ಸಿದ್ದಾಪುರ: ನಮ್ಮ ಉಸಿರು ನಿಂತಿರುವುದೇ ಪರಿಸರದ ಆಧಾರದ ಮೇಲೆ. ನೆಲ-ಜಲ-ಬೆಂಕಿ-ಗಾಳಿ-ಆಕಾಶವೆಂಬ ಪಂಚಭೂತಗಳ ಆಶ್ರಯದಲ್ಲಿ ನಾವು ಬದುಕಬೇಕಾಗಿದೆ. ಅವುಗಳನ್ನು ಶುದ್ಧವಾಗಿ ಇಟ್ಟುಕೊಳ್ಳುವ ಹೊಣೆಯೂ ನಮ್ಮದಾಗಿದೆ. ಲಕ್ಷಾಂತರ ವರ್ಷಗಳಿಂದ ವಿಕಾಸ ಹೊಂದಿದ ಸಸ್ಯಾವರಣ, ಪಶು-ಪಕ್ಷಿ ಮೊದಲಾದವುಗಳು ಇನ್ನೂ ಲಕ್ಷಾಂತರ ವರ್ಷಗಳವರೆಗೆ ಬಾಳಬೇಕು. ಈ ಎಚ್ಚರಿಕೆಯಲ್ಲಿ ಕೇವಲ ಐವತ್ತೋ ನೂರೋ ವರ್ಷಗಳ ಕಾಲ ಬದುಕಬಹುದಾದ ಮನುಷ್ಯ ಯೋಚಿಸಿ ಹೆಜ್ಜೆ ಇಡಬೇಕಾಗಿದೆ ಎಂದು ಗ್ರಾಮೀಣ ಸಸ್ಯಶಾಸ್ತ್ರಜ್ಞ, ಯಕ್ಷಗಾನ ಕಲಾವಿದ ಇಟಗಿ ಮಹಾಬಲೇಶ್ವರ ಹೇಳಿದರು.
ಸಿದ್ದಾಪುರ ತಾಲೂಕಿನ ಬೇಡ್ಕಣಿಯ ಜನತಾ ವಿದ್ಯಾಯಲದಲ್ಲಿ ಸಂಭ್ರಮ ಶನಿವಾರದ ಅಂಗವಾಗಿ ಕಲಾಭಾಸ್ಕರ ಇಟಗಿಯವರು ಹಮ್ಮಿಕೊಂಡ “ಔಷಧಿ ಸಸ್ಯಗಳ ಪ್ರಾತ್ಯಕ್ಷಿಕೆ”ಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಮನುಷ್ಯನಿಗೆ ಅನ್ನ, ವಸನ, ವಸತಿ, ಔಷಧಿ ಮೊದಲಾದವುಗಳೇಕೆ ಉಸಿರಾಡಲು ಶುದ್ದ ಆಮ್ಲಜನಕವನ್ನೂ ಕೊಡುವ ಸಸ್ಯಾವರಣವು ಅಮೂಲ್ಯವಾದುವು. ಸಣ್ಣ ಪುಟ್ಟದ್ದಕ್ಕೂ ವೈದ್ಯರ ಮನೆಗೆ ಅಲೆಯದೆ ಸುತ್ತಮುತ್ತಲಿನ ಸಸ್ಯಮೂಲದಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಸಸ್ಯಗಳನ್ನು ಗುರುತಿಸುವಾಗ ಬಹಳ ಎಚ್ಚರಿಕೆ ಬೇಕು. ಇಲ್ಲದಿದ್ದರೆ ಅನಾಹುತ ಆಗುವ ಸಾಧ್ಯತೆಯೇ ಹೆಚ್ಚು ಹಾಗಾಗಿ ನಾವೆಲ್ಲರೂ ಸಸ್ಯಗಳ ಅರಿವನ್ನು ಹೆಚ್ಚಿಸಿಕೊಂಡು ಸುಂದರ ಬಾಳನ್ನು ನಡೆಸೋಣ ಎಂದು ಹೇಳಿದರು. ಮೂವತ್ತಕ್ಕೂ ಹೆಚ್ಚು ಸಸ್ಯಗಳ ಮಾದರಿಗಳನ್ನು ಪರಿಚಯಿಸಿ ಬಳಕೆಯ ಮಾಹಿತಿಯನ್ನು ಒದಗಿಸಲಾಯಿತು. ಮುಖ್ಯೋಧ್ಯಾಪಕಿಯಾದ ಪ್ರತಿಭಾ ಪಾಲೇಕರ ಅಧ್ಯಕ್ಷತೆ ವಹಿಸಿದ್ದು ಹಿತವಚನಗಳನ್ನು ನುಡಿದರು. ಶಿಕ್ಷಕರಾದ ಜಿ.ಟಿ.ಭಟ್ಟ ಕಡತೋಕಾ ಹದಿಹರೆಯದವರ ಸಮಸ್ಯೆಯ ಕುರಿತು ಬೆಳಕು ಚೆಲ್ಲಿದರು. ಶಿಕ್ಷಕಿ ಲತಾ ಹಾಜರಿದ್ದರು. ವಿದ್ಯಾರ್ಥಿಗಳು ಕುತೂಹಲದಿಂದ ಕಿವಿಯಾದರು.