ಶಿರಸಿ: ಹುಬ್ಬಳ್ಳಿಯ ಕೆ.ಎಲ್.ಇ. ಟೆಕ್ನಾಲಜಿಕಲ್ ಯುನಿವರ್ಸಿಟಿಯಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯದ ಇನ್ನೋವೇಷನ್ ಸೆಲ್ ಹಾಗೂ ಎಐಸಿಟಿಇ ಇವರ ಸಹಯೋಗದಲ್ಲಿ “ಐಐಸಿ-ರೀಜನಲ್ ಮೀಟ್”ಅನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಇಂಜಿನೀಯರಿಂಗ್ ಹಾಗೂ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಇನ್ನೋವೇಷನ್ ಎಕ್ಸಿಬಿಷನ್ ಸ್ಪರ್ಧೆಯಲ್ಲಿ ಶಿರಸಿಯ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳ ತಂಡವು ಪ್ರಥಮ ಸ್ಥಾನಗಳಿಸಿ ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದೆ.
ಬಿ.ಎಸ್ಸಿ. ಮೂರನೇ ಸೆಮಿಸ್ಟರಿನ ವಿದ್ಯಾರ್ಥಿಗಳಾದ ಕಾರ್ತಿಕೇಯ ಹೆಗಡೆ, ಪವನ ನಾಯ್ಕ ಹಾಗೂ ಸುಮಂತ ಹೆಗಡೆಯವರನ್ನು ಒಳಗೊಂಡ ತಂಡವು “ಪ್ರಾಪ್ತಿ” ಎಂಬ ವಿಶಿಷ್ಟವಾದ ಆ್ಯಪ್ ಅಭಿವೃದ್ಧಿಪಡಿಸಿ ಪ್ರದರ್ಶಿಸಿತ್ತು. ಆಗ್ಮೆಂಟೆಡ್ ಹಾಗೂ ವರ್ಚುವಲ್ ರಿಯಾಲಿಟಿ ತಂತ್ರದಲ್ಲಿ ಉತ್ತರಕನ್ನಡದ ಪ್ರವಾಸಿತಾಣಗಳ 3ಡಿ-ಮಾಡೆಲಿಂಗ್ ಮಾಡಿ ನೋಡುಗರಿಗೆ ಮೊಬೈಲ್ ಅಥವಾ ಕಂಪ್ಯೂಟರಿನಲ್ಲಿಯೆ ದೇವಸ್ಥಾನ/ತಾಣಗಳ ಸೂಕ್ಷ್ಮ ಸಂಗತಿಗಳನ್ನೂ ಸನಿಹದಲ್ಲೇ ಕಾಣುವಂತೆ ಇದನ್ನು ಅಭಿವೃದ್ಧಿಪಡಿಸಲಾಗಿತ್ತು. ಎಕ್ಸಿಬಿಷನ್‌ದಲ್ಲಿ ಪಾಲ್ಗೊಂಡ ಅನೇಕ ಹೂಡಿಕೆದಾರರು, ವಿವಿಧ ತಾಂತ್ರಿಕ ಕಾಲೇಜುಗಳ ನೂರಾರು ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳ ವಿಶೇಷಗಮನವನ್ನು ಸೆಳೆಯುವಲ್ಲಿ “ಪ್ರಾಪ್ತಿ”ಯು ಯಶಸ್ವಿಯಾಯಿತು. ಕಾಲೇಜಿನ ಐಐಸಿ-ಅಧ್ಯಕ್ಷರಾದ ಡಾ. ಗಣೇಶ ಎಸ್. ಹೆಗಡೆ ಈ ತಂಡವನ್ನು ಮುನ್ನಡೆಸಿದ್ದರು. ವಿದ್ಯಾರ್ಥಿ ತಂಡದ ಈ ಅಪರೂಪದ ಸಾಧನೆಗೆ ಮಹಾವಿದ್ಯಾಲಯದ, ಪ್ರಾಚಾರ್ಯರು ಹಾಗೂ ಆಡಳಿತಮಂಡಳಿ ಹರ್ಷವ್ಯಕ್ತಪಡಿಸಿದ್ದಾರೆ.