ಶಿರಸಿ:ತಾಲೂಕಿನ ಯಡಳ್ಳಿ ಗ್ರಾಪಂ ವ್ಯಾಪ್ತಿಯ ದೀಗೊಪ್ಪದಲ್ಲಿ ಶಿರಸಿ ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ಊರ ಪ್ರಮುಖರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ಇದು ನನ್ನ ಗೆಲುವಲ್ಲ, ನಿಮ್ಮೆಲ್ಲರ ಗೆಲುವು.ಮತದಾರರಾದ ನೀವೇ ಒಗ್ಗಟ್ಟಾಗಿ ಮತನೀಡಿ ಈ ಗೆಲುವನ್ನು ತಂದುಕೊಟ್ಟಿದ್ದೀರಿ. ತಮ್ಮೆಲ್ಲರನ್ನೂ ನಾನು ಅಭಿನಂದಿಸುತ್ತೇನೆ. ಈ ಗೆಲುವಿಗಾಗಿ ನನ್ನನ್ನು ಊರಿಗೆ ಕರೆದು ಸನ್ಮಾನಿಸಿದ್ದೀರಿ. ಇದಕ್ಕಿಂತ ನಿಮ್ಮ ಪ್ರೀತಿ ವಿಶ್ವಾಸವೇ ನನಗೆ ದೊಡ್ಡ ಸನ್ಮಾನ ಎಂದರು. ದೀಗೊಪ್ಪ ನನ್ನೂರು ಅಂದುಕೊಂಡಿದ್ದೇನೆ. ಇಲ್ಲಿನ ಅಭಿವೃದ್ಧಿಯ ಬಗ್ಗೆ ನೀವು ಹೇಳಿ ನಾನು ಮಾಡುವುದಲ್ಲ. ಅದು ನನ್ನ ಕರ್ತವ್ಯ, ಅಭಿವೃದ್ಧಿಯ ಜವಾಬ್ದಾರಿಯನ್ನು ತಾವೆಲ್ಲ ಸೇರಿ ನನಗೆ ಕೊಟ್ಟಿದ್ದೀರಿ. ದೇವಸ್ಥಾನ ಪೂರ್ಣಗೊಳಿಸುವುದು ಸೇರಿದಂತೆ ರಸ್ತೆ, ಸಭಾಭವನ ನಿರ್ಮಾಣ ಮತ್ತಿತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ನಾನು ಎಲ್ಲ ರೀತಿಯ ಸಹಕಾರ ನೀಡುತ್ತೇನೆ. ಈಗಾಗಲೇ ರಸ್ತೆ ಡಾಂಬರೀಕರಣಕ್ಕೆ ಅನುದಾನ ಕಲ್ಪಿಸಿದ್ದೇನೆ ಎಂದು ಭೀಮಣ್ಣ ಹೇಳಿದರು.
ಹಣಮಾಡುವುದೇ ರಾಜಕಾರಣವಲ್ಲ. ನಿಸ್ವಾರ್ಥ ಸಮಾಜ ಸೇವೆಯ ಮನೋಭಾವನೆ ಇರುವ, ನೊಂದವರಿಗೆ ಸಹಾಯ ಹಸ್ತ ಚಾಚುವ ವ್ಯಕ್ತಿಗಳು ರಾಜಕಾರಣಕ್ಕೆ ಬಂದಾಗ ಮಾತ್ರ ಎಲ್ಲ ರೀತಿಯ ಅಭಿವೃದ್ಧಿ ಸಾಽಸಲು ಸಾಧ್ಯ. ಯುವಕ ,ಯುವತಿಯರು, ಮಹಿಳೆಯರು ಸಭೆಯಲ್ಲಿ ಮಾತನಾಡುವ ಕಲೆಯನ್ನು ಬೆಳೆಸಿಕೊಳ್ಳಬೇಕು. ಸಮಸ್ಯೆಗಳನ್ನು ಹೇಳಿಕೊಳ್ಳಬೇಕು. ಎಲ್ಲ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಬೇಕು.ಇಲ್ಲಿ ತಾಯಂದಿರ ಜವಾಬ್ದಾರಿ ಹೆಚ್ಚಿದೆ. ಊರಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಎಲ್ಲರೂ ಒಗ್ಗಟ್ಟಾಗಿ ಬಾಳಬೇಕು. ಆಗ ನಮ್ಮ ಸಮಾಜ ಇನ್ನಷ್ಟು ಮುಂದೆ ಬರಲು ಸಾಧ್ಯ ಎಂದು ಭೀಮಣ್ಣ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಜುನಾಥ ಮಿಣಿಯಾ ನಾಯ್ಕ, ಕುಮಾರಿ ದೀಪಾ ಶೇಖರ ನಾಯ್ಕ, ಶ್ರೀಮತಿ ಭವಾನಿ ಭಾಸ್ಕರ ನಾಯ್ಕ ಇವರು ಭೀಮಣ್ಣ ನಾಯ್ಕ ಅವರನ್ನು ಆಭಿನಂದಿಸಿ ಮಾತನಾಡಿದರು. ವೇದಿಕೆಯಲ್ಲಿ ಊರಿನ ಹಿರಿಯರಾದ ಗಣಪತಿ ಈರ ನಾಯ್ಕ, ಗೋಪಾಲ ಕೆರಿಯಾ ನಾಯ್ಕ, ನರಸಿಂಹ ಕೆ. ನಾಯ್ಕ, ಗಣಪತಿ ಎನ್. ನಾಯ್ಕ, ಬಲವೇಂದ್ರ ಎಸ್. ನಾಯ್ಕ ಉಪಸ್ಥಿತರಿದ್ದರು. ಸಂತೋಷ ರಾಮಾ ನಾಯ್ಕ ಸ್ವಾಗತಿಸಿದರು. ಶೇಖರ ಹುಲಿಯಾ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಚೇತನಕುಮಾರ ಯಶವಂತ ನಾಯ್ಕ ವಂದಿಸಿದರು. ಪ್ರದೀಪ ಸುಬ್ರಾಯ ನಾಯ್ಕ ನಿರ್ವಹಿಸಿದರು.