ಕಾರವಾರ: ಪೋಷಕರಿಗೆ ನಿರ್ದಿಷ್ಟವಾಗಿ ಇಂತಹುದೇ ಮಗು ಜನಿಸುವಂತೆ ಚಿಕಿತ್ಸೆ ಅಥವಾ ಔಷಧಿ ನೀಡಲಾಗುವುದು ಎಂದು ಜಾಹೀರಾತು ಪ್ರಕಟಿಸುವುದೂ ಕೂಡಾ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ನಿಷೇಧ ಕಾಯ್ದೆಯ ಅನುಸಾರ ಶಿಕ್ಷಾರ್ಹ ಅಪರಾಧ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿಜೆಎಮ್ ರೇಷ್ಮಾ ಜೆ. ರೋಡ್ರಿಗಸ್ ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ, ಕರ್ನಾಟಕ ಸರ್ಕಾರ ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಿಸಿಪಿಎನ್ಡಿಟಿ ಕೋಶ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ನ್ಯಾಯವಾದಿಗಳ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ನಿಷೇಧ ಕಾಯ್ದೆಯ ಅರಿವು ಮೂಡಿಸುವ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಗರ್ಭಧಾರಣೆಯಾದಾಗಿನಿಂದ ಮಗು ಜನಿಸುವವರೆಗೂ ಯಾವುದೇ ಹಂತದಲ್ಲೂ ಅದರ ಲಿಂಗ ಪತ್ತೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ನಿಷೇಧ ಕಾಯ್ದೆ ಮತ್ತು ಶಿಕ್ಷೆಯ ಪ್ರಮಾಣದ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಬೇಕು. ಇಂತಹ ಪ್ರಕರಣ ನಡೆಯುತ್ತಿದ್ದಲ್ಲಿ ಈ ಬಗ್ಗೆ ಯಾರನ್ನು ಸಂಪರ್ಕಿಸಿ ದೂರು ನೀಡಬೇಕು, ಅವರ ದೂರವಾಣಿ ಸಂಖ್ಯೆ, ವಿಳಾಸದ ಬಗ್ಗೆ ಸಾರ್ವಜನಿಕರಿಗೆ ವ್ಯಾಪಕ ಪ್ರಚಾರ ನೀಡಬೇಕು. ಕಾಯ್ದೆಯ ತೀವ್ರತೆ ಬಗ್ಗೆ ತಿಳಿಸುವ ಮತ್ತು ತಂತ್ರಜ್ಞಾನದ ದುರುಪಯೋಗ ತಡೆಯುವಲ್ಲಿ ಸ್ಕ್ಯಾನಿಂಗ್ ಸೆಂಟರ್ಗಳಲ್ಲಿ ಹೆಚ್ಚಿನ ತಪಾಸಣಾ ಕ್ರಮಗಳನ್ನು ಕೈಗೊಳ್ಳಬೇಕು, ಸ್ಕ್ಯಾನಿಂಗ್ ಸೆಂಟರ್ಗಳು ತಮ್ಮ ಕೇಂದ್ರಗಳಲ್ಲಿ ಎಲ್ಲಾ ಪರೀಕ್ಷಾ ದಾಖಲಾತಿಗಳನ್ನು ನಿಗಧಿಪಡಿಸಿದ ಸೂಕ್ತ ರೀತಿಯಲ್ಲಿ ಸಂರಕ್ಷಿಸಿಡಬೇಕು ಎಂದು ನ್ಯಾ.ರೇಷ್ಮಾ ಜೆ ರೋಡ್ರಿಗಸ್ ತಿಳಿಸಿದರು.
ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಮಾತನಾಡಿ, ಸಮಾಜದಲ್ಲಿ ಲಿಂಗ ತಾರತಮ್ಯ ಸರಿಯಲ್ಲ, ಗಂಡು ಮತ್ತು ಹೆಣ್ಣು ಇಬ್ಬರೂ ಸಮಾನರು. ಜಿಲ್ಲೆಯಲ್ಲಿ ಸ್ಕ್ಯಾನಿಂಗ್ ಸೆಂಟರ್ಗಳ ದುರ್ಬಳಕೆ ನಡೆಯದಂತೆ ನಿರಂತರವಾಗಿ ತಪಾಸಣೆ ಕೈಗೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಅವರು, ಜಿಲ್ಲೆಯಲ್ಲಿ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ಪ್ರಕರಣ ಕಂಡುಬAದಲ್ಲಿ ಅಂತಹವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರೇಣುಕಾ ಡಿ ರಾಯ್ಕರ್ ಮಾತನಾಡಿ, ಸಮಾಜದಲ್ಲಿ ಪ್ರಸ್ತುತ ಇರುವ ಲಿಂಗಾನುಪಾತದ ವ್ಯತ್ಯಾಸ ಗಮನಿಸಿದರೆ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ನಿಷೇಧ ಕಾಯ್ದೆಯ ಅನುಷ್ಠಾನ ನಿರೀಕ್ಷಿತ ಮಟ್ಟದಲ್ಲಿ ಅನುಷ್ಠಾನವಾಗದಿರುವುದುಕಂಡು ಬರುತ್ತದೆ. ಕಾನೂನು ಪ್ರಕಾರಗರ್ಭದಾರಣೆಯಾದ ಪ್ರತಿ ಮಗುವು ಜೀವಿಸುವ ಹಕ್ಕು ಹೊಂದಿದ್ದು, ಅದನ್ನು ನಾಶಪಡಿಸಲು ಪೋಷಕರಿಗೂ ಯಾವುದೇ ಹಕ್ಕು ಇಲ್ಲ. ಕಾನೂನಿನ ಅರಿವಿಗೂ ಬಾರದಂತೆ ವ್ಯವಸ್ಥಿತಿ ರೀತಿಯಲ್ಲಿ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ನಡೆಯುತ್ತಿದ್ದು, ಇದನ್ನು ತಡೆಯಲು ಕಾನೂನನ್ನು ಇನಷ್ಟು ಬಲಪಡಿಸುವುದು ಅಗತ್ಯವಿದೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹೆಚ್ಚು ಜಾಗರೂಕರಾಗಿ ತಮ್ಮ ವ್ಯಾಪ್ತಿಯಲ್ಲಿ ಸೂಕ್ಷö್ಮವಾಗಿ ಪರಿಶೀಲನೆ ನಡೆಸಬೇಕು. ಹೆಣ್ಣು ಮಕ್ಕಳನ್ನು ರಕ್ಷಿಸಿ ಪೋಷಿಸಲು ಸಮಾಜದ ಪ್ರತಿಯೊಬ್ಬರೂ ಒಟ್ಟಾಗಬೇಕು ಎಂದರು.
ಡಿ.ಹೆಚ್.ಓ. ಡಾ.ನೀರಜ್, ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಧೀಕ್ಷಕ ಡಾ. ಶಿವಾನಂದ ಕುಡ್ತಳಕರ್, ಕೆ.ಪಿ.ಎಂ.ಇ ಮತ್ತು ಪಿಸಿಪಿಎನ್ಡಿಟಿ ರಾಜ್ಯ ನೋಡಲ್ ಅಧಿಕಾರಿ ಡಾ.ವಿವೇಕ ದೊರೈ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಡಾ. ಹೆಚ್.ಹೆಚ್. ಕುಕನೂರ, ಸಾಮಾಜಿಕ ಕಾರ್ಯಕರ್ತೆ ಹಾಗೂ ಜಿಲ್ಲಾ ಪಿಸಿಪಿಎನ್ಡಿಟಿ ಸಲಹಾ ಸಮಿತಿ ಸದಸ್ಯೆ ಪುಷ್ಪಾ ಜಿ ನಾಯ್ಕ, ನ್ಯಾಯವಾದಿ ಎ.ಆರ್.ಬಿ.ಡಿಸೋಜಾ ಉಪಸ್ಥಿತರಿದ್ದರು.
ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ವೈದ್ಯಾಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಶಿಬಿರದಲ್ಲಿ ಭಾಗವಹಿಸಿದ್ದರು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಅನ್ನಪೂರ್ಣ ವಸ್ತçದ ಸ್ವಾಗತಿಸಿದರು, ಆರೋಗ್ಯ ಇಲಾಖೆಯ ರತೀಶ್ ನಾಯಕ್ ನಿರೂಪಿಸಿ ವಂದಿಸಿದರು.