ಶಿರಸಿ: ದೇಶದ ಪ್ರಧಾನಿ ನರೇಂದ್ರ ಮೋದಿಯವರು ರಾಮರಾಜ್ಯ ಮಾಡುವ ಕಲ್ಪನೆಯೊಂದಿಗೆ ಆಡಳಿತ ನಡೆಸುತ್ತಿದ್ದರೆ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾವಣ ರಾಜ್ಯ ಮಾಡಲು ಹೊರಟಿದೆ ಎಂದು ಹಿಂದು ಫೈರ್ ಬ್ರ್ಯಾಂಡ್ ಸಂಸದ ಅನಂತಕುಮಾರ ಲೇವಡಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದಿನ ಬೆಳಗಾದರೆ ಒಂದಲ್ಲ ಒಂದು ದರವನ್ನು ಹೆಚ್ಚಿಸುವುದು ರಾಜ್ಯ ಸರಕಾರದ ವಾಡಿಕೆಯಾಗಿದೆ. ಕಾಂಗ್ರೆಸ್ ಸರಕಾರವು ಸಾರ್ವಜನಿಕರನ್ನು ಹಾಗೂ ಬಡವರವನ್ನು ಹೇಗೆ ಲೂಟಿ ಮಾಡುತ್ತಿದೆ ಎಂಬುದನ್ನು ಸಾರ್ವಜನಿಕರೇ ಪರಾಮರ್ಶಿಸಿ ನೋಡಬೇಕಿದೆ.
ಸ್ಟಾಂಪ್ ದರ ಹೆಚ್ಚಿಸಲು ಸಂಬಂಧಿಸಿದಂತೆ ಗೆಜೆಟ್ ಅಧಿಸೂಚನೆ ಹಾಗೂ ನೂತನ ದರ ಪಟ್ಟಿಯನ್ನು ರಾಜ್ಯ ಸರಕಾರ ಬಿಡುಗಡೆಗೊಳಿಸಿದೆ. ಅಗ್ರಿಮೆಂಟ್ ಸ್ಟಾಂಪ್ ಡ್ಯೂಟಿ ರೂ. 200 ರಿಂದ 500 ಕ್ಕೆ ಏರಿಸಲಾಗಿದೆ. ಇಂಡೆಮ್ನಿಟಿ ಬಾಂಡ್ ರೂ.ರೂ. 200 ರಿಂದ 500, ಬ್ಯಾಂಕ್ ಗ್ಯಾರಂಟಿ ರೂ.200 ರಿಂದ 300, ಜಿಪಿಎ 1,000, ಸ್ಪೆಷಲ್ ಜಿಪಿಎ ರೂ.100 ರಿಂದ 500, ಲೆಟರ್ ಆಫ್ ಗ್ಯಾರಂಟಿ ರೂ.200 ರಿಂದ 500, ಅಫಿಡವಿಟ್ ರೂ. 20 ರಿಂದ 100, ಹೈಪೊಥಿಕೇಷನ್ ಅಗ್ರಿಮೆಂಟ್ 0.1% ರಿಂದ 0.5% ವರೆಗೆಸೇರಿದಂತೆ ಇನ್ನಿತರ ಅನೇಕ ವಿಷಯಗಳಲ್ಲಿ ದರವನ್ನು ಏರಿಸಿ ಸರಕಾರ ಆದೇಶ ಹೊರಡಿಸಿದ್ದನ್ನು ಸಂಸದ ಅನಂತಕುಮಾರ ತೀವ್ರವಾಗಿ ಖಂಡಿಸಿದ್ದಾರೆ.