ಶಿರಸಿ: ಉತ್ತರ ಕನ್ನಡ ಮೂಲದ ಶೈಲಜಾ ಶಾಂತಾರಾಮ ಹೆಗಡೆ ಮಂಡಿಸಿದ ‘ಮುಂಬಯಿ ಕನ್ನಡ ಕಾವ್ಯ ಒಂದು ಅಧ್ಯಯನ’ ಮಹಾ ಪ್ರಬಂಧಕ್ಕೆ ಮುಂಬಯಿಯ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ತಮ್ಮ ೫೮ನೇ ವರ್ಷಕ್ಕೆ ಮುಂಬಯಿಯಲ್ಲಿ ಕನ್ನಡಿಗರ ಕೊಡುಗೆ ಕುರಿತು ವಿಶೇಷ ಅಧ್ಯಯನ ಆರಂಭಿಸಿದ್ದರು. ಮುಂಬಯಿಯಲ್ಲಿ ಕನ್ನಡ ಕಾವ್ಯದ ಕೃಷಿ ಮಾಡಿದ ಅರವಿಂದ ನಾಡಕರ್ಣಿ, ದಿನಕರ ದೇಸಾಯಿ, ಗಂಗಾಧರ ಚಿತ್ತಾಲ, ವಿ.ಜಿ.ಭಟ್ಟ, ಜಯಂತ ಕಾಯ್ಕಿಣಿ ಸೇರಿದಂತೆ ಇತರರ ಕೊಡುಗೆ ಪ್ರಸ್ತಾಪಿಸಿ ಅಧ್ಯಯನ ಮಾಡಿದ್ದರು. ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜಿ.ಎನ್.ಉಪಾಧ್ಯ ಅವರು ಮಾರ್ಗದರ್ಶನ ಮಾಡಿದ್ದರು.
ವಿಶ್ವ ವಿದ್ಯಾಲಯದ ಘಟಿಕೋತ್ಸವದಲ್ಲಿ ಅಲ್ಲಿನ ರಾಜ್ಯಪಾಲ ರಮೇಶ ಭಯಾಸ್, ಉನ್ನತ ಶಿಕ್ಷಣ ಸಚಿವ ಚಂದ್ರಕಾಂತ ದಾದಾ ಪಾಟೀಲ, ವಿವಿ ಗ್ರಾಂಟ್ಸ ಕಮಿಷನ್ ಅಧ್ಯಕ್ಷ ಎಂ.ಜಗದೀಶ ಕುಮಾರ, ವೈಸ್ ಛಾನ್ಸಲರ್ ರವೀಂದ್ರ ಕುಲಕರ್ಣಿ ಇತರರು ಇದ್ದರು.
ವಿವಾಹ, ಮಕ್ಕಳ ವಿದ್ಯಾಭ್ಯಾಸದ ವೇಳೆ ತಾಯಿಯಾಗಿ ಕುಟುಂಬದ ಜವಾಬ್ದಾರಿಯನ್ನೂ ನಿರ್ವಹಿಸುತ್ತ ೪೮ನೇ ವರ್ಷಕ್ಕೆ ಸಂಸ್ಕೃತ ಎಂಎ., ಕನ್ನಡ ಎಂಎ, ಕನ್ನಡ ಎಂಫಿಲ್ ಕೂಡ ಮಾಡಿ ಇದೀಗ ಡಾಕ್ಟರೇಟ್ ಪದವಿ ಕೂಡ ಸಂಪಾದಿಸಿದ್ದಾರೆ. ಇವರು ಕೆರೇಕೈನ ಕೃಷ್ಣ ಭಟ್ಟ ಹಾಗೂ ದೇವಕಿ ಪುತ್ರಿ. ವಿದ್ಯಾಚಸ್ಪತಿ ಉಮಾಕಾಂತ ಭಟ್ ಸಹೋದರಿ.