ಯಲ್ಲಾಪುರ: ತಾಲೂಕಿನ ಚಂದಗುಳಿ ಗ್ರಾ.ಪಂ ವ್ಯಾಪ್ತಿಯ ಉಪಳೇಶ್ವರದಲ್ಲಿ ಅರಣ್ಯ ಇಲಾಖೆಯ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ಅತಿಕ್ರಮಣ ಮಾಡಿದ್ದು, ಅದನ್ನು ಖುಲ್ಲಾಪಡಿಸುವಂತೆ ಆಗ್ರಹಿಸಿ ಸ್ಥಳೀಯರು ಜಿಲ್ಲಾಧಿಕಾರಿಗಳು, ಡಿಸಿಎಫ್ ಹಾಗೂ ತಹಸೀಲ್ದಾರರಿಗೆ ಲಿಖಿತ ದೂರಿನ ಮೂಲಕ ಆಗ್ರಹಿಸಿದ್ದಾರೆ.
ಉಪಳೇಶ್ವರದ ಸ.ನಂ 117 ಅರಣ್ಯ ಇಲಾಖೆಗೆ ಸೇರಿದ ಜಾಗವಾಗಿದ್ದು, ಇಲಾಖೆಯ ನೆಡುತೋಪು ಮತ್ತು ನಕ್ಷೆಯನ್ನು 1982 ರಲ್ಲಿ ಮಾಡಿರುವುದು ದಾಖಲೆಗಳಲ್ಲಿ ಹಾಗೂ ಸ್ಥಳದಲ್ಲೂ ಕಂಡು ಬರುತ್ತದೆ. ಚಂದ್ರಶೇಖರ ತಿಮ್ಮಣ್ಣ ಹೆಗಡೆ ಎಂಬವರು ಈ ಜಾಗವನ್ನು ಅತಿಕ್ರಮಿಸಿ, ಸುಳ್ಳು ದಾಖಲೆ ಸೃಷ್ಟಿಸಿ ತಮ್ಮ ಜಾಗವೆಂದು ಹೇಳಿಕೊಳ್ಳುತ್ತಿದ್ದಾರೆ. ಕಳೆದ 30-40 ವರ್ಷಗಳಿಂದ ಸ್ಥಳೀಯ ಮಕ್ಕಳು ಕ್ರಿಕೆಟ್ ಆಡುವ ಮೈದಾನವಾಗಿ ಬಳಕೆಯಾಗುತ್ತಿದ್ದ ಈ ಜಾಗವನ್ನು ಜೆಸಿಬಿ ಮೂಲಕ ಅಗೆದು ಹಾಳುಗೆಡವಿದ್ದಾರೆ. ಜಿಲ್ಲಾಧಿಕಾರಿಗಳು ಆದೇಶಿಸಿದ ಮೂಲ ಕಬೂಲಾಯತ ಹಾಗೂ ನಕ್ಷೆಯನ್ನು ಗಣನೆಗೆ ತೆಗೆದುಕೊಳ್ಳದೇ ಭೂಮಾಪನ ಇಲಾಖೆಯ ಕೆಲ ಅಧಿಕಾರಿಗಳು ತಾವೇ ಪ್ರತ್ಯೇಕ ನಕ್ಷೆ ಸಿದ್ಧಪಡಿಸಿರುವುದು ಕಂಡು ಬಂದಿದೆ. ಗ್ರಾಮ ಲೆಕ್ಕಾಧಿಕಾರಿ ರವಿ ರಾಯನಗೌಡ ಅವರಿಗೆ ಆಮಿಷವೊಡ್ಡಿ, ಜಾಗದಲ್ಲಿ ಅಡಿಕೆ ಬೆಳೆ ಬೆಳೆಯುವುದಾಗಿ 2022-23 ರ ಸಾಲಿನ ಪಹಣಿಯಲ್ಲಿ ನಮೂದಿಸುವಂತೆ ಮಾಡಿದ್ದು, ಈ ದಾಖಲೆಯನ್ನು ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಕಳೆದ ನಾಲ್ಕು ತಿಂಗಳಲ್ಲಿ ಅನೇಕ ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಆಗಿಲ್ಲ. ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲಿಸಿ, ಮೂಲ ದಾಖಲೆಗಳನ್ನು ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಫೆ.28 ರ ಒಳಗೆ ಸೂಕ್ತ ಕ್ರಮ ಆಗದಿದ್ದರೆ ಭೂಮಾಪನ ಇಲಾಖೆಯ ಕಚೇರಿ ಮುತ್ತಿಗೆ ಹಾಕಿ, ಪ್ರತಿಭಟಿಸುವುದಾಗಿ ಗ್ರಾಮಸ್ಥರ ಪರವಾಗಿ, ಸಾಮಾಜಿಕ ಕಾರ್ಯಕರ್ತ ಪ್ರಮೋದ ಹೆಗಡೆ ಎಚ್ಚರಿಸಿದ್ದಾರೆ.