ದಾಂಡೇಲಿ: ಕಾರ್ಮಿಕ ನಗರಿಯಾಗಿರುವ ದಾಂಡೇಲಿ ನಗರಕ್ಕೆ ಅತಿ ಅವಶ್ಯವಾಗಿ ಬೇಕಾಗಿದ್ದ ಕಾರ್ಮಿಕ ಭವನವನ್ನು ಮಂಜೂರು ಮಾಡುವಂತೆ ಕಾರ್ಮಿಕ ಸಂಘಟನೆಗಳಾದಿಯಾಗಿ ವಿವಿಧ ಸಂಘಟನೆಗಳು ಸಾಕಷ್ಟು ಬಾರಿ ಮನವಿಯನ್ನು ಮಾಡಿತ್ತು. ಈ ಹೋರಾಟದ ಫಲಶೃತಿಯಾಗಿ ನಗರದಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿಯ ವತಿಯಿಂದ ಅಂದಿನ ಸಚಿವರು ಹಾಗೂ ಹಾಲಿ ಶಾಸಕರಾದ ಆರ್.ವಿ.ದೇಶಪಾಂಡೆಯವರ ವಿಶೇಷ ಪ್ರಯತ್ನದಡಿಯಲ್ಲಿ ಮಂಜೂರಾಗಿ ನಿರ್ಮಾಣಗೊಂಡು ಉದ್ಘಾಟನೆಯಾಗಿರುವ ಕಾರ್ಮಿಕ ಭವನ ಇದೀಗ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಿದೆ. ಇಲ್ಲಿ ಅವಶ್ಯಬೇಕಾದ ಎಲ್ಲ ಮೂಲಸೌಕರ್ಯಗಳನ್ನು ಈಗಾಗಲೇ ಒದಗಿಸಲಾಗಿದ್ದು, ಅತ್ಯುತ್ತಮವಾದ ಹಾಗೂ ಸುಸಜ್ಜಿತವಾದ ಸಭಾಭವನ ಒಳಗೊಂಡಿದೆ.
ದಾಂಡೇಲಿಯ ನಾಗರಿಕರು ಕಾರ್ಮಿಕ ಭವನವನ್ನು ತಮ್ಮ ಕಾರ್ಯಕ್ರಮಗಳಿಗೆ ಬಳಕೆ ಮಾಡುವ ಮೂಲಕ ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘಟನೆಯ ಅಧ್ಯಕ್ಷರಾದ ರಾಜೇಸಾಬ್ ಕೇಸನೂರು ಅವರು ಭಾನುವಾರ ನಗರದಲ್ಲಿ ಮಾಧ್ಯಮದ ಮೂಲಕ ಮನವಿಯನ್ನು ಮಾಡಿದ್ದಾರೆ. ಸಾರ್ವಜನಿಕರು ತಮ್ಮ ಸಭೆ, ಸಮಾರಂಭ, ಮದುವೆ ಇನ್ನಿತರ ಕಾರ್ಯಕ್ರಮಗಳನ್ನು ಕಾರ್ಮಿಕ ಭವನದಲ್ಲಿ ಆಯೋಜಿಸಬೇಕಾದರೆ ಕಾರ್ಮಿಕ ಭವನದ ಕಟ್ಟಡದಲ್ಲಿರುವ ಕಾರ್ಮಿಕ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದೆಂದು ರಾಜೇಸಾಬ ಕೇಸನೂರು ಅವರು ಮನವಿ ಮಾಡಿದ್ದಾರೆ.