ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಗಜಾನನೋತ್ಸವ ಸಮಿತಿ ವೇದಿಕೆಯಲ್ಲಿ ವಿಶ್ವಶಾಂತಿ ಸೇವಾ ಟ್ರಸ್ಟ್ ಶಿರಸಿ ಇವರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಇವರ ಸಹಭಾಗಿತ್ವದಲ್ಲಿ ಗುರುವಾರ ಆಯೋಜಿಸಲಾಗಿದ್ದ ಯಕ್ಷಗಾನ ಹಿಮ್ಮೇಳ ವೈಭವ, ಸನ್ಮಾನ ಹಾಗೂ ಲೀಲಾವತಾರಮ್ ಯಕ್ಷರೂಪಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಆರಂಭದಲ್ಲಿ ಯಕ್ಷಗಾನ ಹಿಮ್ಮೇಳ ವೈಭವ ನಡೆಯಿತು. ಭಾಗವತರಾಗಿ ಕೇಶವ ಹೆಗಡೆ ಕೊಳಗಿ ಹಾಗೂ ಸತೀಶ ಹೆಗಡೆ ದಂಟಕಲ್ ಪೌರಾಣಿಕ ಪ್ರಸಂಗಗಳ ಆಯ್ದ ಪದ್ಯಗಳನ್ನು ಹಾಡಿ ರಂಜಿಸಿದರು. ಮದ್ದಳೆಯಲ್ಲಿ ಶರತ್ ಹೆಗಡೆ ಜಾನಕೈ, ಚಂಡೆಯಲ್ಲಿ ವಿಘ್ನೇಶ್ವರ ಗೌಡ ಕೆಸ್ರಕೊಪ್ಪ ಸಹಕರಿಸಿದರು.
ನಂತರ ಯಕ್ಷಗಾನ ಭಾಗವತ ಸತೀಶ ಹೆಗಡೆ ದಂಟಕಲ್ ದಂಪತಿಗೆ ಅವರಿಗೆ ಸನ್ಮಾನ ಜರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ ಟಿಎಸ್ಎಸ್ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ ಇತ್ತೀಚಿನ ದಿನದಲ್ಲಿ ಸಂಘಟನೆ ಮಾಡುವುದು ಒಂದು ಸವಾಲಾಗಿದೆ. ಇದರ ನಡುವೆಯೂ ಕೆಲವು ಸಂಘ-ಸಂಸ್ಥೆಗಳು ಉತ್ತಮ ಕಾರ್ಯಕ್ರಮ ನಡೆಸುವ ಮೂಲಕ ಕಲಾವಿದರನ್ನು ಕಲೆಯನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸತೀಶ ಹೆಗಡೆ ದಂಟಕಲ್ ಹುಟ್ಟೂರಿನಲ್ಲಿ ಸನ್ಮಾನ ಸ್ವೀಕರಿಸಿರುವುದು ಸಂತಸ ತಂದಿದೆ. ಯಾವುದೇ ಕಲೆಯನ್ನು ಅಧ್ಯಯನ ಮಾಡಬೇಕಾದರೆ ಸೂಕ್ತವಾದ ಗುರುಗಳ ಆಯ್ಕೆ ಮಾಡಿಕೊಂಡಾಗ ಮಾತ್ರ ಕಲೆಯನ್ನು ಶಾಸ್ತ್ರೋಕ್ತವಾಗಿ ಕಲಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆವಹಿಸಿದ್ದ ವಿಶ್ವಶಾಂತಿ ಸೇವಾ ಟ್ರಸ್ಟ್ನ ಉಪಾಧ್ಯಕ್ಷ ರಮೇಶ ಹೆಗಡೆ ಹಳೆಕಾನಗೋಡ ಮಾತನಾಡಿ ಟ್ರಸ್ಟ್ ಉದ್ದೇಶದ ಕುರಿತು ಮಾತನಾಡಿದರು. ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹಾರ್ಸಿಮನೆ, ಗಜಾನನೋತ್ಸವ ಸಮಿತಿ ಕಾರ್ಯದರ್ಶಿ ಅನಂತ ಶಾನಭಾಗ, ವಿ.ಚಂದ್ರಶೇಖರ ಭಟ್ಟ ಗಾಳೀಮನೆ, ಸುಜಾತಾ ಹೆಗಡೆ ದಂಕಟಲ್ ಉಪಸ್ಥಿತರಿದ್ದರು.
ನಂತರ ತುಳಸಿ ಹೆಗಡೆ ಶಿರಸಿ(ಬೆಟ್ಟಕೊಪ್ಪ) ಇವಳಿಂದ ವಿಶ್ವ ಶಾಂತಿ ಸರಣಿಯ 9ನೇ ಕಲಾ ಕುಸುಮ ಲೀಲಾವತಾರಮ್ ಯಕ್ಷರೂಪಕ ಪ್ರಸ್ತುತಗೊಂಡಿತು. ಹಿಮ್ಮೇಳದಲಿ ಕೇಶವ ಹೆಗಡೆ, ಶರತ್ ಜಾನಕೈ ಹಾಗೂ ವಿಘ್ನಶ್ವರ ಗೌಡ ಕೆಸ್ರಕೊಪ್ಪ ಸಹಕರಿಸಿದರು. ರಾಘವೇಂದ್ರ ಬೆಟ್ಟಕೊಪ್ಪ ಸ್ವಾಗತಿಸಿ ನಿರ್ವಹಿಸಿದರು. ವೆಂಕಟೇಶ ಹೆಗಡೆ ಬೊಗ್ರಿಮಕ್ಕಿ ವಂದಿಸಿದರು. ಗಾಯತ್ರಿ ರಾಘವೇಂದ್ರ ಸಹಕರಿಸಿದರು.