ಸಿದ್ದಾಪುರ: ತಾಲೂಕಿನ ಕಲಗದ್ದೆಯ ಶ್ರೀನಾಟ್ಯ ವಿನಾಯಕ ದೇವರ ವಾರ್ಷಿಕೋತ್ಸವ, ಸಹಸ್ರ ಮೋದಕ ಹವನ, ರಥೋತ್ಸವ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಂಜೆ 5 ರಿಂದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಜ.29 ಸೋಮವಾರ ನಡೆಯಲಿದೆ.
ವಾರ್ಷಿಕೋತ್ಸವ ದಿನದಂದು ಮುಂಜಾನೆ ಮಹಾಭಿಷೇಕ, ಸಾಮೂಹಿಕ ಗಣಹವನ, ಸಹಸ್ರಮೋದಕ ಹವನ, ಸತ್ಯಗಣಪತಿ ಕಥೆ, ರಥೋತ್ಸವ, ಮಧ್ಯಾಹ್ನ ಮಹಾಮಂಗಳಾರತಿ, ಬಳಿಕ ಪ್ರಸಾದ ಭೋಜನ ನಡೆಯಲಿದೆ. ಸಂಜೆ ೫ರಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸಾಂಸ್ಕೃತಿಕ ಸಂಭ್ರಮದಲ್ಲಿ ಶಾಸಕ ಭೀಮಣ್ಣ ನಾಯ್ಕ ಅವರನ್ನು ಸಮ್ಮಾನಿಸಲಾಗುತ್ತಿದ್ದು, ಅಧ್ಯಕ್ಷತೆಯನ್ನು ದೇವಸ್ಥಾನದ ಪ್ರಧಾನ ವಿಶ್ವಸ್ಥ ವಿನಾಯಕ ಹೆಗಡೆ ಕಲಗದ್ದೆ ವಹಿಸಿಕೊಳ್ಳುವರು.ಬಳಿಕ ಮಂಗಳೂರಿನ ನಂದ ಗೋಕುಲ ತಂಡದಿಂದ ನೃತ್ಯ ವೈಭವ ನಡೆಯಲಿದೆ. ಈಗಾಗಲೇ ನಾಡಿನ ಹಲವಡೆ ಪ್ರಸಿದ್ಧಿ ಪಡೆದ ಶ್ವೇತಾ ಅರೆಹೊಳೆ ನೇತೃತ್ವದ ಈ ನೃತ್ಯ ಕಾರ್ಯಕ್ರಮ ಈಗಾಗಲೇ ಸಾಕಷ್ಟು ಕಡೆ ಪ್ರಸಿದ್ಧಿ ಪಡೆದಿದೆ. ಕಲಗದ್ದೆಯ ಶಂಭು ಶಿಷ್ಯ ಪ್ರತಿಷ್ಠಾನ ಹಾಗೂ ಅತಿಥಿ ಕಲಾವಿದರಿಂದ ‘ಭೀಷ್ಮ ಪರ್ವ’ ಯಕ್ಷಗಾನ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಸ್ಥಾನದ ಮೊಕ್ತೇಸರ ವಿನಾಯಕ ಹೆಗಡೆ ಕಲಗದ್ದೆ (TEL:+919448756263)ಪ್ರಕಟನೆಯಲ್ಲಿ ತಿಳಿಸಿದ್ದಾರೆ.