗುವುದು.ಜನತೆ ನಮ್ಮ ಮೇಲಿಟ್ಟ ಭರವಸೆಯನ್ನು ಹುಸಿಯಾಗಿಸದೆ ಜನರೊಡನೆ ಒಂದಾಗಿ ಅವರ ಕಷ್ಟ ಸುಖಗಳನ್ನು ಅರಿತು ಅದನ್ನು ಪರಿಹರಿಸಲು ಸದಾ ಸಿದ್ಧನಿದ್ದೇನೆ ಎಂದರು.
ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಶಿರಸಿ, ಸಿದ್ದಾಪುರ ಶಿಕ್ಷಣ ಪ್ರಸಾರಕ ಸಮಿತಿಯ ಉಪಾಧ್ಯಕ್ಷ ಡಾ.ಶಶಿಭೂಷಣ ಹೆಗಡೆ ದೊಡ್ಮನೆ, ಸಿದ್ಗದಾಪುರದ ಶ್ರೇಯಸ್ ಆಸ್ಪತ್ರೆಯ ಡಾ.ಕೆ. ಶ್ರೀಧರ ವೈದ್ಯ ಮಾತನಾಡಿದರು.ಉತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಸತೀಶ ಹೆಗಡೆ, ವಿಜಯ ದಾಮೋದರ ಪ್ರಭು ಹಾಗೂ ಪಾದಾಧಿಕಾರಿಗಳಿದ್ದರು.
ಸಿದ್ದಾಪುರ ಉತ್ಸವದ ಅಂಗವಾಗಿ ಆಯೋಜಿಸಿದ್ದ ವಿವಿಧ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ನೀಡಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 25 ಜನ ಸಾಧಕರನ್ನು ಸನ್ಮಾನಿಸಲಾಯಿತು. ಉತ್ಸವ ಸಮಿತಿ ಅಧ್ಯಕ್ಷ ಕೆ .ಜಿ. ನಾಯ್ಕ ಹಣಜೀಬೈಲ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.ಸುಧಾರಾಣಿ ನಾಯ್ಕ ನಿರ್ವಹಿಸಿದರು. ವೀರಭದ್ರ ನಾಯ್ಕ ಮಳವಳ್ಳಿ ವಂದಿಸಿದರು.