ದಾಂಡೇಲಿ: ನಗರಸಭೆಯ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಲಿರುವ ಅಂಬೇಡ್ಕರ್ ಮೂರ್ತಿಯನ್ನು ದಾಂಡೇಲಿ ನಗರಕ್ಕೆ ಮೆರವಣಿಗೆಯ ಮೂಲಕ ತರುವುದರ ಬಗ್ಗೆ ಪೂರ್ವಭಾವಿ ಸಭೆಯು ನಗರದ ಅಂಬೆವಾಡಿಯಲ್ಲಿರುವ ತಾಲೂಕು ಆಡಳಿತ ಸೌಧದಲ್ಲಿ ತಹಶೀಲ್ದಾರ್ ಶೈಲೇಶ್ ಪರಮಾನಂದ ಅಧ್ಯಕ್ಷತೆಯಲ್ಲಿ ಬುಧವಾರ ಜರುಗಿತು.
ನಗರಸಭೆಯ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಲಿರುವ ಸಂವಿಧಾನ ಶಿಲ್ಪಿ ಡಾ:ಬಿ.ಆರ್.ಅಂಬೇಡ್ಕರ್ ಮೂರ್ತಿಯನ್ನು ನಗರಕ್ಕೆ ಅದ್ದೂರಿ ಮೆರವಣಿಗೆ ಮೂಲಕ ತರುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಯಿತು. ಅಂಬೇಡ್ಕರ್ ಅವರ ಮೂರ್ತಿಯನ್ನು ಜನವರಿ 26ರ ಬದಲಿಗೆ ಪ್ರತ್ಯೇಕ ದಿನದಂದು ನಗರಕ್ಕೆ ತರುವ ಬಗ್ಗೆ ಚರ್ಚಿಸಿ, ಈ ಬಗ್ಗೆ ಶಾಸಕರೊಂದಿಗೆ ಚರ್ಚೆ ನಡೆಸಿ ದಿನಾಂಕವನ್ನು ನಿಗದಿಪಡಿಸುವುದಾಗಿ ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಹಿದಾ ಪಠಾಣ್, ಪೌರಾಯುಕ್ತರಾದ ಆರ್.ಎಸ್.ಪವಾರ್, ಸಿಪಿಐ ಭೀಮಣ್ಣ.ಎಂ.ಸೂರಿ, ನಗರಸಭೆಯ ನಿಕಟ ಪೂರ್ವ ಅಧ್ಯಕ್ಷೆ ಸರಸ್ವತಿ ರಜಪೂತ್, ನಿಕಟ ಪೂರ್ವ ಉಪಾಧ್ಯಕ್ಷ ಸಂಜಯ್ ನಂದ್ಯಾಳ್ಕರ್, ಪಿಎಸ್ಐ ಐ.ಆರ್.ಗಡ್ಡೇಕರ್, ವಲಯಾರಣ್ಯಾಧಿಕಾರಿ ಅಪ್ಪರಾವ್ ಕಲಶೆಟ್ಟಿ, ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ದೀಪಕ್ ನಾಯಕ, ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ, ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನಾ ಸಮಿತಿಯ ಅಧ್ಯಕ್ಷರಾದ ರಾಜಶೇಖರ್.ಐ.ಹೆಚ್, ಗ್ರೀನ್ ಇಂಡಿಯಾ ಸಂಸ್ಥೆಯ ನಿರ್ದೇಶಕ ಡಾ.ಬಿ.ಪಿ.ಮಹೇಂದ್ರಕುಮಾರ್, ಹಿರಿಯ ಪತ್ರಕರ್ತ ಯು.ಎಸ್.ಪಾಟೀಲ್, ನಗರ ಸಭೆಯ ಸದಸ್ಯರು, ದಲಿತಪರ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಶಾಲಾ ಕಾಲೇಜುಗಳ ಮುಖ್ಯಸ್ಥರು, ಶಿಕ್ಷಕರು, ಎ.ಆರ್.ಟಿ.ಓ, ನಗರಸಭೆ ಮತ್ತು ತಾಲೂಕಾಡಳಿತ, ನಗರ ಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.