ಸಿದ್ದಾಪುರ: ತಾಲೂಕಿನ ಕೊರ್ಲಕೈ ಗ್ರಾಪಂ ವಾಪ್ತಿಯಲ್ಲಿ ಕೆಎಫ್‌ಡಿ (ಮಂಗನ ಕಾಯಿಲೆ) ನಿಯಂತ್ರಣಕ್ಕಾಗಿ ಬೃಹತ್ ಜನಜಾಗೃತಿ ಜಾಥಾ ಆರೋಗ್ಯ, ಗ್ರಾಪಂ ಸೇರಿದಂತೆ ವಿವಿಧ ಇಲಾಖೆಯಿಂದ ಹಾಗೂ ಸಾರ್ವಜನಿಕರಿಂದ ಸೋಮವಾರ ಜರುಗಿತು.
ಕೊರ್ಲಕೈನಲ್ಲಿ ತಹಸೀಲ್ದಾರ ಎಂ.ಆರ್.ಕುಲಕರ್ಣಿ ಜಾಥಾಕ್ಕೆ ಚಾಲನೆ ನೀಡಿದರು. ಗ್ರಾಪಂ ಅಧ್ಯಕ್ಷ ನಟರಾಜ್ ಜಿಡ್ಡಿ, ತಾಲೂಕು ಆರೋಗ್ಯಾಧಿಕಾರಿ ಡಾ. ಲಕ್ಷ್ಮಿಕಾಂತ ನಾಯ್ಕ, ತಾಪಂ ಇಒ ದೇವರಾಜ ಹಿತ್ತಲಕೊಪ್ಪ, ತಾಲೂಕು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವಿವೇಕಾನಂದ ಹೆಗಡೆ, ಗ್ರಾಪಂ ಸದಸ್ಯರು, ಆರೋಗ್ಯ, ಅಂಗನಾಡಿ, ಆಶಾ ಕಾರ್ಯಕರ್ತೆಯರು, ಕೆಎಫ್‌ಡಿ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.
ಜಾಥಾವು ಕೊರ್ಲಕೈ ಗ್ರಾಪಂನಿಂದ ಜಿಡ್ಡಿ, ಮಂಡಗಳಲೆ, ಹೆಗ್ಗೆಕೊಪ್ಪ, ಹೊಸಗದ್ದೆ, ನೆಲ್ಲಿಕೊಪ್ಪ, ಪುರದಮಠ ಗ್ರಾಮಗಳಲ್ಲಿ ಹಾಗೂ ಹಲಗೇರಿ ಗ್ರಾಪಂನ ನಿಪ್ಲಿಯಲ್ಲಿ ಸಂಚರಿಸಿ ನಂತರ ಸುಂಕತ್ತಿಯಲ್ಲಿ ಜಾಥಾ ಸಂಪನ್ನಗೊಂಡಿತು.