ಸಿದ್ದಾಪುರ: ತಾಲೂಕಿನ ಬೇಡ್ಕಣಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಮಂಗಳವಾರ ಕಾಮಗಾರಿ ಆದೇಶ ವಿತರಿಸಿದರು.
ಕಾಮಗಾರಿ ಆದೇಶ ಪತ್ರ ನೀಡಿ ಮಾತನಾಡಿ, ಸೂರಿಲ್ಲದವರಿಗೆ ಸೂರು ಕಲ್ಪಿಸುವುದು ಚುನಾಯಿತ ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ಬಡವರು ಮನೆ ನಿರ್ಮಿಸಿಕೊಳ್ಳಲು ಎಲ್ಲರೂ ಸಹಕಾರ ನೀಡಬೇಕು. ಬೇಡ್ಕಣಿ ಪಂಚಾಯ್ತಿಗೆ ಬೇಕಾಗಿರುವ ಮನೆಗಳ ಯಾದಿಯನ್ನು ಕೊಟ್ಟರೆ ಸರ್ಕಾರದಿಂದ ಹೆಚ್ಚುವರಿ ಮನೆ ಮಂಜೂರಿ ಮಾಡಿಸಿಕೊಡುತ್ತೇನೆ. ಚುನಾವಣೆಯ ವೇಳೆ ನೀಡಿದ ಭರವಸೆಯಂತೆ ಅಧಿಕಾರ ವಹಿಸಿಕೊಂಡ ನೂರು ದಿನದ ಒಳಗೆ ನಾಲ್ಕು ಗ್ಯಾರೆಂಟಿಗಳನ್ನು ಇಡೇರಿಸಿದ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ. ಬೇಡ್ಕಣಿ ಪಂಚಾಯ್ತಿಯಲ್ಲಿ ಆಗಬೇಕಾದ ಕೆಲಸಗಳನ್ನು ಆದ್ಯತೆಯ ಮೇರೆಗೆ ಮಾಡೋಣ ಎಂದ ಶಾಸಕರು, ಯಾವುದೇ ಪಂಚಾಯ್ತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ. ಜತೆಗೆ ತಾಯಂದಿರು ಇಂದಿನಿಂದಲೇ ನೀರನ್ನು ಮಿತವಾಗಿ ಬಳಸಿ ಎಂದು ವಿನಂತಿಸಿದರು.
ಗ್ರಾಮ ಪಂಚಾಯ್ತಿ ಸದಸ್ಯ ಕೃಷ್ಣಮೂರ್ತಿ ಕಡಕೇರಿ ಪ್ರಾಸ್ತಾವಿಕ ಮಾತನಾಡಿ, ವಸತಿ ಯೋಜನೆ ಸೈಟ್ ಕ್ಲೋಸ್ ಆದಾಗ ಶಾಸಕ ಭೀಮಣ್ಣ ನಾಯ್ಕ ಸಂಬಂಧಪಟ್ಟ ಇಲಾಖೆಯಲ್ಲಿ ಸೈಟ್ ಓಪನ್ ಮಾಡಿಸಿ ಬಡವರ ಬಗೆಗಿನ ಕಾಳಜಿಯನ್ನು ತೋರ್ಪಡಿಸಿದ್ದಾರೆ. ಕೊಡುಗೈದಾನಿಯಾದ ಭೀಮಣ್ಣ ನಾಯ್ಕರಿಗೆ ಮತ್ತಷ್ಟು ಸಹಾಯ ಮಾಡಲು ಕ್ಷೇತ್ರದ ಜನ ಆಶೀರ್ವಾದ ಮಾಡಿದ್ದಾರೆ. ತಮ್ಮ ಅವಧಿಯಲ್ಲಿ ಬೇಡ್ಕಣಿ ಪಂಚಾಯ್ತಿಗೆ ಅತಿ ಹೆಚ್ಚು ಅನುದಾನ ಕೊಡಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಹೇಮಾವತಿ ನಾಯ್ಕ, ಸದಸ್ಯರಾದ ಈರಪ್ಪ ನಾಯ್ಕ, ಪದ್ಮಪ್ರಿಯಾ ನಾಯ್ಕ, ಬಾಬಜಾನ್ ಸಾಬ್, ಕೃಷ್ಣಮೂರ್ತಿ ಕಡಕೇರಿ, ಗೋವಿಂದ ನಾಯ್ಕ, ತಾಪಂ ಯೋಜನಾಧಿಕಾರಿ ಬಸವರಾಜ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ವಿ.ಎನ್.ನಾಯ್ಕ, ಇಟಗಿ ಗ್ರಾಪಂ ಮಾಜಿ ಅಧ್ಯಕ್ಷ ಸುರೇಂದ್ರ ಗೌಡ ಉಪಸ್ಥಿತರಿದ್ದರು. ಪಿಡಿಓ ಈರಣ್ಣ ಇಲ್ಲಾಳ ಸ್ವಾಗತಿಸಿದರು.