Slide
Slide
Slide
previous arrow
next arrow

ಭಟ್ಕಳ ಜಾಲಿ ದೇವಿನಗರ ನಾಮಫಲಕ ವಿವಾದ: ಕಾಲಾವಕಾಶ ಕೇಳಿದ ತಹಸೀಲ್ದಾರ

300x250 AD

ಸಮಸ್ಯೆ ಪರಿಹರಿಸದಿದ್ದಲ್ಲಿ ಜ.22 ರ ನಂತರ ಸಮಸ್ತ ಹಿಂದುಗಳಿಂದ ಬೃಹತ್ ಹೋರಾಟದ ಎಚ್ಚರಿಕೆ

ಭಟ್ಕಳ: ಕಳೆದ ಮೂರು ದಿನದಿಂದ ಇತ್ಯರ್ಥಗೊಳ್ಳದ ಜಾಲಿ ಪಟ್ಟಣ ಪಂಚಾಯತ ವ್ಯಾಪ್ತಿಯ ದೇವಿ‌ನಗರದ ನಾಮಫಲಕ ವಿವಾದವು ಮಂಗಳವಾರದಂದು ಮತ್ತೆ ಸ್ಥಳದಲ್ಲಿ ಜಮಾವಣೆಗೊಂಡ ಹಿಂದು ಮುಖಂಡರು ಮತ್ತು ಗ್ರಾಮಸ್ಥರು ನಾಮಫಲಕ ಅಳವಡಿಕೆಗೆ ಪೋಲೀಸರೊಂದಿಗೆ ಜಟಾಪಟಿ ಇಳಿದಿದ್ದು ಅಂತ್ಯದಲ್ಲಿ ಸ್ಥಳಕ್ಕೆ ಬಂದ ತಹಸೀಲ್ದಾರ ಎರಡು ದಿನದ ಕಾಲಾವಕಾಶ ನೀಡಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಸೂಚಿಸಿದರು.

ಕಳೆದ ಭಾನುವಾರದಿಂದ ಆರಂಭಗೊಂಡ ಜಾಲಿಯ ದೇವಿನಗರ ನಾಮಫಲಕ ಅಳವಡಿಕೆ ವಿವಾದವು ಯಾವುದೇ ತಾರ್ಕಿಕ ಅಂತ್ಯಕ್ಕೆ ಬಾರದೇ ಇರುವದರ ಹಿನ್ನೆಲೆ‌ ಸೋಮವಾರದಂದು ತಹಸೀಲ್ದಾರ ತಿಪ್ಪೇಸ್ವಾಮಿ ಹಾಗೂ ಪೋಲೀಸ್ ಇಲಾಖೆಯು ಹಿಂದು ಮುಖಂಡರಿಗೆ ಹಾಗೂ ಗ್ರಾಮಸ್ಥರಿಗೆ ಸಮಾಧಾನಪಡಿಸಿ ಸಭೆಯ ಮೂಲಕ ತೀರ್ಮಾನದ ನಿರ್ಧಾರ ತಿಳಿಸಿದ್ದರು.
ಎಂದಿನಂತೆ ಮಂಗಳವಾರದಂದು ತಾಲೂಕಾ ಆಡಳಿತ ಸೌಧದಲ್ಲಿ ತಹಸೀಲ್ದಾರ ನೇತೃತ್ವದಲ್ಲಿ ಜಾಲಿ ಪಟ್ಟಣ ಪಂಚಾಯತ ಸದಸ್ಯರನ್ನೊಳಗೊಂಡ ಸಭೆಯು ನಡೆದಿದ್ದು ಗಂಟೆಗಳ‌ ಕಾಲ‌ ನಡೆದ ಸಭೆಯಲ್ಲಿ ಯಥಾಸ್ಥಿತಿ ಕಾಪಾಡಿಕೊಂಡು ಹೋಗುವಂತೆ ನಿರ್ಧಾರ ತೆಗೆದುಕೊಂಡಿರುವುದು ತಿಳಿದು ಬಂದಿದೆ. ಅತ್ತ ದೇವಿನಗರ ವಾರ್ಡ್ ಸದಸ್ಯ ದಯಾ ನಾಯ್ಕ ಸಭೆಯಲ್ಲಿ ಗೈರು ಹಾಜರಾಗಿದ್ದು ದೇವಿ‌ನಗರ ನಾಮ ಫಲಕ ಅಳವಡಿಕೆಯ ಸ್ಥಳದಲ್ಲಿ ಮುಖ್ಯಾಧಿಕಾರಿಗಳ ನಡೆಯ ವಿರುದ್ದ ಗ್ರಾಮಸ್ಥರು, ಹಿಂದು ಮುಖಂಡರೊಂದಿಗೆ ನಾಮಫಲಕ ಅಳವಡಿಕೆಯ ಪ್ರತಿಭಟನೆಯ ಮುಂದಾಳತ್ವ ತೆಗೆದುಕೊಂಡಿದ್ದರು.

ಮೂರನೇ ದಿನವಾದ ಮಂಗಳವಾರದಂದು ಹಿಂದು ಮುಖಂಡರ, ಗ್ರಾಮಸ್ಥರ ಪ್ರತಿಭಟನೆಯು ಜೋರಾಗಿದ್ದು ಪರಿಸ್ಥಿತಿಯು ವಿಕೋಪಕ್ಕೆ ತೆರಳದಂತೆ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ.ಜಯಕುಮಾರ ನೇತೃತ್ವದ ಪೋಲಿಸ್ ತಂಡ ಬಂದಿದ್ದು, ಪ್ರತಿಭಟನಾನಿರತ ಹಿಂದು ಮುಖಂಡರೊಂದಿಗೆ ಮಾತುಕತೆ ನಡೆಸಿದರು.

ಒಂದೂವರೆ ಗಂಟೆಗೂ ಹೆಚ್ಚು ಕಾಲ ಪೋಲೀಸರಿಗೂ ಮತ್ತು ಪ್ರತಿಭಟನಾ ನಿರತ ಹಿಂದು ಮುಖಂಡರ ನಡುವೆ ಮಾತಿನ ಜಟಾಪಟಿ ನಡೆಯಿತು. ನಾಮಫಲಕ ಅಳವಡಿಕೆಗೆ ಪೋಲಿಸರು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರೆ ಯಾವ ಕಾರಣಕ್ಕೆ ಹಳೆಯ ನಾಮಫಲಕದ ಜಾಗದಲ್ಲಿ ಹೊಸ ನಾಮಫಲಕ ಅಳವಡಿಕೆಗೆ ಅವಕಾಶ ಎಂದು ಭಾರಿ ದೊಡ್ಡ ವಾಗ್ವಾದವೇ ನಡೆಯಿತು.

ಅಂತ್ಯದಲ್ಲಿ ತಹಶೀಲ್ದಾರ ತಿಪ್ಪೇಸ್ವಾಮಿ ಸ್ಥಳಕ್ಕೆ ಬಂದು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಮಾತನಾಡಿ ಎರಡು ದಿನ ಕಾಲಾವಕಾಶ ಕೇಳಿ ಮತ್ತು ಈ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ನಾಮಫಲಕ ನಿಲ್ಲಿಸುವ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಪ್ರತಿಭಟನಾಕಾರರಿಂದ ಪತ್ರಿಕಾಗೋಷ್ಠಿ :

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಮಂಡಲಾಧ್ಯಕ್ಷ ಅಧ್ಯಕ್ಷ ಸುಬ್ರಾಯ ದೇವಾಡಿಗ ಜಾಲಿಯ ದೇವಿ ನಗರದಲ್ಲಿ ಕಳೆದ 40 ವರ್ಷದಿಂದ ದೇವಿನಗರ ಎಂಬ ನಾಮಫಲಕವಿತ್ತು. ಆ ಬೋರ್ಡ್ ಗೆ ಗ್ರಾಮಸ್ಥರು ಪ್ರತಿ ವರ್ಷ ಬಣ್ಣ ಹಚ್ಚುತ್ತಿದ್ದು ಈ ವರ್ಷವೂ ಕೂಡ ಅದೇ ರೀತಿ ಬಣ್ಣ ಹಚ್ಚಲಾಗುತ್ತಿತ್ತು. ಆ ಬೋರ್ಡು ತುಂಬಾ ಚಿಕ್ಕದಾಗಿದ್ದರಿಂದ ಎತ್ತರದಲ್ಲಿ ಕಾಣಬೇಕು ಎನ್ನುವ ದೃಷ್ಟಿಯಿಂದ ಅಲ್ಲೇ ಪಕ್ಕದಲ್ಲಿ ಕಬ್ಬಿಣದ ಇನ್ನೊಂದು ಬೋರ್ಡನ್ನು ಮಾಡಿ ನಿಲ್ಲಿಸಲಾಗಿತ್ತು ಆದರೆ ಹೆಸರನ್ನು ಬರೆದಿರಲಿಲ್ಲ. ಪಟ್ಟಣ ಪಂಚಾಯತಿ ಅಧಿಕಾರಿಗಳು ಯಾರದೋ ಸೂಚನೆಯ ಮೇರೆಗೆ ಅಥವಾ ಅನ್ಯಕೋಮಿನ ಒತ್ತಡದಿಂದ ಯಾವುದೇ ಬೋರ್ಡು ಬರೆಯದಿದ್ದರೂ ಸಹ ಪಟ್ಟಣ ಪಂಚಾಯಿತಿ ಸದಸ್ಯರಿಗೆ ಮಾಹಿತಿಯನ್ನು ಸಹ ನೀಡದೇ ರಾತ್ರೋರಾತ್ರಿ ಹಾಕಿದ್ದ ಬೋರ್ಡನ್ನು ತೆಗೆದು ಪ್ರಕ್ಷುಬ್ದವಾದ ವಾತಾವರಣ ನಿರ್ಮಾಣ ಮಾಡಿದ್ದಾರೆ.

ಈ ಹಿಂದೆ ಜಾಲಿ ಪಟ್ಟಣ ಪಂಚಾಯತಿಯಲ್ಲಿ ಎಷ್ಟು ಅನಧೀಕೃತ ಬೋರ್ಡ್ ಗಳಿದ್ದವು ಆ ಬಗ್ಗೆ ಕ್ರಮ ಕೈಗೊಳ್ಳಲು ಗ್ರಾಮಸ್ಥರು ಮನವಿ ನೀಡಿದ್ದರೂ ಸಹ ಆ ಅರ್ಜಿಯನ್ನು ಧೂಳು ಹಿಡಿಯುವಂತೆ ಮಾಡಿದ್ದಾರೆ. ಇದೀಗ ಕಂಬವನ್ನು ತೆಗೆದು ಹಿಂದುಗಳ ಭಾವನೆಗೆ ದಕ್ಕೆ ತರುವಂತಹ ಕೆಲಸ ಮಾಡಿದ್ದಾರೆ.

ಮಂಗಳವಾರದಂದು ಈ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ಹೇಳಿ ಈ ದಿನ ಸ್ಥಳಕ್ಕೆ ಬಾರದೆ ಎಲ್ಲೋ ಕೂತುಕೊಂಡು ಅಲ್ಲಿ ಬನ್ನಿ ಇಲ್ಲಿ ಬನ್ನಿ ಎಂದು ಪಂಚಾಯತ ಸದಸ್ಯ ದಯಾ ನಾಯ್ಕ ಅವರಿಗೆ ಹೇಳಿದ್ದು ಇದರ ಹಿಂದೆ ಯಾರ ಕೈವಾಡವಿದೆ ಎಂದು ನಮಗೆ ಗೊತ್ತಿಲ್ಲ ಆದರೆ ಆಳುವ ವರ್ಗದ ಕೈವಾಡವಿರುವುದಂತು ಸ್ಪಷ್ಟವಾಗಿದೆ. ಏಕೆಂದರೆ ಇದೊಂದು ಚಿಕ್ಕ ಸಮಸ್ಯೆ ಯಾವುದೋ ದೊಡ್ಡ ಬಾಂಬ್ ಬ್ಲಾಸ್ಟ್ ಆದಾಗ ಭದ್ರತೆ ಮಾಡುವಂತೆ ನಮಗಿಂತ ಹೆಚ್ಚು ಪೊಲೀಸರನ್ನು ತಂದು ನಿಲ್ಲಿಸಿದ್ದಾರೆ.

ಮೂರು ಡಿವೈಎಸ್ಪಿ ಒಂದು ಅಡಿಷನಲ್ ಎಸ್ಪಿ ಸಿಪಿಐ ಮತ್ತು ಪಿಎಸ್ಐ ಗಳು ಹಾಗೂ ನೂರಾರು ಪೊಲೀಸರನ್ನು ತಂದು ನಿಲ್ಲಿಸಿದ್ದಾರೆ ಇಷ್ಟೊಂದು ಪೊಲೀಸರನ್ನು ನೇಮಿಸಲು ಇಲ್ಲೇನು ಕರ್ಪ್ಯೂ ಹಾಕಿದ್ದಾರೆಯೇ, ಇಲ್ಲಿ ಸರ್ಕಾರದ ಸಚಿವರ ಒತ್ತಡಕ್ಕೆ ಮಣಿದು ಇಲ್ಲಿ ಆಳುವವರಿಗೆ ಕೆಲಸ ಮಾಡುತ್ತಿದ್ದಾರೆ ಎಂದು ನಮಗೆ ಕಂಡು ಬರುತ್ತಿದೆ.

300x250 AD

ತಹಶೀಲ್ದಾರರು ನಮಗೆ ಎರಡು ದಿವಸದ ಕಾಲಾವಕಾಶವನ್ನು ಕೇಳಿದ್ದಾರೆ. ಬೋರ್ಡ್ ನ ವಿಷಯವನ್ನು ನಾವು ಜಿಲ್ಲಾಧಿಕಾರಿಗಳಿಗೆ ಮಾತನಾಡಿ ಇತ್ಯರ್ಥ ಮಾಡಿ ಎರಡು ದಿವಸದೊಳಗೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ. ಜ.22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪನೆಯ ಕಾರಣ ನಾವು ತಾತ್ಕಾಲಿಕವಾಗಿ ನಮ್ಮ ಪ್ರತಿಭಟನೆಯನ್ನು ಹಿಂಪಡೆದುಕೊಳ್ಳುತ್ತಿದ್ದೇವೆ. ಜ.22 ನಂತರ ಏನೂ ಕ್ರಮ ಕೈಗೊಳ್ಳದಿದ್ದರೆ ನಾವು ಭಟ್ಕಳ ತಾಲೂಕಿನ ಎಲ್ಲಾ ಹಿಂದುಗಳು ದೇವಿ ನಗರ ಗ್ರಾಮದವರಿಗೆ ಬೆಂಬಲ ನೀಡಿ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ ಈ ಬೋರ್ಡಿನ ವಿಷಯ ಇತ್ಯರ್ಥ ಪಡಿಸುವುದು ತಹಶೀಲ್ದಾರರ ಜವಾಬ್ದಾರಿಯಾಗಿದೆ ಎಂದರು.

ಹಿರಿಯ ಬಿಜೆಪಿ ಮುಖಂಡ ಕೃಷ್ಣ ನಾಯ್ಕ ಮಾತನಾಡಿ ‘ದೇವಿ ನಗರದಲ್ಲಿ ಬೋರ್ಡ್ ವಿಷಯವಾಗಿ ಒಂದು ಭಯದ ವಾತಾವರಣ ಉಂಟಾಗಿತ್ತು. ಇಲ್ಲಿ ಸೇರಿದ ಅಧಿಕಾರಿಗಳು ಮತ್ತು ತಹಶೀಲ್ದಾರರು ಬಂದು ನಾಳೆ 9 ಗಂಟೆಯವರೆಗೂ ನಮಗೆ ಕಾಲಾವಕಾಶ ಕೊಡಿ ಈ ವಿಷಯವನ್ನು ಇತ್ಯರ್ಥಪಡಿಸುತ್ತೇವೆ ಎಂದು ಹೇಳಿದ್ದರು. ಈ ಪ್ರಕಾರವಾಗಿ ನಾವು ಕಾನೂನಿಗೆ ಬೆಲೆ ಕೊಡಬೇಕು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಇಲ್ಲಿ ಎಲ್ಲಾ ಯುವಕರ ಮನವನ್ನು ಒಲಿಸಿ ಪ್ರತಿಭಟನೆಯನ್ನು ನಿನ್ನೆ ದಿನ ಹಿಂದಕ್ಕೆ ಪಡೆದಾಗಿತ್ತು. ಬೆಳಿಗ್ಗೆ ಅಧಿಕಾರಿಗಳನ್ನು ಸಂಪರ್ಕ ಮಾಡಿ ಮಾತನಾಡಿದಾಗ ವಿಷಯ ಬೇರೆ ಇತ್ತು ಒಂದು ಬೋರ್ಡ್ ಅಲ್ಲವೇ ಅದನ್ನು ಹಾಕಿಕೊಳ್ಳಿ ಎಂದು ತಿಳಿಸಿದ್ದು ತಾಲೂಕು ಆಡಳಿತ ಸೌಧದಲ್ಲಿ ನಡೆದ ಸಭೆಯ ಬಳಿಕವೋ ಅಥವಾ ಬೇರೆ ಏನಾದರು ಬೆಳವಣಿಗೆ ಆಗಿದೆಯೋ ಗೊತ್ತಿಲ್ಲ ಎಲ್ಲ ಬದಲಾವಣೆಯಾಗಿ ಅಲ್ಲಿ ಬೋರ್ಡ್ ಹಾಕಬಾರದು ಎಂದು ಹೇಳಿದರು.

ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿ ಹಾಗೂ ಪುರಸಭೆಯ ವ್ಯಾಪ್ತಿ ಶೇಕಡ 80ರಷ್ಟು ಫಾರೆಸ್ಟ್ ಲ್ಯಾಂಡ್ ಅಂತ ನಮಗೆ ಗೊತ್ತಿದೆ ಆ ಕಾನೂನಿನ ಬಗ್ಗೆ ನಮಗೆ ತಿಳುವಳಿಕೆ ಇದೆ. ಈಗ ನಾವು ಜಾಲಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಎಷ್ಟು ಅನಧೀಕೃತ ಕಟ್ಟಡಗಳಿಗೆ ಇಲ್ಲಿ ಸಿಆರ್ ಝಡ್ ನಿಯಮದ ಪ್ರಕಾರ ಅಂತಸ್ತಿನ ಕಟ್ಟಡವನ್ನು ಕಟ್ಟಲು ಪರವಾನಿಗೆ ನೀಡುವುದಿಲ್ಲ. ಮೂರು ಅಂತಸ್ತಿಕ್ಕಿಂತ ಹೆಚ್ಚಿರುವ ಮಾಹಿತಿ ತೆಗೆದುಕೊಂಡು ಸರ್ಕಾರಕ್ಕೆ ಹಾಕಿ ನಮ್ಮ ಬೋರ್ಡಿಗೆ ವಿರೋಧ ಪಡಿಸಿದರೆ ಎಲ್ಲಾ ಅನಧಿಕೃತ ಕಟ್ಟಡಗಳನ್ನು ತೆಗೆಯುವಂತೆ ನಾವು ಮುಂದಿನ ದಿನದಲ್ಲಿ ಒತ್ತಡ ಹಾಕಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಬಿಜೆಪಿ ಪಕ್ಷದ ಸೈನಿಕ ಪ್ರಕೋಷ್ಠ ತಾಲೂಕು ಅಧ್ಯಕ್ಷ ಶ್ರೀಕಾಂತ್ ನಾಯ್ಕ ಮಾತನಾಡಿ ‘ ಈ ದಿನ ನಮಗೆ ಆದಂತಹ ಹತಾಶೆ ಭಾವನೆ ಇನ್ನು ಮುಂದಿನ ದಿನಗಳಲ್ಲಿ ಆಗಬಹುದು. ಕಾನೂನಿನ ಪ್ರಕಾರ ಏನೇನು ಅವಕಾಶವಿದೆಯೋ ನಾವು ಮಾಹಿತಿಯನ್ನು ಕೇಳಿ ಪಡೆಯಬೇಕು. 2011ರಲ್ಲಿ ನೀಡಿದ ಮನವಿಗೆ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.
ನೀಡಿದ ಎಲ್ಲಾ ಮನವಿಗೆ ಅಧಿಕಾರಿಗಳು ಏಕಪಕ್ಷಿಯವಾಗಿ ನಿರ್ಧಾರ ಮಾಡುತ್ತಿದ್ದಾರೆ. ನಮ್ಮ ಭಾವನೆಗೆ ಯಾವುದೇ ಬೆಲೆ ಇಲ್ಲದಂತಾಗಿದೆ.

ಈ ಎಲ್ಲಾ ಘಟನೆಗೆ ಜಿಲ್ಲಾ ಉಸ್ತುವಾರಿ ಸಚಿವರು ಪ್ರಕರಣವನ್ನು ಸರಳವಾಗಿ ಪರಿಹರಿಸಬಹುದು. ಅವರ ಗೆಲುವಿಗೆ ನಮ್ಮ ಸಮುದಾಯವು ಮತ ಹಾಕಿ ಎಂದು ಹೇಳಿದ ಅವರು ಕಾರವಾರ, ದಾಂಡೇಲಿ ಮುಂತಾದ ಕಡೆಗಳಿಂದ ಪೊಲೀಸರನ್ನು ಕರೆಸಿ ರಾಧಾಂತ ಸೃಷ್ಟಿಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಒಂದು ಬೋರ್ಡ್ ವಿಷಯವಾಗಿ ವಿವಾದ ಸೃಷ್ಟಿಸಿದ್ದಾರೆ. ಸಾವಿರಾರು ಬೋರ್ಡ್ ಗಳಿದ್ದರು ಈ ಬೋರ್ಡಿಗೆ ಮಾತ್ರ ಯಾಕೆ ಪ್ರಶ್ನೆ ಮಾಡುತ್ತೀರಾ ಉದ್ದೇಶ ಇಷ್ಟೇ ನಿಮಗೆ ಬೇರೆ ಕಡೆಗಳಿಂದ ಒತ್ತಡ ಬಂದಿದೆ ಆ ಕಾರಣದಿಂದ ನಮ್ಮ ದೇವಿನಗರಕ್ಕೆ ಬೋರ್ಡ್ ಹಾಕುವುದನ್ನು ತಡೆಯುತ್ತಿದ್ದೀರಾ ಇದನ್ನು ರಾಜಕೀಯವಾಗಿ ತೆಗೆದುಕೊಂಡು ರಾಜಕೀಯ ಮಾಡುತ್ತಿದ್ದೀರಾ ಮತ್ತು ಒಂದು ಕೋಮಿನವರಿಗೆ ಖುಷಿ ಪಡಿಸಲು ಹೊರಟಿದ್ದೀರಾ ಮುಂದಿನ ದಿನ ನಮ್ಮ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದ್ದರಿಂದ ನೀವು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಕೆ :

ಪತ್ರಿಕಾಗೋಷ್ಠಿಯ ನಂತರ ಪ್ರತಿಭಟನಾಕಾರರು ಸೇರಿ ಜಾಲಿ ಪಟ್ಟಣ ಪಂಚಾಯತ್ ಹೋಗಿ ಮದರಸಾ ಉದ್ದೇಶಕ್ಕಾಗಿ ಕಟ್ಟಡ ಪರವಾನಿಗೆ ಪಡೆದು ಮಕ್ಕ ಜುಮ್ಮಾ ಮಸೀದಿಯಾಗಿ ಪರಿವರ್ತಿಸಿ ಅನಧಿಕೃತವಾಗಿ ಮಸೀದಿ ನಿರ್ಮಾಣ ಮಾಡಿರುವುದನ್ನು ತೆರವುಗೊಳಿಸುವ ಕುರಿತು ಎಂದು ಜಾಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಎನ್ ಮಂಜಪ್ಪ ಅವರಿಗೆ ಮನವಿ ನೀಡಿದರು.

ಈ ಸಂದರ್ಭದಲ್ಲಿ ಜಾಲಿ ಪಟ್ಟಣ ಪಂಚಾಯತ ಸದಸ್ಯ ದಯಾ ನಾಯ್ಕ, ಹಿಂದು ಕಾರ್ಯಕರ್ತರಾದ ರಾಘವೇಂದ್ರ ನಾಯ್ಕ, ಶ್ರೀನಿವಾಸ ನಾಯ್ಕ ಮುಂತಾದವರು ಇದ್ದರು.

Share This
300x250 AD
300x250 AD
300x250 AD
Back to top