ಸಿದ್ದಾಪುರ; ಇಲ್ಲಿಯ ನಾಗರಿಕರ ಹಲವು ವರ್ಷಗಳ ಬೇಡಿಕೆಯಂತೆ ಸಿದ್ದಾಪುರದಲ್ಲಿ ಪ್ರಾರಂಭವಾದ ಕರ್ನಾಟಕ ಬ್ಯಾಂಕಿನ ಸಿದ್ದಾಪುರ ಶಾಖೆಯು ಕೇವಲ ಒಂದೇ ವರ್ಷದಲ್ಲಿ ತನ್ನ ಸೇವೆಯ ಮೂಲಕ ಅತ್ಯುತ್ತಮ ಶಾಖೆಯಾಗಿ ಹೊರಹೊಮ್ಮಿದೆ. ಬ್ಯಾಂಕಿನ ಸಿಬ್ಬಂದಿಗಳ ನಗುಮೊಗದ ಸೇವೆ ಈ ಯಶಸ್ಸಿನ ಹಿಂದಿದೆ ಎಂದು ತಾಲೂಕಾ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ ಹೇಳಿದ್ದಾರೆ. ಅವರು ಸ್ಥಳೀಯ ಕರ್ಣಾಟಕ ಬ್ಯಾಂಕಿನ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಅತಿಥಿಗಳಾಗಿದ್ದ ಭಾರತ ಸೇವಾದಳದ ತಾಲೂಕಾ ಅಧ್ಯಕ್ಷ ಕೆಕ್ಕಾರ ನಾಗರಾಜ್ ಭಟ್ಟ ಮಾತನಾಡಿ ಕರ್ನಾಟಕ ಬ್ಯಾಂಕ್ ಕೇವಲ ವ್ಯವಹಾರಕ್ಕಷ್ಟೇ ಸೀಮಿತವಾಗದೆ ಗ್ರಾಹಕರ ಬೇಕು ಬೇಡಗಳಿಗೆ ತಕ್ಷಣ ಸ್ಪಂದನೆ ನೀಡುವಲ್ಲಿ ಮುಂಚೂಣಿಯಲ್ಲಿದೆ. ತನ್ನ ಲಾಭಾಂಶದಲ್ಲಿ ಸಮಾಜಮುಖಿಯಾದ ಕಾರ್ಯಗಳಿಗೆ ನೆರವು ನೀಡುತ್ತಾ ಬಂದಿದೆ. ದೇಶದಲ್ಲಿಯೇ ಬ್ಯಾಂಕಿಂಗ್ ಉದ್ಯಮದಲ್ಲಿ ನಮ್ಮ ರಾಜ್ಯದ ಹೆಸರಿರುವ ಬ್ಯಾಂಕೊಂದು ಇಂತಹ ಉನ್ನತ ಸ್ಥಾನ ತಲುಪಿರುವುದು ಹೆಮ್ಮೆಯ ಸಂಗತಿ ಎಂದರು.
ಈ ಸಂದರ್ಭದಲ್ಲಿ ಗ್ರಾಹಕರಾದ ಶಿಕ್ಷಕಿ ಶ್ರೀಮತಿ ನಮೃತಾ, ಟಿಎಸ್‌ಎಸ್ ವ್ಯವಸ್ಥಾಪಕ ರಾಜೀವ ಹೆಗಡೆ, ಟಿಎಂಎಸ್ ಉಪವ್ಯವಸ್ಥಾಪಕ ಪ್ರಸನ್ನ ಭಟ್ಟ ಕೆರೆಹೊಂಡ, ಶಿಕ್ಷಣ ಇಲಾಖೆಯ ಕೆ.ಕೆ.ಗಣಪತಿ, ಗಣ್ಯರಾದ ಆರ್.ಎಸ್.ಭಟ್ಟ ಸ್ವಸ್ತಿಕ್, ವಿ.ಜಿ.ಕೊಳಗಿ, ಕುಶಾಲ ಅತ್ತಿಕೊಪ್ಪ, ಶ್ರೀಕಾಂತ ಹೆಗಡೆ, ಜಿ.ವಿ.ಭಟ್ಟ, ಜಿ.ಜಿ.ಶರ್ಮಾ, ರಾಘವೇಂದ್ರ ಮಳವಳ್ಳಿ, ಎನ್.ಪಿ.ಭಟ್ಟ, ಶಾಂತಾ ಹೆಗಡೆ ಸೇರಿದಂತೆ ಅನೇಕರು ಬ್ಯಾಂಕಿನ ಉತ್ತಮ ಸೇವೆಯನ್ನು ಶ್ಲಾಘಿಸಿದರು. ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಉಡುಪಿ ವಿಭಾಗೀಯ ವ್ಯವಸ್ಥಾಪಕ ರಾಜಗೋಪಾಲ ಬಿ. ಮಾತನಾಡಿ ಸೇವೆಯೇ ಕರ್ನಾಟಕ ಬ್ಯಾಂಕಿನ ಮೂಲ ಧ್ಯೇಯ. ನಮ್ಮ ಯಶಸ್ಸಿನ ಹಿಂದೆ ಗ್ರಾಹಕರಿದ್ದು ಅವರೇ ನಮ್ಮ ಆಸ್ತಿ. ಶತಮಾನೋತ್ಸವ ಆಚರಿಸುತ್ತಿರುವ ಕರ್ನಾಟಕ ಬ್ಯಾಂಕ್ ನಾರ್ಥ್ ಇಂಡಿಯಾದಲ್ಲೂ ಹೆಸರು ಪಡೆಯುತ್ತಿದೆ. ನಮ್ಮ ಬ್ಯಾಂಕಿನ ಹೆಸರು ಕರ್ನಾಟಕವಾಗಿದ್ದರೂ ಭಾರತದ ಬ್ಯಾಂಕ್ ಆಗಿ ಬೆಳೆಯುತ್ತಿದೆ ಎಂದರು. ಸಿದ್ದಾಪುರದಲ್ಲಿ ಶಾಖೆ ತೆರೆಯುವಾಗ ವ್ಯವಹಾರದ ಕುರಿತು ಕೊಂಚ ಅಳುಕಿತ್ತು. ಆದರೆ ಸೆಮಿ ಅರ್ಬನ್ ಶಾಖೆಯಾಗಿ ಬ್ಯಾಂಕಿನ ಈ ಶಾಖೆ ಗುರಿಮೀರಿ ವ್ಯವಹಾರ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ ಎಂದರು. ಬ್ಯಾಂಕಿನ ಅಧಿಕಾರಿಗಳಾದ ಪ್ರದೀಪಕುಮಾರ ಕೆ.ಆರ್. ಹಾಗೂ ಶ್ರೀಶ ಅವರುಗಳು ಮಾತನಾಡಿದರು. ಸಿಬ್ಬಂದಿ ಶ್ರೀಮತಿ ವಿಜೇತಾ ಹೆಗಡೆ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಶಾಖೆಯ ವ್ಯವಸ್ಥಾಪಕ ಗೌರೀಶ ಹೆಗಡೆ ಸ್ವಾಗತಿಸಿ, ನಿರ್ವಹಿಸಿದರು. ಸಿಬ್ಬಂದಿ ಮಂಜುನಾಥ ಹೆಗಡೆ ಹಲಗೇರಿ ವಂದಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು, ಎಲ್ಲಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು.