ಸಿದ್ದಾಪುರ: ತಾಲೂಕಿನ ಬಿದ್ರಕಾನಿನ ಎಂ.ಜಿ.ಸಿ.ಎಂ. ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಹಾಗೂ ವಾರ್ಷಿಕ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು.
ಮುಂಜಾನೆ 7.45 ಕ್ಕೆ ಎಸ್‌ಎಂಡಿಸಿ ಅಧ್ಯಕ್ಷ ಎಸ್. ಎಲ್. ಹೆಗಡೆ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ವಿದ್ಯಾರ್ಥಿಗಳು ಸಂಸ್ಕಾರವನ್ನು ರೂಢಿಸಿಕೊಂಡು, ಮೌಲ್ಯಯುತವಾದ ಜೀವನ ರೂಪಿಸಿಕೊಳ್ಳಲು ತಿಳಿಸಿದರು. ಸುತ್ತಲಿನ ನೆಲ, ಪರಿಸರ ಮತ್ತು ವ್ಯವಸ್ಥೆಯ ಕುರಿತಾಗಿ ನಮಗೆ ಪ್ರೀತಿ, ವಿಶ್ವಾಸ ಇರಬೇಕು. ಜೊತೆಗೆ ಅವಕಾಶಗಳ ಸದುಪಯೋಗ ಮಾಡಿಕೊಂಡು, ಮಾರ್ಗದರ್ಶಕರ ಸಹಕಾರದೊಂದಿಗೆ ಸ್ವಪ್ರಯತ್ನದೊಂದಿಗೆ ಜೀವನದಲ್ಲಿ ಯಶಸ್ಸು ಗಳಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ಯೋಗ, ಪ್ರಾಣಾಯಾಮಗಳ ಮಹತ್ವದ ಕುರಿತು ತಿಳಿಸಿದರು.
ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಎಸ್. ಎಸ್. ಪಮ್ಮಾರ್ ಮಾತನಾಡುತ್ತಾ ದೇಶಸೇವೆಯ ಮಹತ್ವ, ಸೈನಿಕರ ತ್ಯಾಗದ ಕುರಿತು ಹೇಳಿದರು. ಸಂವಿಧಾನದ ಕುರಿತಾಗಿ ತಿಳಿಸಿದರು. ಎಲ್ಲರೂ ಸೇರಿ ಸಮಾಜವನ್ನು ಉತ್ತಮವಾಗಿ ಕಟ್ಟಬೇಕೆಂಬ ಆಶಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಿಯಾರ್ಡಿ ಸಂಸ್ಥೆಯ ಅಧ್ಯಕ್ಷ ಆರ್.ಎಸ್.ಹೆಗಡೆ, ತುಪ್ಪದ, ವಿದ್ಯಾರ್ಥಿಗಳ ಸಹಕಾರದೊಂದಿಗೆ ಶಾಲೆಯ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗುತ್ತಿವೆ. ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಪರಿಶ್ರಮದಿಂದ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿ, ಸಂಸ್ಥೆಯು ಹೆಮ್ಮೆ ಪಡುವಂತೆ ಸಾಧನೆಯನ್ನು ಮಾಡಲಿ ಎಂದು ಹಾರೈಸಿದರು.
ಆಡಳಿತ ಮಂಡಳಿಯ ಸದಸ್ಯರಾದ ಪಿ.ಡಿ.ನಾಯ್ಕ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಕರ ಮಾತುಗಳನ್ನು ಅರ್ಥೈಸಿಕೊಂಡು, ಹಿರಿಯರು ನೀಡಿದ ಸಂಸ್ಕಾರವನ್ನು ಪಾಲಿಸಿ ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕೆಂದು ತಿಳಿಸಿದರು. ಎಸ್.ಎಂ.ಡಿ.ಸಿ. ಯ ಉಪಾಧ್ಯಕ್ಷರಾದ ಡಿ. ಕೆ.ನಾಯ್ಕ ಮಾತನಾಡಿ ಮಕ್ಕಳಲ್ಲಿ ದೇಶಭಕ್ತಿಯನ್ನು ಹುಟ್ಟಿಸುವ ಕೆಲಸ ಆಗಬೇಕೆಂದು ಹೇಳಿದರು. ಉತ್ತಮವಾದ ಈ ಶಾಲಾ ಪರಿಸರದಲ್ಲಿ ಮಕ್ಕಳು ಉತ್ತಮವಾಗಿ ರೂಪುಗೊಳ್ಳಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ವಾರ್ಷಿಕ ವರದಿಯನ್ನು ಜನಾರ್ದನ ಭಟ್ಟ ವಾಚಿಸಿದರೆ, ಶೈಕ್ಷಣಿಕ ಪ್ರತಿಭಾ ಪುರಸ್ಕಾರ ವರದಿಯನ್ನು ಶ್ರೀಮತಿ ವಾಣಿ ಹೆಗಡೆ ಅವರು ನಿರ್ವಹಿಸಿದರು. ಪ್ರಸ್ತುತ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ & ಕ್ರೀಡಾ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶ್ರೀಮತಿ ವಿಜಯಲಕ್ಷ್ಮಿ ಶಿವಳ್ಳಿ, ಶ್ರೀಮತಿ ವಾಣಿ ಹೆಗಡೆ ಮತ್ತು ವಿಷ್ಣು ಎ. ಎಂ. ನಡೆಸಿಕೊಟ್ಟರು. ಧರ್ಮಸ್ಥಳ ಶಾಂತಿವನ ಟ್ರಸ್ಟ್ ಇವರು ನಡೆಸಿದ ಸ್ಪರ್ಧೆಗಳ ವಿವರವನ್ನು ನೀಲಕಂಠ ವಾಚಿಸಿದರು.
ಕಾರ್ಯಕ್ರಮದಲ್ಲಿ 2022-23 ನೇ ಸಾಲಿನಲ್ಲಿ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಿ, ಪುರಸ್ಕರಿಸಲಾಯಿತು. ಅಂತೆಯೇ ಎಂಟು ಮತ್ತು ಒಂಬತ್ತನೇ ತರಗತಿಗಳಲ್ಲಿ ಮೊದಲ ಮೂರು ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಕ್ರೀಡೆಯಲ್ಲಿ ಸಾಧನೆಯನ್ನು ಮಾಡಿದ ವಿದ್ಯಾರ್ಥಿಗಳ ಪ್ರತಿಭೆಯನ್ನು ಪುರಸ್ಕರಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರು, ಎಸ್. ಎಂ. ಡಿ. ಸಿ. ಸದಸ್ಯರು, ಊರ ನಾಗರಿಕರು, ಪಾಲಕರು, ಶಿಕ್ಷಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ನೆರವೇರಿಸಿದರು. ಮಂಜುನಾಥ ನಾಯ್ಕ ಸ್ವಾಗತಿಸಿದರೆ, ಶ್ರೀಮತಿ ಸಂಧ್ಯಾ ಶಾಸ್ತ್ರಿ ನಿರ್ವಹಿಸಿದರು.