ಯಲ್ಲಾಪುರ: ತಾಲೂಕಿನ ಶಿರನಾಲಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ‘ಸಾರ್ವಜನಿಕ ಸೌಕರ್ಯಗಳು ಮತ್ತು ನನ್ನ ಜವಾಬ್ದಾರಿ’ ಈ ವಿಷಯದ ಕುರಿತು ಅರಿವು, ಅನುಭವ ಹಾಗೂ ಅವಲೋಕನ ಮೂಡಿಸುವ ಸಂಭ್ರಮ ಶನಿವಾರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ವಿದ್ಯಾರ್ಥಿಗಳು ಸಮೀಪದ ಮಂಚಿಕೇರಿ ಪೋಲೀಸ್ ಠಾಣೆಗೆ ಭೇಟಿ ನೀಡಿದರು. ಪೊಲೀಸ್ ಸಿಬ್ಬಂದಿ ಪ್ರದೀಪ್, ಅಪರಾಧ ತಡೆಯಲು ಸೌಲಭ್ಯ ಹಾಗು ಜವಾಬ್ದಾರಿ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು. ಕೆನರಾ ಬ್ಯಾಂಕ್ ವ್ಯವಸ್ಥಾಪಕರು ಎಟಿಎಂ ಉಪಯೋಗ, ಬ್ಯಾಂಕ್ ವ್ಯವಹಾರ ಕುರಿತು ಮನವರಿಕೆ ಮಾಡಿಕೊಟ್ಟರು. ಅಂಚೆ ಕಚೇರಿಗೆ ಭೇಟಿ ನೀಡಿ, ಅಂಚೆ ವ್ಯವಹಾರಗಳ ಕುರಿತು ಮಕ್ಕಳು ಮಾಹಿತಿ ಪಡೆದರು. ಹಾಸಣಗಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿ, ಅಭಿವೃದ್ಧಿ ಅಧಿಕಾರಿ ಎಸ್.ಸಿ. ವಿರಕ್ತಮಠ್ ಸರ್ಕಾರಿ ಸೌಲಭ್ಯ ಕುರಿತು ಹಾಗೂ ನಮ್ಮ ಜವಾಬ್ದಾರಿ ಕುರಿತು ಮಾಹಿತಿ ನೀಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಆರೋಗ್ಯ ಕೇಂದ್ರದ ಕಾರ್ಯನಿರ್ವಹಣೆ ಕುರಿತು ಮಾಹಿತಿ ನೀಡಿದರು. ಶಿಕ್ಷಕರಾದ ಸುಬ್ರಹ್ಮಣ್ಯ ಭಟ್, ಸತೀಶ ಶಿವರಾಮ ಶೆಟ್ಟಿ, ಆಶಾ ಶೆಟ್ಟಿ, ಜಯಲಕ್ಷ್ಮೀ ನಾಯ್ಕ , ದಿವ್ಯಾ ಸಿದ್ದ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.