ಯಲ್ಲಾಪುರ: ಮುಂಬರುವ ಮಾಘ ಶುದ್ಧ ಪ್ರತಿಪದೆ ವಾರ್ಷಿಕ ಕಾರ್ಯಕ್ರಮದ ಆಚರಣೆಯ ನಿಮಿತ್ತ ಯಲ್ಲಾಪುರ ತಾಲೂಕಾ ಕನ್ನಡ ವೈಶ್ಯ ಸಮಾಜದ ವತಿಯಿಂದ ನಾನಾ ಸ್ಫರ್ಧಾ ಕಾರ್ಯಕ್ರಮಗಳು ಪಟ್ಟಣದ ವೆಂಕಟ್ರಮಣ ಮಠದ ಆವರಣದಲ್ಲಿ ನಡೆದವು. ಈ ನಿಮಿತ್ತ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಭಗವದ್ಗೀತಾ ಕಂಠಪಾಠ ಸ್ಫರ್ಧೆ, ರಂಗವಲ್ಲಿ ಸ್ಫರ್ಧೆ, ಪುರುಷರಿಗೆ ಹಾಗೂ ಮಕ್ಕಳಿಗೆ ಕೇರಂ ಸ್ಫರ್ಧೆ ಸೇರಿದಂತೆ ನಾನಾ ಸ್ಫರ್ಧೆಗಳು ನಡೆದವು. ಕಾರ್ಯಕ್ರಮದಲ್ಲಿ ನಿರ್ಣಾಯಕರಾಗಿ ಪಾಲ್ಗೊಂಡಿದ್ದ ಸುಜ್ಞಾನ ಸೇವಾ ಫೌಂಡೇಶನ್ ಅಧ್ಯಕ್ಷ, ಪತ್ರಕರ್ತ ಜಿ.ಎನ್.ಭಟ್ ತಟ್ಟಿಗದ್ದೆ ಮಾತನಾಡಿ, ಇಂತಹ ಸ್ಫರ್ಧಾ ಕಾರ್ಯಕ್ರಮಗಳು ಸಮಾಜದಲ್ಲಿ ಏಕತೆಗೆ ಕಾರಣವಾಗುತ್ತವೆ. ಸಮಾಜದ ಎಲ್ಲರೂ ಒಂದೆಡೆ ಸೇರಿ ಮಾದರಿಯಾದ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು. ಇನ್ನೊಬ್ಬ ನಿರ್ಣಾಯಕ, ಪತ್ರಕರ್ತ ಶ್ರೀಧರ ಅಣಲಗಾರ ಮಾತನಾಡಿ, ಪ್ರತಿ ವರ್ಷವೂ ಕನ್ನಡ ವೈಶ್ಯ ಸಮಾಜದವರು ವೈವಿಧ್ಯಮಯ ಮತ್ತು ನಮ್ಮ ಪರಂಪರೆಯ ಶ್ರೇಷ್ಠ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು. ಸಮಾಜದ ಪ್ರಮುಖ ಸಂಜೀವಕುಮಾರ್ ಹೊಸ್ಕೇರಿ ಮಾತನಾಡಿ, ನಮ್ಮ ಸಂಘವು ಸ್ಥಾಪನೆಯಾದ ನಂತರ ಸಮಾಜದ ಏಳಿಗೆಗಾಗಿ ಎಲ್ಲರ ಸಹಕಾರದೊಂದಿಗೆ ನಿರಂತರವಾಗಿ ಶ್ರಮಿಸಲಾಗುತ್ತಿದೆ. ಬೆಳ್ಳಿ ಹಬ್ಬ ಆಚರಣೆಗೆ ಸಿದ್ಧತೆ ನಡೆಸಲಾಗಿದೆ ಎಂದರು. ಮಕ್ಕಳು ಹಾಗೂ ಮಾತೆಯರು ಭಗವದ್ಗೀತೆಯ ಹತ್ತನೇ ಅಧ್ಯಾಯವನ್ನು ಪಠಿಸಿದರು.