Slide
Slide
Slide
previous arrow
next arrow

ಪ್ರಾಥಮಿಕ ಶಾಲಾ ಶಿಕ್ಷಣ ಶೈಕ್ಷಣಿಕ ಜೀವನದ ಮೊದಲ‌‌ ಮೆಟ್ಟಿಲು: ಶೈಲೇಶ್ ಪರಮಾನಂದ

300x250 AD

ದಾಂಡೇಲಿ : ಪ್ರತಿಯೊಬ್ಬರ ಬದುಕಿನಲ್ಲಿಯೂ ಪ್ರಾಥಮಿಕ ಶಾಲಾ ಶಿಕ್ಷಣ ಮಹತ್ವದ ಪಾತ್ರವನ್ನು ವಹಿಸುತ್ತದೆ. ಪ್ರಾಥಮಿಕ ಶಾಲಾ ಶಿಕ್ಷಣ ಶೈಕ್ಷಣಿಕ ಜೀವನದ ಮೊದಲ ಮೆಟ್ಟಿಲು. ಪ್ರಾಥಮಿಕ ಶಿಕ್ಷಣದಲ್ಲಿ ಕಲಿಕೆಯ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಮಾನವೀಯ ಮೌಲ್ಯಗಳನ್ನು ಕಲಿಸಿಕೊಡಲಾಗುತ್ತದೆ. ಹಾಗಾಗಿ ಪ್ರಾಥಮಿಕ ಶಾಲೆಯಲ್ಲಿ ಕಲಿತ ನೈತಿಕ ಶಿಕ್ಷಣ ಭವಿಷ್ಯದಲ್ಲಿ ನಮ್ಮೆಲ್ಲರ ಬದುಕಿನಲ್ಲಿ ಉನ್ನತ ಸಂಸ್ಕಾರಗಳನ್ನು ಮೈಗೂಡಿಸಿಕೊಳ್ಳಲು ಪ್ರೇರಣಾದಾಯಿಯಾಗಿದೆ ಎಂದು ತಹಶೀಲ್ದಾರ್ ಶೈಲೇಶ್ ಪರಮಾನಂದ ಹೇಳಿದರು.

ಅವರು ಶನಿವಾರ ನಗರದ ಅಂಬೇವಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡುತ್ತಿದ್ದರು. ಹಳೆ ವಿದ್ಯಾರ್ಥಿಗಳು ಸಂಘಟಿತರಾಗಿ ಈ ಶಾಲೆಯ ಕಾರ್ಯಕ್ರಮದ ನೇತೃತ್ವವನ್ನು ವಹಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಪೌರಾಯುಕ್ತರಾದ ಆರ್.ಎಸ್.ಪವಾರ್ ಹೆತ್ತು ಹೊತ್ತು, ಸಾಕಿ ಸಲಹಿದ ತಂದೆ – ತಾಯಿ, ಕಲಿತ ಶಾಲೆ ಮತ್ತು ಕಲಿಸಿದ ಗುರುಗಳು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಸಿಗುವ ಅಮೂಲ್ಯ ಶಕ್ತಿಗಳು. ತಂದೆ ತಾಯಿ, ಕಲಿಸಿದ ಗುರುಗಳು ಮತ್ತು ಕಲಿತ ಶಾಲೆಯನ್ನು ಸದಾ ಸ್ಮರಿಸಿ, ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ನಗರಸಭೆಯ ನಿಕಟ ಪೂರ್ವ ಉಪಾಧ್ಯಕ್ಷರಾದ ಸಂಜಯ್ ನಂದ್ಯಾಳ್ಕರ್ ಶಾಲೆಯ ಸುವರ್ಣ ಮಹೋತ್ಸವಕ್ಕೆ ಎಲ್ಲಾ ಹಳೆ ವಿದ್ಯಾರ್ಥಿಗಳು ಸಂಘಟಿತರಾಗಿ ತನು,ಮನ, ಧನದ ಸಹಾಯವನ್ನು ನೀಡಿ ಕಾರ್ಯಕ್ರಮಕ್ಕೆ ಶಕ್ತಿಯನ್ನು ತುಂಬಿದ್ದಾರೆ. ಶಾಲೆಯ ಹೆಸರಿಗೆ ಜಾಗದ ದಾಖಲಾತಿಗಳು ಆಗಬೇಕಾಗಿದೆ. ಶಾಲೆಗೆ ಅಗತ್ಯವಾಗಿ ಆವರಣ ಗೋಡೆ ನಿರ್ಮಾಣವಾಗಬೇಕು. ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಗಾಗಿ ಶಾಲೆಯನ್ನು ಆಂಗ್ಲ ಮಾಧ್ಯಮ ಶಾಲೆಯನ್ನಾಗಿ ಪರಿವರ್ತಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಶಾಸಕರಿಗೆ ಮತ್ತು ಶಿಕ್ಷಣ ಇಲಾಖೆಗೆ ಮನವಿಯನ್ನು ಮಾಡಿದರು. ನಗರಸಭೆಯ ಹಿರಿಯ ಸದಸ್ಯೆ ಯಾಸ್ಮಿನ್ ಕಿತ್ತೂರು ಹಾಗೂ ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಪ್ರಕಾಶ್ ಶೆಟ್ಟಿ, ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ವಿ.ಎಸ್. ಬಾಪುಗೌಡ ಅವರು ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.

300x250 AD

ವೇದಿಕೆಯಲ್ಲಿ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಹಿದಾ ಪಠಾಣ್, ನಗರಸಭೆಯ ನಿಕಟ ಪೂರ್ವ ಅಧ್ಯಕ್ಷೆ ಸರಸ್ವತಿ ರಜಪೂತ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ ಹಾಲಮನ್ನವರ್, ನಗರಸಭೆಯ ಸದಸ್ಯರುಗಳಾದ ಸುಧಾ ರಾಮಲಿಂಗ ಜಾಧವ್, ರುಹೀನಾ ಖತೀಬ್, ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಸುರೇಶ್ ನಾಯಕ, ಸಿ.ಆರ್.ಪಿ ಶ್ರೀದೇವಿ ಹಾಗೂ ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ ಸಂಸ್ಥಾಪಕ ಶಿಕ್ಷಕರಾದ ಚಿದಾನಂದ ರೇವಣಕರ ಪಾದಪೂಜೆಯನ್ನು ಹಳೆವಿದ್ಯಾರ್ಥಿಗಳ‌ ಮೂಲಕ ನೆರವೇರಿಸಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.‌ ಶಾಲೆಯ ಪ್ರಥಮ ವಿದ್ಯಾರ್ಥಿ ಉದ್ಯಮಿ ನಜೀರ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಸೇವೆಯನ್ನು ಸಲ್ಲಿಸಿದ ಹಾಗೂ ಸೇವೆ ಸಲ್ಲಿಸುತ್ತಿರುವ ಶಿಕ್ಷಕ, ಶಿಕ್ಷಕಿಯರನ್ನು ಹಳೆ ವಿದ್ಯಾರ್ಥಿಗಳ ಪರವಾಗಿ ಸನ್ಮಾನಿಸಲಾಯಿತು.

ಶಾಲಾ ಮುಖ್ಯೋಪಾಧ್ಯಾಯನಿ ಶಾರದಾ ಪವಾರ್ ಸ್ವಾಗತಿಸಿದರು. ಶಿಕ್ಷಕಿ ಸುಧಾ ಸಾಳೊಂಕೆ ವರದಿ ವಾಚಿಸಿದರು. ಸಿ.ಆರ್.ಪಿ ಲಲಿತಾ ಗೌಡ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಮತ್ತು ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಸರ್ವರಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top